ಮಲೇಷ್ಯಾದಲ್ಲಿ 'ಜನನಾಯಗನ್' ಆಡಿಯೋ ಲಾಂಚ್​: ಆ ಪದ ಕೇಳ್ತಿದ್ದಂತೆ ಫ್ಯಾನ್ಸ್​ಗಳನ್ನು ಸುಮ್ಮನಿರಿಸಿದ ದಳಪತಿ ​

ದಳಪತಿ ವಿಜಯ್​
ದಳಪತಿ ವಿಜಯ್​
Published on

ಪ್ರಮುಖ ಮುಖ್ಯಾಂಶಗಳು

  • ಮಲೇಷ್ಯಾದಲ್ಲಿ ನಡೆದ ಜನನಾಯಗನ್​ ಅದ್ಧೂರಿ ಆಡಿಯೋ ಲಾಂಚ್​
  • ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ
  • ವೇದಿಕೆಯಲ್ಲಿ ಟಿವಿಕೆ ಎಂದು ಕೂಗಿದ ಫ್ಯಾನ್ಸ್​ಗೆ ಬೇಡವೆಂದ ವಿಜಯ್
ತಮಿಳುನಾಡು: ನಿನ್ನೆ (ಡಿ.27) ತಮಿಳಿನ ಸ್ಟಾರ್​ ನಟ, 'ಟಿವಿಕೆ' (ತಮಿಳಗ ವೆಟ್ರಿ ಕಳಗಮ್​​) ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನನಾಯಗನ್'​ ಆಡಿಯೋ ಲಾಂಚ್​ ಅದ್ಧೂರಿಯಾಗಿ ಮಲೇಷ್ಯಾದ ಬುಕಿತ್ ಜೈಲ್​ ಸ್ಟೇಡಿಯಂನಲ್ಲಿ ನಡೆಯಿತು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳತ್ತ ವಿಜಯ್ ಕೈಬಿಸಿ, ಧನ್ಯವಾದ ಅರ್ಪಿಸಿದ್ದು ವಿಶೇಷ.
ತಮಿಳು ಚಿತ್ರರಂಗಕ್ಕೆ ಹಲವು ಸೂಪರ್​ಹಿಟ್​ ಸಿನಿಮಾಗಳ ಕೊಡುಗೆ ನೀಡಿರುವ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ಇದು ಎಂಬ ಸಂಗತಿ ಹಲವರ ಬೇಸರಕ್ಕೆ ಕಾರಣವಾಯಿತು. ಈ ವಿಷಯವನ್ನು ಅರಿತ ಕಾಲಿವುಡ್​ ನಿರ್ದೇಶಕರ ತಂಡ, ವೇದಿಕೆಯ ಮೇಲೆ ನಟನಿಗೆ ಪ್ರೀತಿಯ ಅಪ್ಪುಗೆ ನೀಡಿ, ಅಭಿಮಾನ ವ್ಯಕ್ತಪಡಿಸಿತು. ಈ ಎಲ್ಲ ನಿರ್ದೇಶಕರು ಅವರೊಂದಿಗೆ ಕೆಲಸ ಮಾಡಿದವರೇ ಆಗಿರುವುದು ಇನ್ನೊಂದು ವಿಶೇಷ.
ವೇದಿಕೆಗೆ ಬಂದ ವಿಜಯ್​, ಸ್ಟೇಡಿಯಂ ಪೂರ ತುಂಬಿ ತುಳುಕುತ್ತಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಕೊನೆಯ ಸಿನಿಮಾ ಕುರಿತಂತೆ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದ ನಟ, ಫ್ಯಾನ್ಸ್​ಗಳತ್ತ ಕೈಬೀಸಿ, ನಗೆ ಬೀರಿದರು. ಈ ವೇಳೆ ನಟನ ಟಿವಿಕೆ ಪಕ್ಷದ ಹೆಸರನ್ನು ಕೂಗಿದ ಅಭಿಮಾನಿ ಬಳಗಕ್ಕೆ, ನಗುತ್ತಲೇ ಇದು ಇಲ್ಲಿಗೆ ಸೂಕ್ತವಲ್ಲ, ಬೇಡ ಎಂದು ನಿಲ್ಲಿಸಲು ವಿಜಯ್​ ತಲೆ ಅಲ್ಲಾಡಿಸುತ್ತಲೇ ಸಂದೇಶ ನೀಡಿದರು.
ಇದೊಂದು ಸಿನಿಮಾಗೆ ಸಿದ್ಧಪಡಿಸಿರುವ ವೇದಿಕೆಯೇ ಹೊರತು ರಾಜಕೀಯ ಕಾರ್ಯಕ್ರಮಕ್ಕಲ್ಲ ಎಂಬುದನ್ನು ಪರೋಕ್ಷವಾಗಿ ಫ್ಯಾನ್ಸ್​ಗೆ ತಿಳಿಸಿದರು. ಅದ್ಧೂರಿಯಾಗಿ ನಡೆದ ಆಡಿಯೋ ಲಾಂಚ್​ ಈವೆಂಟ್​ನಲ್ಲಿ ನಟಿ ಪೂಜಾ ಹೆಗ್ಡೆ, ಪ್ರಿಯಾಮಣಿ, ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​, ಸಾಹಿತಿ ವಿವೇಕ್​, ಕೋರಿಯೋಗ್ರಫರ್​ಗಳಾದ ಶೋಭಿ ಮತ್ತು ಶೇಖರ್​ ಭಾಗಿಯಾಗಿದ್ದರು,(ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net