ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್​ ಶಾಕ್​: ವಿಜಯ್​ ಕೊನೆಯ ಚಿತ್ರ ಮುಂದೂಡಿಕೆ, ಫ್ಯಾನ್ಸ್​ಗೆ ನಿರಾಶೆ! Jana Nayagan

ಕಾಲಿವುಡ್​​ ಸೂಪರ್‌ಸ್ಟಾರ್ ವಿಜಯ್
ಕಾಲಿವುಡ್​​ ಸೂಪರ್‌ಸ್ಟಾರ್ ವಿಜಯ್
Published on

ಪ್ರಮುಖ ಮುಖ್ಯಾಂಶಗಳು

  • ವಿವಾದದ ಸುಳಿಯಲ್ಲಿ ಕಾಲಿವುಡ್​​ ಸೂಪರ್‌ಸ್ಟಾರ್ ವಿಜಯ್ ನಟನೆಯ ಕೊನೆಯ ಸಿನಿಮಾ
  • ಜನ ನಾಯಗನ್​ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿದ ಚಿತ್ರತಂಡ
  • ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿರುವುದರಿಂದ ಅಭಿಮಾನಿಗಳಿಗೆ ಬೇಸರ
ಚೆನ್ನೈ: ಕಾಲಿವುಡ್​​ ಸೂಪರ್‌ಸ್ಟಾರ್ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಗನ್ ( Jana Nayagan ) ' ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ ಜ.09ರಂದು ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿತ್ತು. ಆದರೆ, ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಚಿತ್ರತಂಡಕ್ಕೆ ವಿಘ್ನ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಚಿತ್ರದ ಬಿಡುಗಡೆಯನ್ನು ಮುಂದೂಡಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಇದಕ್ಕೆಲ್ಲ ಸೆನ್ಸಾರ್​ ವಿವಾದವೇ ಕಾರಣ ಎಂಬುದು ಜಗಜ್ಜಾಹೀರಾಗಿದೆ.
ಚಿತ್ರವನ್ನು ದಿಢೀರನೇ ಮುಂದೂಡಿದ್ದರಿಂದ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ. ತಮಿಳಿಗ ವೆಟ್ರಿ ಕಳಗಂ ಪಕ್ಷ (TVK) ವನ್ನು ಸ್ಥಾಪಿಸಿ, ಪೂರ್ಣ ಪ್ರಮಾಣದ ರಾಜಕೀಯಕ್ಕೆ ನಟ ವಿಜಯ್​ ಧುಮುಕಿದ್ದಾರೆ. ಜನ ನಾಯಗನ್​, ವಿಜಯ್​ ಅವರ ಕೊನೆಯ ಸಿನಿಮಾ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು, ತಮ್ಮ ನೆಚ್ಚಿನ ನಾಯಕನನ್ನು ಕೊನೆಯದಾಗಿ ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅದ್ಧೂರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇದೀಗ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿರುವುದರಿಂದ ಅಭಿಮಾನಿಗಳಿಗೆ ಬೇಸರವಾಗಿದೆ. ಚಿತ್ರದ ಮುಂಗಡ ಬುಕ್ಕಿಂಗ್​ ಕೂಡ ನಿಲ್ಲಿಸಲಾಗಿದೆ. ಯಾವಾಗ ಬಿಡುಗಡೆಯಾಗುತ್ತದೆ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ.

ಏನಿದು ಸೆನ್ಸಾರ್ ವಿವಾದ?

ಎರಡು ವಾರಗಳ ಹಿಂದೆ, ಸೆನ್ಸಾರ್ ಮಂಡಳಿ ಸದಸ್ಯರು 'ಜನ ನಾಯಗನ್' ಸಿನಿಮಾವನ್ನು ವೀಕ್ಷಿಸಿದರು. ಇದಾದ ಮೂರು ದಿನಗಳ ನಂತರ ಸಿನಿಮಾದ ಕೆಲವು ದೃಶ್ಯಗಳನ್ನು ತೆಗೆಯುವಂತೆ ಚಿತ್ರತಂಡಕ್ಕೆ ಸೂಚಿಸಿದರು. ಹೇಳಿದ ದೃಶ್ಯಗಳನ್ನು ತೆಗೆದರೆ ಮಾತ್ರ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡುವುದಾಗಿ ಸೆನ್ಸಾರ್​ ಮಂಡಳಿ ತಿಳಿಸಿತು. ಅದರಂತೆ, ಚಿತ್ರತಂಡವು ಕೂಡ ನಿಯಮಗಳನ್ನು ಪಾಲಿಸಿತು ಮತ್ತು ಸೆನ್ಸಾರ್ ಪ್ರಮಾಣಪತ್ರವು ತಕ್ಷಣ ಸಿಗುತ್ತದೆ ಎಂದು ಭಾವಿಸಿತ್ತು. ಆದರೆ, ಎರಡು ದಿನಗಳ ನಂತರವೂ ಸೆನ್ಸಾರ್‌ನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ನಿರ್ಮಾಣ ಕಂಪನಿ ಕೆವಿಎನ್​ ಪ್ರೊಡಕ್ಷನ್​ ಮತ್ತೆ ಸೆನ್ಸಾರ್​ ಮಂಡಳಿಯನ್ನು ಪ್ರಶ್ನಿಸಿತು.
ಚಿತ್ರ ಬಿಡುಗಡೆಗೆ ಕೆಲವೇ ದಿನಗಳ ಮೊದಲು, ಈ ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಸನ್ನಿವೇಶಗಳಿವೆ ಮತ್ತು ಸಶಸ್ತ್ರ ಪಡೆಗಳನ್ನು (Armed Forces) ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ ಎಂಬ ದೂರುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಜನ ನಾಯಗನ್​ ಚಿತ್ರವನ್ನು ಮರು ಪರಿಶೀಲಿಸಲು 'ಪರಿಶೀಲನಾ ಸಮಿತಿ'ಗೆ ವರ್ಗಾಯಿಸಿದೆ. ಇದರಿಂದಾಗಿ ಚಿತ್ರಕ್ಕೆ ಸಿಗಬೇಕಿದ್ದ ಅಂತಿಮ ಪ್ರಮಾಣಪತ್ರ ವಿಳಂಬವಾಗಿದೆ. ಈ ಬಗ್ಗೆ ಏನಾದರೂ ಹೇಳಲು ಬಯಸಿದರೆ, ಮುಂಬೈನಲ್ಲಿರುವ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಜನ ನಾಯಗನ್​ ಚಿತ್ರತಂಡಕ್ಕೆ ಸೆನ್ಸಾರ್​ ಮಂಡಳಿ ತಿಳಿಸಿದೆ.
ಜನವರಿ 9 ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಇನ್ನೂ ಪ್ರಮಾಣಪತ್ರ ಸಿಗದ ಕಾರಣ ನಿರ್ಮಾಣ ಸಂಸ್ಥೆ ಕೆವಿಎನ್​ ಪ್ರೊಡಕ್ಷನ್​ ಸಿನಿಮಾವನ್ನೇ ಮುಂದೂಡಿದೆ. ಇದಕ್ಕೂ ಮೊದಲೇ, ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಮದ್ರಾಸ್​ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿಯನ್ನು ಸಲ್ಲಿಸಿದೆ. ಸೆನ್ಸಾರ್ ಪ್ರಮಾಣಪತ್ರವನ್ನು ತ್ವರಿತವಾಗಿ ನೀಡಬೇಕೆಂದು ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ನಿನ್ನೆ (ಜನವರಿ 07) ಮದ್ರಾಸ್​ ಹೈಕೊರ್ಟ್​ನಲ್ಲಿ ವಿಚಾರಣೆ ಸಹ ನಡೆಯಿತು. ನಾವು ಸೆನ್ಸಾರ್ ಮಂಡಳಿ ಸೂಚಿಸಿದ ಎಲ್ಲ 27 ಕಟ್‌ಗಳನ್ನು ಮಾಡಿದ್ದೇವೆ. ಸಿನಿಮಾ ಇನ್ನೂ ಸಾರ್ವಜನಿಕವಾಗಿ ಬಿಡುಗಡೆಯೇ ಆಗಿಲ್ಲದಿರುವಾಗ, ಅದರ ವಿರುದ್ಧ ದೂರು ಬಂದಿರುವುದು ಸಂಶಯಾಸ್ಪದವಾಗಿದೆ ಎಂದು ನಿರ್ಮಾಪಕರ ಪರ ವಕೀಲ ಪರಾಸರನ್ ವಾದಿಸಿದರು.
ಸೆನ್ಸಾರ್​ ಮಂಡಳಿ ಪರ ವಾದಿಸಿದ ವಕೀಲರು, ಜನ ನಾಯಗನ್ ಚಿತ್ರವನ್ನು ನೋಡಿದ ಸದಸ್ಯರಲ್ಲಿ ಒಬ್ಬರು ಚಿತ್ರದ ಕೆಲವು ದೃಶ್ಯಗಳಿಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ. ಅವುಗಳನ್ನು ಪರಿಷ್ಕರಣಾ ಸಮಿತಿ ಪರಿಶೀಲಿಸಬೇಕಿದೆ. ಆನಂತರವೇ ಅದು ಮುಂದಿನ ಹಂತಕ್ಕೆ ಹೋಗುತ್ತದೆ. ಹೆಚ್ಚಿನ ಬದಲಾವಣೆಗಳು ಅಗತ್ಯವಿದ್ದರೆ, ಅದನ್ನು ಕಾನೂನಿನ ಪ್ರಕಾರವೇ ಮಾಡಲಾಗುತ್ತದೆ. ನೀವು ನ್ಯಾಯಾಲಯಕ್ಕೆ ಬಂದು ಸಿನಿಮಾವನ್ನು ಮತ್ತೆ ಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸಿಬಿಎಫ್‌ಸಿ ಅಧ್ಯಕ್ಷರು ಈಗಾಗಲೇ ಪ್ರಾದೇಶಿಕ ಕಚೇರಿಗೆ ಚಿತ್ರವನ್ನು ಸದ್ಯಕ್ಕೆ ತಡೆಹಿಡಿಯಬೇಕೆಂದು ತಿಳಿಸಿದ್ದಾರೆ. ಜನವರಿ 05 ರಂದು ನಿರ್ಮಾಪಕರಿಗೂ ಅದೇ ವಿಷಯವನ್ನು ತಿಳಿಸಲಾಯಿತು. ಹೊಸ ಸಮಿತಿಯು ಚಿತ್ರವನ್ನು ಮತ್ತೆ ಪರಿಶೀಲಿಸುತ್ತದೆ. ಅದಕ್ಕಾಗಿ ಇನ್ನೂ 15 ದಿನಗಳು ಬೇಕಾಗುತ್ತದೆ. ಇದಕ್ಕೆ ಒಪ್ಪಿಗೆ ದೊರೆತರೆ, ಹೊಸ ಸಮಿತಿಯನ್ನು ರಚಿಸಲು 20 ದಿನಗಳು ಬೇಕಾಗುತ್ತದೆ ಎಂದರು.
ಜನ ನಾಯಗನ್ ನಿರ್ಮಾಣ ಕಂಪನಿಯಾದ ಕೆವಿನ್ ಪ್ರೊಡಕ್ಷನ್ಸ್‌ನ ವಕೀಲ ಪರಾಸರನ್ ಮಾತನಾಡಿ, ಈ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು 'ಇ-ಸಿನಿ ಪ್ರಮಾಣ್' ಪೋರ್ಟಲ್ ಮೂಲಕ ವರದಿ ಮಾಡಬೇಕು. ಆದರೆ, ಸೆನ್ಸಾರ್‌ ಮಂಡಳಿ ಸದಸ್ಯರು ಆ ರೀತಿ ವರ್ತಿಸಲಿಲ್ಲ. ಅವರು ತಮ್ಮ ಅಧಿಕಾರ ವ್ಯಾಪ್ತಿಗೆ ಬಾರದ ಕೆಲವನ್ನು ಮಾಡುತ್ತಿದ್ದಾರೆ. ಸದಸ್ಯರಲ್ಲಿ ಒಬ್ಬರಿಗೆ ಮಾತ್ರ ಆಕ್ಷೇಪಣೆಗಳಿದ್ದವು. ಉಳಿದವರಿಗೆ ಯಾವುದೇ ಸಮಸ್ಯೆ ಇಲ್ಲ. ಇಲ್ಲಿಗೆ ಒಪ್ಪಿಗೆ ಅನುಪಾತವು 4:1 ಇದೆ. ಹೀಗಿರುವಾಗ ಸಿನಿಮಾವನ್ನು ಮತ್ತೆ ಪರಿಶೀಲನೆಗೆ ಹೇಗೆ ಕಳುಹಿಸಬಹುದು? ಸೆನ್ಸಾರ್ ಮಂಡಳಿಯು ಕಾನೂನಿನ ಪ್ರಕಾರ ತನ್ನ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಪರಾಸರನ್ ವಾದಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಸಾಲಿಸಿಟರ್ ಜನರಲ್, ಚಿತ್ರವನ್ನು ಮತ್ತೊಮ್ಮೆ ಪರಿಶೀಲಿಸಲು ಯಾರೂ ಹೇಳಿಲ್ಲ ಮತ್ತು ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ ಎಂದರು.
ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಆಶಾ, ತೀರ್ಪನ್ನು ಕಾಯ್ದಿರಿಸಿದ್ದಾರೆ. ಜನವರಿ 9 ರಂದು ಅಂತಿಮ ಆದೇಶ ಪ್ರಕಟವಾಗಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net