

ಬೆಂಗಳೂರು: ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು, ತಮ್ಮ ಅದ್ಭುತ ಅಭಿನಯದ ಮೂಲಕ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿರುವ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ( Keerthy Suresh ) ಇದೀಗ ವೆಬ್ ಸರಣಿಯೊಂದರ ಮೂಲಕ ಒಟಿಟಿ (OTT) ಅಂಗಳಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿರುವ 'ಅಕ್ಕ' (Akka) ಎಂಬ ವೆಬ್ ಸರಣಿಯ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ನಟಿ ಕೀರ್ತಿ ಸುರೇಶ್ ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಸಹನಟಿ ರಾಧಿಕಾ ಆಪ್ಟೆ ಅವರೊಂದಿಗೆ ನಡೆದ ಸಂದರ್ಶನದ ವೇಳೆ ಕೀರ್ತಿ ಸುರೇಶ್, ತಮ್ಮ ವೆಬ್ ಸರಣಿಯ ಸಹನಟ ವಿಶಾಖ್ ನಾಯರ್ ತಮ್ಮ ಸ್ವಂತ ಸಂಬಂಧಿ (Cousin) ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ವಿಶಾಖ್ ತಮ್ಮ ಸೆಕೆಂಡ್ ಕಸಿನ್ ಆಗಿದ್ದು, ಅವರೊಂದಿಗೆ ತೆರೆಮೇಲೆ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಅಭಿನಯಿಸುವುದು ನನಗೆ ನಿಜಕ್ಕೂ ಅಷ್ಟೇನೂ ಸುಲಭವಾಗಿರಲಿಲ್ಲ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಸ್ಕ್ರಿಪ್ಟ್ ರೀಡಿಂಗ್ ಸಮಯಕ್ಕೆ ಬಂದಾಗ ವಿಶಾಖ್ ತಾವಿಬ್ಬರೂ ಸಂಬಂಧಿಗಳು ಎಂಬ ವಿಷಯವನ್ನು ತಮ್ಮ ಗಮನಕ್ಕೆ ತಂದರು ಎಂದು ತಿಳಿಸಿದ ಕೀರ್ತಿ, "ಅವನು ಆ ವಿಷಯವನ್ನು ನನಗೆ ಹೇಳದೇ ಇದ್ದಿದ್ದರೆ ಬಹುಶಃ ಇಷ್ಟೊಂದು ಮುಜುಗರವಾಗುತ್ತಿರಲಿಲ್ಲವೇನೋ ಎನಿಸಿತು! ಒಂದಂತೂ ನಿಜ, ವಿಶಾಖ್ ಮತ್ತು ನಾನು ಕಸಿನ್ಸ್ ಆಗಿರುವುದರಿಂದ ಅವರೊಂದಿಗೆ ಲವ್ ಸೀನ್‌ಗಳಲ್ಲಿ ನಟಿಸುವುದು ನಿಜಕ್ಕೂ ದೊಡ್ಡ ಸವಾಲಾಗಿತ್ತು ಎಂದು ನಗುತ್ತಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
'ಅಕ್ಕ' ಎಂಬುದು ವೈಆರ್‌ಎಫ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಧರ್ಮರಾಜ್ ಶೆಟ್ಟಿ ನಿರ್ದೇಶಿಸಿರುವ ಭಾರಿ ನಿರೀಕ್ಷೆಯ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯಾಗಿದೆ. 1980ರ ದಶಕದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಕಥೆಯು 'ಪೆರ್ನೂರು' ಎಂಬ ಕಾಲ್ಪನಿಕ ದಕ್ಷಿಣ ಭಾರತದ ಹಳ್ಳಿಯಲ್ಲಿ ನಡೆಯುವ ಚಿನ್ನದ ಕಳ್ಳಸಾಗಣೆ, ಭೂಗತ ಲೋಕ ಹಾಗೂ ರಾಜಕೀಯದ ಸುತ್ತ ಹೆಣೆಯಲ್ಪಟ್ಟಿದೆ.
ಈ ಸರಣಿಯಲ್ಲಿ ಕೀರ್ತಿ ಸುರೇಶ್ 'ಭವಾನಿ' ಎಂಬ ಶಕ್ತಿಶಾಲಿ ಪಾತ್ರದಲ್ಲಿ ನಟಿಸಿದ್ದರೆ, ರಾಧಿಕಾ ಆಪ್ಟೆ 'ರುದ್ರ' ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಹುನಿರೀಕ್ಷಿತ ವೆಬ್ ಸರಣಿಯು ಅಕ್ಟೋಬರ್ 30 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ, (ಏಜೆನ್ಸೀಸ್).