ಒಳಗಿನವರದ್ದೇ ಕೈವಾಡ! ವಿಜಯ್​ 'ಜನ ನಾಯಗನ್'​ ದೃಶ್ಯಗಳ ಲೀಕ್​ ಬಗ್ಗೆ ನಟಿ ಕಸ್ತೂರಿ ಶಂಕರ್​ ಸ್ಫೋಟಕ ಹೇಳಿಕೆ

ದಳಪತಿ ನಟ ವಿಜಯ್​, ನಟಿ ಕಸ್ತೂರಿ ಶಂಕರ್​
ದಳಪತಿ ನಟ ವಿಜಯ್​, ನಟಿ ಕಸ್ತೂರಿ ಶಂಕರ್​
Published on

ಪ್ರಮುಖ ಮುಖ್ಯಾಂಶಗಳು

  • ಜನ ನಾಯಗನ್​ ಚಿತ್ರದ ಲೀಕ್​ ದೃಶ್ಯಗಳ ಬಗ್ಗೆ ನಟಿ ಕಸ್ತೂರಿ ಶಂಕರ್ ಹೇಳಿಕೆ
  • ಎಚ್​ಡಿ ಪ್ರಿಂಟ್​, ಅನ್​ ಎಡಿಟೆಡ್​ ದೃಶ್ಯಗಳನ್ನು ಹೊರಗಿನವರು ಲೀಕ್​ ಮಾಡಿಲ್ಲ
  • ಮೂರು ಗಂಟೆಗಳ ಪ್ರಚಾರಕ್ಕೆಂದು ರೂಪಿಸಿರುವ ಸಿನಿಮಾ ಇದು
Thalapathy Vijay: ಪ್ರಸ್ತುತ, ತಮಿಳುನಾಡು ಚುನಾವಣಾ ಕಣದಲ್ಲಿ ಸಖತ್ ಬಿಜಿಯಾಗಿರುವ ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ಸೂಪರ್​ ಸ್ಟಾರ್​ ದಳಪತಿ ವಿಜಯ್​, ಪ್ರಚಾರ ಕಾರ್ಯಗಳಲ್ಲಿ ನಿರಂತರವಾಗಿ ಓಡಾಡುತ್ತಿದ್ದಾರೆ. ದಾಂಪತ್ಯದಲ್ಲಿ ಬಿರುಕು, ರಾಜಕೀಯದಲ್ಲಿ ತೊಡಕು ಮತ್ತು ಬಹುನಿರೀಕ್ಷಿತ 'ಜನ ನಾಯಗನ್'​ ಚಿತ್ರದ ರಿಲೀಸ್​ಗೆ ಅಡಚಣೆ. ಇದೆಲ್ಲದರ ನಡುವೆಯೂ ಚುನಾವಣಾ ಕಣದಲ್ಲಿರುವ ವಿಜಯ್​ಗೆ ತಮ್ಮ ಬಹುನಿರೀಕ್ಷಿತ ಚಿತ್ರದ ದೃಶ್ಯಗಳು ಲೀಕ್ ಆಗಿರುವುದು ಸದ್ಯ ಭಾರೀ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಮಧ್ಯೆ, ನಟಿ ಕಸ್ತೂರಿ ಶಂಕರ್​ ಆಡಿರುವ ಮಾತುಗಳು ನಟನ ಅಭಿಮಾನಿಗಳನ್ನು ಕೆರಳಿಸಿದೆ.
ಇಡೀ ಕಾಲಿವುಡ್​ ಚಿತ್ರರಂಗವೇ ವಿಜಯ್ ಮತ್ತು ಚಿತ್ರತಂಡದ ಪರ ದನಿಗೂಡಿಸಿದ್ದು, ಇಂತಹ ಪೈರಸಿ ಕಾಟಕ್ಕೆ ನಾವೆಲ್ಲರೂ ಸೇರಿ ಫುಲ್​ಸ್ಟಾಪ್​ ಇಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದರು. ಮತ್ತೊಂದೆಡೆ, ಕಸ್ತೂರಿ ಶಂಕರ್ ಮಾತನಾಡಿ, ಇತ್ತೀಚೆಗೆ ಆನ್​ಲೈನ್​ನಲ್ಲಿ ಸೋರಿಕೆಯಾದ ವಿಜಯ್​ ಚಿತ್ರದ ಒಂದಷ್ಟು ಸೀನ್​ಗಳನ್ನು ನಾನೂ ವೀಕ್ಷಿಸಿದೆ ಎಂದು ಒಪ್ಪಿಕೊಂಡಿದ್ದಾರೆ.
ಇದು ಮೂರು ಗಂಟೆಗಳ ಪ್ರಚಾರ ಸಿನಿಮಾ. ಎಚ್. ವಿನೋದ್ ನಿರ್ದೇಶಿಸಿರುವ ಈ ಚಿತ್ರವನ್ನು ವಿಜಯ್ ಅವರ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ಬಲಪಡಿಸಲು ಸೂಕ್ಷ್ಮವಾಗಿ ರೂಪಿಸಲಾಗಿದೆ. ಇದೊಂದು ಪ್ರಚಾರದ ತುಣುಕು. ಈ ಸಿನಿಮಾವನ್ನು ಏನಾದರೂ ಈಗ ಜನ ನೋಡಿದರೆ, ಅದು ಟಿವಿಕೆಗೆ ದೊಡ್ಡ ಲಾಭ ತಂದುಕೊಡಲಿದೆ. ಇದು ವಿಜಯ್ ಟಾರ್ಗೆಟ್​ ಮಾಡಿರುವ ಬಿಜೆಪಿ ಅಥವಾ ಡಿಎಂಕೆಗೆ ಹೊಡೆತ ನೀಡಲಿದೆ ಎಂದಿದ್ದಾರೆ.

ಇದು ಒಳಗಿನವರದ್ದೇ ಕೆಲಸ

ನನಗೆ ಕಾಡುತ್ತಿರುವ ಪ್ರಶ್ನೆ, ಹೇಗೆ ಒಂದು ಬಿಗ್ ಬಜೆಟ್​ ಹಾಗೂ ಬ್ಯಾನರ್​ನ ಚಿತ್ರದ ದೃಶ್ಯಗಳು ಅಷ್ಟು ಸುಲಭವಾಗಿ ಜಾಲತಾಣಗಳಲ್ಲಿ ಸೋರಿಕೆ ಆಗುತ್ತವೆ? ಅದು ಎಚ್​ಡಿ ಪ್ರಿಂಟ್​, ಎಡಿಟ್​ ಆಗದಿರುವ ಸೀನ್​ಗಳು ಇಡೀ ಚಿತ್ರತಂಡದವರ ಕಣ್ತಪ್ಪಿಸಿ ಹೇಗೆ ಹೊರಬರಲು ಸಾಧ್ಯ? ನನಗೆ ಅನಿಸೋದು. ಇದೆಲ್ಲ ಒಳಗಿನವರದ್ದೇ ಕೆಲಸ ಅಂತ. ಸೆನ್ಸಾರ್​ ಮಂಡಳಿ ಮತ್ತು ಪ್ರಸಾರ ಸಚಿವಾಲಯದ ಭದ್ರತಾ ಪ್ರೋಟೋಕಾಲ್‌ಗಳನ್ನು ತಪ್ಪಿಸಿ, ಹೊರಬರುವುದು ಅಷ್ಟು ಸುಲಭವಿಲ್ಲ. ರಿಲೀಸ್​ ಸಮಸ್ಯೆ ಎದುರಿಸುತ್ತಿರುವ ಚಿತ್ರತಂಡ, ಹೀಗಾದರೂ ಜನರಿಗೆ ತಮ್ಮ ಚಿತ್ರದ ಸಂದೇಶ ತಿಳಿಯಲಿ ಎಂದು ಮಾಡಿರುವ ತಂತ್ರ ಎಂದು ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net