ಅತಿ ಶೀಘ್ರದಲ್ಲಿ... ಬರಲಿದೆ; ಲವ್ ಕಂ ಹಾರರ್ ಸಿನಿಮಾ

athi Sheeghra
Published on

ಬೆಂಗಳೂರು: ಹೊಸಬರು ಏನಾದರೊಂದು ಹೊಸ ವಿಷಯದ ಮೇಲೆ ಕಥೆ ಹೆಣೆದು, ಸಿನಿಮಾ ಮಾಡೋದು ಹೊಸದೇನಲ್ಲ. ಈ ಹೊಸ ಪ್ರಯತ್ನಗಳ ಮೂಲಕವೇ ಹಲವರು ಗಾಂಧಿನಗರದ ಗಮನಸೆಳೆದಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ, ರಘು ಕೆಪಿ. ಇವರ ಚೊಚ್ಚಲ ನಿರ್ದೇಶನದ ಚಿತ್ರದ ಹೆಸರು, ‘ಅತಿ ಶೀಘ್ರದಲ್ಲಿ’. ಲವ್ ಕಂ ಹಾರರ್ ಶೈಲಿಯ ಈ ಚಿತ್ರದಲ್ಲಿ ಮೆಡಿಕಲ್ ಮಾಫಿಯಾದ ಬಗ್ಗೆ ಗಮನಸೆಳೆದಿರುವುದು ವಿಶೇಷತೆ. ಗಡ್ಡ ವಿಜಿ ನಿರ್ದೇಶನದ ‘ಪ್ಲಸ್’ ಬಿಟ್ಟರೆ, ‘ಅತಿ ಶೀಘ್ರದಲ್ಲಿ’ ಚಿತ್ರದಲ್ಲಿ ಔಷಧೀಯ ಜಗತ್ತಿನ ಕರಾಳ ಪ್ರಪಂಚದ ಮೇಲೆ ಬೆಳಕು ಚೆಲ್ಲಲಾಗಿದೆ. ಅಂದಹಾಗೆ, ಬೆಂಗಳೂರಿನ ಸುಮನಹಳ್ಳಿಯಲ್ಲಿ ನಡೆದ ನೈಜಘಟನೆಯೊಂದು ಚಿತ್ರಕ್ಕೆ ಪ್ರೇರಣೆಯಂತೆ!

ಅದಾಗಲೇ ಒಂದೆರಡು ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರಿಗೆ ಚಿರಪರಿಚಿತ ಮುಖವಾಗಿರುವ ರಘು ರಂಜನ್, ‘ಅತಿ ಶೀಘ್ರದಲ್ಲಿ’ ಹೀರೋ ಆದರೆ, ನವನಟಿ ಮಾನಸಾ ನಾಯಕಿಯಾಗಿದ್ದಾರೆ. ‘ದುನಿಯಾ’ ರಶ್ಮಿ ಈ ಚಿತ್ರದಲ್ಲಿ ನ್ಯೂಸ್ ಚಾನೆಲ್​ವೊಂದರ ಒಡತಿ ಎನ್ನುವುದು ವಿಶೇಷ. ಮಿಕ್ಕಂತೆ ಮಾಸ್ಟರ್ ಅಗಸ್ಱ, ಕಜಿನಿ ಗೌಡ, ಶ್ರೀಕಾಂತ್ ಹೊನ್ನವಳ್ಳಿ, ಸುಷ್ಮಿತಾ ಶೆಟ್ಟಿ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

ರಾಗ ರಮಣ ಸಂಗೀತ ನಿರ್ದೇಶನಕ್ಕೆ ಸಾಹಿತಿ ದೊಡ್ಡರಂಗೇಗೌಡ ಒಂದು ಹಾಡು ಬರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಹಸಿರುತಾಣಗಳಲ್ಲೇ ಸಿನಿಮಾದ ಫೂರ್ತಿ ಚಿತ್ರೀಕರಣವಾಗಿದೆ. ಸೂರತ್ಕಲ್ ಹಾಗೂ ಬೀಚ್​ನಲ್ಲಿ ಹಾಡುಗಳ ಶೂಟ್ ನಡೆದಿದೆ. ಸದ್ಯಕ್ಕೆ ಚಿತ್ರೀಕರಣೋತ್ತರ ಕೆಲಸಗಳು ಪ್ರಗತಿಯಲ್ಲಿದ್ದು, ಚಿತ್ರಕ್ಕೆ ಟಿ.ವೆಂಕಟಾಚಲಯ್ಯ ನಿರ್ಮಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net