

ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ರಾಮಾ ರಾಮಾ ರೇ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಡೆಬ್ಯೂ ಮಾಡಿದ ನಟ ಧರ್ಮಣ್ಣ ಕಡೂರು. ಬಳಿಕ ‘ಅಂಜನೀಪುತ್ರ’, ‘ಮ್ಯಾನ್ ಆ್ ದಿ ಮ್ಯಾಚ್’, ‘ಸಖತ್’, ‘ಮದಗಜ’ ಸೇರಿ 20ಕ್ಕೂ ಅಧಿಕ ಚಿತ್ರಗಳಲ್ಲಿ ಹಾಸ್ಯನಟನಾಗಿ, ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅದರ ನಡುವೆಯೇ ಅವರು ಲಿಂಗರಾಜು ನಿರ್ದೇಶನದ ‘ರಾಜಯೋಗ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ವಿಶೇಷ ಅಂದರೆ ಇತ್ತೀಚೆಗಷ್ಟೆ ‘ರಾಜಯೋಗ’ 25 ದಿನಗಳನ್ನು ಪೂರೈಸಿದ್ದು, ನಟ ಧರ್ಮಣ್ಣ ಯೋಗವನ್ನೂ ಬದಲಿಸಿದೆ. ‘ಜನ ಹೆಚ್ಚು ಗುರುತಿಸುತ್ತಿದ್ದಾರೆ. ಒಳ್ಳೆಯ ಕಥೆಗಳು, ಉತ್ತಮ ಕಂಟೆಂಟ್‌ಗಳು ಬರುತ್ತಿವೆ. ನಾನೊಬ್ಬ ಹಾಸ್ಯನಟ ಅಂತ ಗೊತ್ತಿತ್ತು, ಈಗ ಭಾವನಾತ್ಮಕವಾಗಿಯೂ ಚೆನ್ನಾಗಿ ನಟಿಸುತ್ತಾರೆ ಅಂತ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಜತೆಗೆ ಎರಡು, ಮೂರು ಹೀರೋ ಅವಕಾಶಗಳು ಬಂದಿವೆ’ ಎಂದು ಮಾಹಿತಿ ನೀಡುತ್ತಾರೆ ಧರ್ಮಣ್ಣ.
ಹಬ್ಬಕ್ಕೆ ಹೀರೋ, ಪ್ರತಿದಿನ ಚಿತ್ರಾನ್ನ
ನಾಯಕನಾಗಿ ನಟಿಸಿದ್ದರೂ ಧರ್ಮಣ್ಣ, ಮತ್ತೆ ನಾಯಕನಾಗಿಯೇ ನಟಿಬೇಕು ಅಂತೇನಿಲ್ಲ. ‘ಮೊದಲು ನಾನೊಬ್ಬ ನಟ. ಹಾಸ್ಯನಟನಾಗಿ ಗುರುತಿಸುತ್ತಾರೆ. ಹೀಗಾಗಿ ಕಾಮಿಡಿ ಪಾತ್ರಗಳು ನನಗೆ ಪ್ರತಿದಿನದ ಮುದ್ದೆ, ಚಿತ್ರಾನ್ನದಂತೆ. ಹಾಗಂತ ನಾಯಕನಾಗಿ ನಟಿಸುವುದಿಲ್ಲ ಅಂತಲ್ಲ. ಹಬ್ಬಹರಿದಿನಗಳ ಹೋಳಿಗೆಯಂತೆ. ಕಥೆ ಇಷ್ಟವಾದರೆ, ಪಾತ್ರಕ್ಕೆ ನಾನು ಸೂಟ್ ಆದರೆ ನಟಿಸುತ್ತೇನೆ’ ಎಂದು ನಗುತ್ತಾರೆ ಧರ್ಮಣ್ಣ.
ಮೊದಲ ಬಾರಿಗೆ ಮಾಸ್!
ಸದ್ಯ ಧರ್ಮಣ್ಣ ಕಿರಣ್ ರಾಜ್ ನಾಯಕನಾಗಿರುವ, ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿರುವ ‘ರಾನಿ’ ಹಾಗೂ ‘ಜಾಗಟೆ ಜನ್‌ಸೆಟ್ಸ್’ ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘‘ರಾನಿ’ ಚಿತ್ರದಲ್ಲಿ ನಾನು ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ವಿಶೇಷ ಅಂದರೆ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಮೊದಲ ಬಾರಿಗೆ ಮಾಸ್ ಲುಕ್‌ನಲ್ಲೂ ನನ್ನನ್ನು ನೋಡಬಹುದು. ‘ಜಾಗಟೆ ಜನ್‌ಸೆಟ್ಸ್’ ಚಿತ್ರದಲ್ಲೂ ನನಗೆ ಎಲ್ಲವೂ ಗೊತ್ತು ಅಂದು ಬೀಗುವ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.