ವಿಜಯ್​ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ದೇ ಅದೊಂದು ಫೋಟೋ! ಸೋಷಿಯಲ್ ಮೀಡಿಯಾ ಪೋಸ್ಟ್ ತಂದಿಟ್ಟ ಸಂಕಷ್ಟ | Thalapathy Vijay

ನಟ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತಾ
ನಟ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತಾ
Published on

ಪ್ರಮುಖ ಮುಖ್ಯಾಂಶಗಳು

  • ದಳಪತಿ ವಿಜಯ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ
  • ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ನಟ ವಿಜಯ್​ ದಾಂಪತ್ಯದಲ್ಲಿ ಬಿರುಕು
  • ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದ್ದೇ ಆ ಒಂದು ಫೋಟೋಯಿಂದ
Thalapathy Vijay: ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ಸೂಪರ್​ ಸ್ಟಾರ್​ ದಳಪತಿ ವಿಜಯ್​ ದಾಂಪತ್ಯದಲ್ಲಿ ದೊಡ್ಡ ಬಿರುಕು ಮೂಡಿದ್ದು, ನಟನ ಪತ್ನಿ ಸಂಗೀತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ತಮಿಳುನಾಡು ರಾಜಕೀಯ ಮತ್ತು ಸಿನಿ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಟಿ ತ್ರಿಷಾ ಕೃಷ್ಣನ್​ ಹೆಸರು ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದು ಹಲವರ ಟೀಕೆ, ವ್ಯಂಗ್ಯಗಳಿಗೂ ಕಾರಣವಾಗಿದೆ.
ತಮಿಳು ಚಿತ್ರರಂಗದಲ್ಲಿ ಹಲವಾರು ಸೂಪರ್​ಹಿಟ್​ ಸಿನಿಮಾಗಳನ್ನು ನೀಡಿರುವ ವಿಜಯ್​, ಇಂದು ತಾವು ಅಭಿನಯಿಸುವ ಒಂದೇ ಒಂದು ಚಿತ್ರಕ್ಕೆ ಬರೋಬ್ಬರಿ 250 ಕೋಟಿ ರೂ. ಮೊತ್ತದ ಸಂಭಾವನೆ ಪಡೆಯುತ್ತಾರೆ. ಹೀಗಿರುವಾಗಲೇ, ರಾಜಕೀಯದತ್ತ ತಮ್ಮ ಚಿತ್ತ ಹರಿಸಿದ ದಳಪತಿ, 'ಜನನಾಯಗನ್'​ ಬಳಿಕ ಇನ್ಯಾವುದೇ ಚಿತ್ರ ಮಾಡುವುದಿಲ್ಲ, ಪರಿಪೂರ್ಣವಾಗಿ ರಾಜಕಾರಣಿಯಾಗಿ ಮುಂದುವರಿಯುವುದಾಗಿ ತಿಳಿಸಿದರು. ಇಲ್ಲಿಂದ ಶುರುವಾಯಿತು ನೋಡಿ ವಿಜಯ್​ಗೆ ಬಿಕ್ಕಟ್ಟಿನ ಸಮಯ.
ವಿಜಯ್​ ತಮಿಳು ಚಿತ್ರೋದ್ಯಮಕ್ಕೆ ಗುಡ್​ಬೈ ಹೇಳುವ ಮೂಲಕ ರಾಜಕೀಯದಲ್ಲಿ ಹೆಚ್ಚಾಗಿ ಸಕ್ರಿಯಗೊಂಡಿದ್ದೇ ತಡ ವಿಜಯ್​ಗೆ ಒಂದಲ್ಲ ಒಂದು ಸಮಸ್ಯೆಗಳು ಶುರುವಾಗ ತೊಡಗಿದೆ. ಅತ್ತ ಕರೂರು ಕಾಲ್ತುಳಿತ ಪ್ರಕರಣದಲ್ಲಿ ತನ್ನ ಅಭಿಮಾನಿಗಳ ಸಾವಿನಿಂದ ಅತೀವ ದುಃಖಕ್ಕೆ ಒಳಗಾದ ದಳಪತಿ, ಆ ನಂತರ ವಿರೋಧ ಪಕ್ಷಗಳಿಂದ ಸಾಲು ಸಾಲು ಆರೋಪಗಳು ಮತ್ತು ಕಾನೂನು ಸಂಕಷ್ಟವನ್ನು ಎದುರಿಸಿದರು. ಈ ಬಳಿಕ ಇದೀಗ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಅವರು ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ದಾಂಪತ್ಯ ಜೀವನವನ್ನು ಬೀದಿಗೆ ತಂದಿಟ್ಟಿದೆ.
ಸಂಗೀತ ಸೊರ್ನಲಿಂಗಂ ಶ್ರೀಲಂಕಾದ ತಮಿಳು ಕುಟುಂಬದಿಂದ ಬಂದವರು. ಅಮೆರಿಕದಲ್ಲಿ ಬೆಳೆದ ಇವರು, 400 ಕೋಟಿ ರೂ. ಮೌಲ್ಯದ ಆಸ್ತಿಗೆ ಒಡತಿ ಎನ್ನಲಾಗಿದೆ. ಸಂಗೀತಾ ಕಳೆದ ಐದು ವರ್ಷಗಳಿಂದ ವಿಜಯ್ ಅವರಿಂದ ದೂರ ಉಳಿದಿದ್ದು, ತಂದೆಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು ಎಂದು ವರದಿಗಳು ಉಲ್ಲೇಖಿಸಿವೆ. ಅವರ ಆಪ್ತರ ಮಾಹಿತಿ ಪ್ರಕಾರ, ಸಂಗೀತಾ ಪ್ರಚಾರ ಅಥವಾ ರಾಜಕೀಯವನ್ನು ಇಷ್ಟಪಡುವುದಿಲ್ಲ. ಯಾವುದೇ ಹೈಪ್​ ಅಥವಾ ಪಬ್ಲಿಸಿಟಿಗೆ ಆಕರ್ಷಿತರಾಗಿಲ್ಲ. ಬದಲಿಗೆ ಸೋಷಿಯಲ್ ಮೀಡಿಯಾದಿಂದ ಮತ್ತು ಜನಪ್ರಿಯತೆಯಿಂದ ದೂರ ಉಳಿದವರು. ತಮ್ಮ ಮಕ್ಕಳೊಂದಿಗೆ ಸಂತೋಷದ ಜೀವನವನ್ನು ನಡೆಸಲು ಬಯಸುತ್ತಾರೆ.
ಒಮ್ಮೆ ಸಂದರ್ಶನವೊಂದರಲ್ಲಿ, ವಿಜಯ್ ಅವರ ತಾಯಿ ಮಾತನಾಡಿ, ಸಂಗೀತಾ ಓರ್ವ ಸಾಮಾನ್ಯ ಗೃಹಿಣಿ. ಮನೆಯಲ್ಲಿ ಕೆಲಸಗಾರರಿದ್ದರೂ ಮಕ್ಕಳು ಮತ್ತು ವಿಜಯ್​ನನ್ನು ಆಕೆಯೊಬ್ಬಳೇ ನೋಡಿಕೊಳ್ಳುತ್ತಾಳೆ. ಎಲ್ಲಾ ಕೆಲಸವನ್ನೂ ಅವಳೇ ಮಾಡುತ್ತಾಳೆ ಎಂದಿದ್ದರು. 2021ರಿಂದ ಸಂಗೀತಾ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದೇಳಲು ಶುರುವಾಯಿತು. ತಮಿಳು ಚಿತ್ರರಂಗದ ಜನಪ್ರಿಯ ನಟಿಯೊಬ್ಬರ ಜೊತೆ ವಿಜಯ್​ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿತು. ಈ ವಿವಾದ ವಿಕೋಪಕ್ಕೆ ತಿರುಗಲು ಅದೊಂದು ಫೋಟೋ ಬಹುಮುಖ್ಯ ಕಾರಣವಾಯಿತು.
ವಿಜಯ್ ಜತೆಗೆ ಆ ನಟಿ ಅವಾರ್ಡ್ ಫಂಕ್ಷನ್​ ರಾತ್ರಿಗಳನ್ನು ಕಳೆದಿದ್ದಾರೆ. ಮತ್ತು ಅವರೊಂದಿಗೆ ಇರುವ ಫೋಟೋಗಳನ್ನು ಎಮೋಜಿ ಹಾಕುವ ಮೂಲಕ ಪೋಸ್ಟ್​ ಮಾಡುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಜಯ್ ಮತ್ತು ಸಂಗೀತಾ ನಡುವಿನ ಮಾತುಕತೆ ತೀರ ಹದಗೆಟ್ಟಿತು. ಮನಸ್ತಾಪಗಳ ಬೆನ್ನಲ್ಲೇ ದಳಪತಿ ಸಂಗೀತಾರನ್ನು ಯುಕೆಗೆ ಕಳುಹಿಸಲು ಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಇದೆಲ್ಲದಕ್ಕೂ ಸುಮ್ಮನಿದ್ದ ವಿಜಯ್​ ಪತ್ನಿಯ ಪಿತ್ತವನ್ನು ನೆತ್ತಿಗೇರಿಸಿದ್ದೇ ನಟಿ ಹಂಚಿಕೊಂಡ ಆ ಒಂದು ಫೋಟೋ.
ತನ್ನ ನಿವಾಸದಲ್ಲಿ ದಳಪತಿ ವಿಜಯ್ ಅವರೊಂದಿಗೆ ಆ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದೇ ತಡ, ಸಂಗೀತಾ ಅವರ ತಾಳ್ಮೆಯ ಕಟ್ಟೆ ಹೊಡೆದು ಹೋಯಿತು. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ವಿಜಯ್​ ಮತ್ತು ಆಕೆಯ ಫಾರಿನ್​ ಟ್ರಿಪ್​ಗಳು ಮತ್ತು ಅವರ ಫೋಟೋಗಳು ನನಗೆ ಹಾಗೂ ನನ್ನ ಮಕ್ಕಳಿಗೆ ಭಾರೀ ನೋವುಂಟು ಮಾಡಿದೆ ಎಂದು ವಿಚ್ಛೇದನದ ಅರ್ಜಿಯಲ್ಲಿ ತಿಳಿಸಿದ್ದಾರೆ.

ಸಂಗೀತಾ ಸಲ್ಲಿಸಿದ ವಿಚ್ಛೇದನ ಅರ್ಜಿಯಲ್ಲಿ ಏನಿದೆ?

ವಿಜಯ್ ಪತ್ನಿ ಸಂಗೀತಾ ಸೋರ್ನಲಿಂಗಂ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿರುವ ಡಿವೋರ್ಡ್​ ಅರ್ಜಿಯಲ್ಲಿ, ವಿಜಯ್​ ಆಕೆ (ಹೆಸರು ಉಲ್ಲೇಖಿಸಿಲ್ಲ) ಜೊತೆ ಅನೈತಿಕ ಸಂಬಂಧ ಹೊಂದಿರುವ ವಿಷಯ ನನಗೆ ಹಾಗೂ ನನ್ನ ಮಕ್ಕಳಿಗೆ ತೀರ ಘಾಸಿ ಮಾಡಿದೆ. ಇದು ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲೂ, ಅವರಿಬ್ಬರು ಫಾರಿನ್​ ಟ್ರಿಪ್​ಗಳಿಗೆ ಹೋದ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಾಕಿಕೊಂಡಿರುವುದು ತುಂಬ ನೋವುಂಟು ಮಾಡಿದೆ ಎಂದು ಉಲ್ಲೇಖಿಸಿದ್ದಾರೆ.

ಡಿವೋರ್ಸ್​ಗೆ ಅರ್ಜಿ ವಿಚಾರಣೆ

ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಟ ವಿಜಯ್​ ಅವರು ಚುನಾವಣಾ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿಜಯ್​ ಮತ್ತು ಪತ್ನಿ ಸಂಗೀತಾ ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಫೆಬ್ರವರಿ 24ರಂದು ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯು ಇದೇ ಏಪ್ರಿಲ್ 20ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಪ್ರಕರಣದ ವಿಚಾರಣೆಗೆ ವಿಜಯ್ ಖುದ್ದಾಗಿ ಹಾಜರಾಗಬೇಕೆಂದು ಚೆಂಗಲ್ಪಟ್ಟು ನ್ಯಾಯಾಲಯ ಆದೇಶಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net