ಸ್ಟಾರ್​ ನಟನ ಚಿತ್ರದಿಂದ ಇಷ್ಟೊಂದು ಗೊಂದಲ!? ಗೊತ್ತಿದ್ದೂ ರಿಲೀಸ್​ ಮಾಡಿದ್ರೆ ನಷ್ಟದ ಭಯ | Kollywood

ಸ್ಟಾರ್​ ನಟರ ಚಿತ್ರಗಳ ಬಿಸಿ
ಸ್ಟಾರ್​ ನಟರ ಚಿತ್ರಗಳ ಬಿಸಿ
Published on

ಪ್ರಮುಖ ಮುಖ್ಯಾಂಶಗಳು

  • ಸ್ಟಾರ್​ ನಟರ ಸಿನಿಮಾಗಳ ರಿಲೀಸ್​ ವಾರದಲ್ಲಿ ಹೊಸಬರ ಚಿತ್ರಗಳು ಪೋಸ್ಟ್​ಪೋನ್​
  • ತಮಿಳು ನಟ ವಿಜಯ್​ ಅಭಿನಯದ 'ಜನನಾಯಗನ್'​ ರಿಲೀಸ್​ ಗೊಂದಲ
  • ವಿಜಯ್ ಚಿತ್ರ ತೆರೆಗೆ ಬರುವ ವಾರದಲ್ಲಿ ಬೇರೆ ಚಿತ್ರಗಳು ಮುಂದೂಡಿಕೆ
  • ಇದು ವಿಜಯ್​ ಸಿನಿಮಾ ಕಥೆ ಮಾತ್ರವಲ್ಲ ಬೇರೆ ಚಿತ್ರರಂಗದಲ್ಲೂ ಇದೇ ಸಮಸ್ಯೆ
ಬೆಂಗಳೂರು: ಸ್ಟಾರ್​ ನಟರ ಸಿನಿಮಾಗಳು ಅಂದಮೇಲೆ ಅಲ್ಲಿ ಭಾರೀ ನಿರೀಕ್ಷೆ, ದೊಡ್ಡ ಮಟ್ಟದ ಅಭಿಮಾನಿಗಳು, ವಿಪರೀತ ಕ್ರೇಜ್ ಮತ್ತು ಪ್ರಚಾರ ಕಾರ್ಯಗಳು ಎಂದಿಗಿಂತ ಜೋರಾಗಿರುತ್ತವೆ. ಈ ವಾರ ಅಥವಾ ಹಬ್ಬದ ದಿನಗಳಂದು ಸೂಪರ್​​ಸ್ಟಾರ್​ಗಳ ಚಿತ್ರಗಳು ಅಖಾಡಕ್ಕಿಳಿಯುತ್ತಿವೆ ಎಂದು ಗೊತ್ತಾದರೆ, ಇತರೆ ಭಾಷೆಯ ಹಾಗೂ ಹೊಸಬರ ತಂಡಗಳು ತಮ್ಮ ಚಿತ್ರಗಳ ರಿಲೀಸ್​ ದಿನಾಂಕವನ್ನು ತಕ್ಷಣವೇ ಮುಂದೂಡಿಕೆ ಮಾಡಿಕೊಳ್ಳುತ್ತವೆ. ಕಾರಣ, ಬಾಕ್ಸ್ ಆಫೀಸ್​ನಲ್ಲಿ ಆಗುವ ಪೈಪೋಟಿ (Kollywood).
ಸ್ಟಾರ್​ ಹೀರೋಗಳ ಚಿತ್ರ ತೆರೆಕಾಣಲು ಸಿದ್ಧವಾಗಿದೆ ಎಂದಾದರೆ, ಅದೇ ವಾರದಲ್ಲಿ ಇನ್ನೊಬ್ಬ ಸ್ಟಾರ್​ ನಟನ ಸಿನಿಮಾ ತೆರೆಗೆ ಬರುವುದು ಅಪರೂಪ. ಕೆಲವೇ ಕೆಲವು ನಿರ್ಮಾಪಕರು ಮಾತ್ರ ರಿಲೀಸ್​ ಕ್ಲ್ಯಾಶ್​ ಬಗ್ಗೆ ಹೆಚ್ಚು ಚಿಂತಿಸದೆ, ಧೈರ್ಯದಿಂದ ರಿಲೀಸ್​ಗೆ ಮುಂದಾಗುತ್ತಾರೆ. ಆದರೆ, ಹೊಸಬರ ತಂಡಗಳು ಮತ್ತು ಹೊಸ ನಟರ ಚಿತ್ರಗಳು ಈ ಸಮಯದಲ್ಲಿ ರಿಲೀಸ್​ ನೋಡಲು ಇಷ್ಟಪಡುವುದಿಲ್ಲ. ಬದಲಿಗೆ ತಮ್ಮ ಸಿನಿಮಾದ ದಿನಾಂಕವನ್ನು ಒಂದು ವಾರ ಹಿಂದೆ ಅಥವಾ ಮುಂದಕ್ಕೆ ಹಾಕಿಕೊಳ್ಳಲಾಗುತ್ತೆ. ಸದ್ಯ ಇದೇ ಪರಿಸ್ಥಿತಿ ತಮಿಳು ಚಿತ್ರರಂಗದ ಹಲವು ಚಿತ್ರಗಳಿಗೆ ಆಗುತ್ತಿವೆ. ಅದಕ್ಕೆ ಕಾರಣ, ಬಹುನಿರೀಕ್ಷಿತ 'ಜನನಾಯಗನ್'​ ರಿಲೀಸ್ ಗೊಂದಲ​!

ರಿಲೀಸ್​ ಮಾಡಿದ್ರೆ ನಿರ್ಮಾಪಕರಿಗೆ ಕಷ್ಟ-ನಷ್ಟ!

ತಮಿಳಿಗ ವೆಟ್ರಿ ಕಳಗಂ (TVK) ಪಕ್ಷವನ್ನು ಸ್ಥಾಪಿಸಿ ಪೂರ್ಣ ಪ್ರಮಾಣದಲ್ಲಿ ರಾಜಕಿಯಕ್ಕೆ ಧುಮುಕಿರುವ ಕಾಲಿವುಡ್​ ಸೂಪರ್​ ಸ್ಟಾರ್, ದಳಪತಿ ವಿಜಯ್​ ನಟನೆಯ ಕೊನೆಯ ಸಿನಿಮಾ ಜನ ನಾಯಗನ್​ (Jana Nayagan) ಬಿಡುಗಡೆಗೆ ಸದ್ಯ ಸಾಕಷ್ಟು ಅಡೆತಡೆಗಳು ಎದುರಾಗಿವೆ. ಸೆನ್ಸಾರ್​ ಮಂಡಳಿಯಿಂದ ಆದ ತೊಂದರೆಗಳು ಸಂಕ್ರಾಂತಿಗೆ ರಿಲೀಸ್ ಆಗಬೇಕಿದ್ದ ವಿಜಯ್​ ಚಿತ್ರವನ್ನು ಬಲವಂತವಾಗಿ ಮುಂದೂಡುವಂತೆ ಮಾಡಿದೆ. ಒಂದೆಡೆ, ಇದು ಚಿತ್ರತಂಡಕ್ಕೆ ಮತ್ತು ದಳಪತಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದರೆ, ಇತರೆ ಚಿತ್ರಗಳಿಗೆ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಆಗುತ್ತಿರುವುದು ಮತ್ತೊಂದೆಡೆ.

ಮುಂದೂಡಿಕೆ ಗೊಂದಲ

ವಿಜಯ್ ಅವರ ಜನನಾಯಗನ್​ ಚಿತ್ರ ಮುಂದೂಡಿಕೆ ಆಗ್ತಿದ್ದಂತೆ, ಆ ವಾರದಲ್ಲಿ ತೆರೆ ಕಾಣಲು ಪಟ್ಟಿಯಲ್ಲೇ ಇಲ್ಲದ ಹೊಸಬರ ಸಿನಿಮಾಗಳು, ದಿಢೀರ್ ಎಂಬಂತೆ ತಮ್ಮ ಚಿತ್ರಗಳ ರಿಲೀಸ್​ ಡೇಟ್​ಗಳನ್ನು ಬದಲಿಸಿಕೊಂಡಿವೆ. ಇದು ಕೆಲವರಿಗೆ ಪಾಸಿಟಿವ್ ಆದರೆ, ಇನ್ನೂ ಕೆಲವು ಚಿತ್ರಗಳ ನಿರ್ಮಾಪಕರಿಗೆ ನಷ್ಟದ ಭೀತಿಯನ್ನು ಮೂಡಿಸಿದೆ. ವಿಜಯ್ ಸಿನಿಮಾ ರಿಲೀಸ್​ ಆಗುವ ವಾರ ಬಿಟ್ಟು ಅದರ ಮುಂದಿನ ವಾರಗಳಲ್ಲಿ ಅಥವಾ ಹಿಂದಿನ ವಾರಗಳಲ್ಲಿ ತಮ್ಮ ಸಿನಿಮಾಗಳನ್ನು ತೆರೆಗೆ ತರುವ ಯೋಚನೆಗಳು ಆಯಾ ಚಿತ್ರತಂಡದ್ದು. ಅದಕ್ಕಾಗಿ, ಜನನಾಯಗನ್​ ಅಧಿಕೃತ ರಿಲೀಸ್​ ದಿನಾಂಕದ ಬಗ್ಗೆ ಹೆಚ್ಚು ಗಮನ ಹರಿಸಿವೆ. ಅಕಸ್ಮಾತ್​, ವಿಜಯ್ ಅವರ ಸಿನಿಮಾ ಬಿಡುಗಡೆಯಂದೇ ತಮ್ಮ ಸಿನಿಮಾವನ್ನು ತೆರೆಗೆ ತಂದರೆ ಎಲ್ಲಿ ಸೋಲು ಅನುಭವಿಸುವ ಪರಿಸ್ಥಿತಿ ಎದುರಾಗುತ್ತೋ ಎಂಬ ಭೀತಿ ಕಾಡುತ್ತಿವೆ.

ಫೆಬ್ರವರಿ 12 ಅಥವಾ...

ಆರಂಭದಲ್ಲಿ ಜ.9ಕ್ಕೆ ತೆರೆ ಕಾಣಲು ಸಜ್ಜಾಗಿದ್ದ ಜನನಾಯಗನ್​ ಚಿತ್ರತಂಡ, ಇಲ್ಲಿಯವರೆಗೆ ರಿಲೀಸ್​ಗಾಗಿ ಯಾವುದೇ ದಿನಾಂಕವನ್ನು ಘೋಷಣೆ ಮಾಡಿಲ್ಲ. ಇದು ದಳಪತಿ ವಿಜಯ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆದರೆ, ಇತ್ತೀಚಿನ ಸಿನಿ ವರದಿಗಳ ಪ್ರಕಾರ, ಫೆಬ್ರವರಿ 12 ಅಥವಾ 26ರಂದು ಬಿಡುಗಡೆಗೊಳ್ಳಲು ಎದುರುನೋಡುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಏನು ಹೇಳುತ್ತೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net