ಬೇಡದ ವಿಷಯಗಳು ಎಲ್ಲೆಡೆ ಹರಿದಾಡ್ತಿವೆ... ಸಿನಿಮಾಗೆ ಮಾತ್ರ ಸೆನ್ಸಾರ್​ ಮಂಡಳಿ​ ಏಕೆ? CBFC ವಿರುದ್ಧ ಆರ್​ಜಿವಿ ಕೆಂಡಾಮಂಡಲ

ದಳಪತಿ ವಿಜಯ್​ ನಟನೆಯ ಕೊನೆಯ ಚಿತ್ರ ಜನನಾಯಗನ್​
ದಳಪತಿ ವಿಜಯ್​ ನಟನೆಯ ಕೊನೆಯ ಚಿತ್ರ ಜನನಾಯಗನ್​
Published on

ಪ್ರಮುಖ ಮುಖ್ಯಾಂಶಗಳು

  • ದಳಪತಿ ವಿಜಯ್​ ಕೊನೆಯ ಚಿತ್ರಕ್ಕೆ ಸೆನ್ಸಾರ್​ ಮಂಡಳಿಯಿಂದ ಅಡಚಣೆ
  • ಜನನಾಯಗನ್​ ಚಿತ್ರದ ರಿಲೀಸ್​ ಈಗ ಮುಂದೂಡಿಕೆ
  • ಸಿಬಿಎಫ್​ಸಿ ವಿರುದ್ಧ ನಿರ್ದೇಶಕ ಆರ್​ಜಿವಿ ಗರಂ
ತಮಿಳುನಾಡು: ಕಾಲಿವುಡ್​ ಸ್ಟಾರ್​ ನಟ, ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್'​ ರಿಲೀಸ್​ಗೆ ಇದೀಗ ಸೆನ್ಸಾರ್​ ಮಂಡಳಿಯಿಂದ ಅಡಚಣೆ ಉಂಟಾಗಿದೆ. ​ ಕೋರ್ಟ್​ ಮೆಟ್ಟಿಲೇರಿದ ಚಿತ್ರತಂಡಕ್ಕೆ ಕಡೆಗೂ ಬಿಡುಗಡೆ ಭಾಗ್ಯ ಸಿಗದಿರುವುದು ಸದ್ಯ ಚಿತ್ರರಂಗದ ಸದಸ್ಯರು ಹಾಗೂ ಸಿನಿಪ್ರಿಯರನ್ನು ಕೆರಳಿಸಿದೆ. ಈ ವಿಚಾರಕ್ಕೆ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ರಾಜಕೀಯ ಪಿತೂರಿ?

ಭಾರಿ ನಿರೀಕ್ಷೆಗಳಿಂದ ಕೂಡಿದ್ದ ಚಿತ್ರವು ಇಂದು (ಜ.09) ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆಯಬೇಕಿತ್ತು. ಆದರೆ, ದಿಢೀರ್​ ಸೆನ್ಸಾರ್​ ಮಂಡಳಿ ವಿಧಿಸಿದ ಷರತ್ತುಗಳು ಮತ್ತು ಕೋರ್ಟ್​ ಮೆಟ್ಟಿಲೇರಿದ ಹಿನ್ನೆಲೆ ಸಿನಿಮಾ ಅಂದುಕೊಂಡಂತೆ ತೆರೆಗೆ ಬರಲು ಸಾಧ್ಯವಾಗಲಿಲ್ಲ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಆರಂಭದಲ್ಲಿ​ ಚಿತ್ರಕ್ಕೆ 27 ಕಟ್ಸ್​ ಹೇಳಿ, U/A ಪ್ರಮಾಣ ಪತ್ರಕ್ಕೆ ಶಿಫಾರಸು ಮಾಡಿತು. ಆದರೆ, ನಂತರದಲ್ಲಿ ಇದ್ದಕ್ಕಿದ್ದಂತೆ ಇದನ್ನು ಪರಿಷ್ಕರಣಾ ಸಮಿತಿಗೆ ಕಳುಹಿಸಿದಾಗ ಚಿತ್ರತಂಡ ಹಾಕಿಕೊಂಡಿದ್ದ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಯಿತು. ಸೆನ್ಸಾರ್ ಮಂಡಳಿಯ ಈ ವರ್ತನೆಗೆ ಬೇಸತ್ತ ನಿರ್ಮಾಪಕರು ಹೈಕೋರ್ಟ್‌ ಮೊರೆ ಹೋದರು.

ಮುಂದಿನ ವಿಚಾರಣೆ ಬಳಿಕ ರಿಲೀಸ್​ ಭಾಗ್ಯ

ಹೈಕೋರ್ಟ್‌ನ ಏಕ ನ್ಯಾಯಾಧೀಶರು ಸಿಬಿಎಫ್​ಸಿಯ ಯು/ಎ, 16+ ಪ್ರಮಾಣಪತ್ರವನ್ನು ನೀಡುವಂತೆ ಆದೇಶಿಸಿದರು. ಆದಾಗ್ಯೂ, ಅದೇ ದಿನ ಸಂಜೆ, CBFC ಮೇಲ್ಮನವಿ ಸಲ್ಲಿಸಿದಾಗ, ಮುಖ್ಯ ನ್ಯಾಯಮೂರ್ತಿಗಳ ಪೀಠವು ಆದೇಶವನ್ನು ತಡೆಹಿಡಿಯಿತು. ಈಗ, ಮುಂದಿನ ವಿಚಾರಣೆಯವರೆಗೆ ಚಿತ್ರದ ಬಿಡುಗಡೆಯು ಮತ್ತಷ್ಟು ವಿಳಂಬವಾಗಲಿದೆ ಎಂಬುದನ್ನು ಆದೇಶದ ಮೂಲಕ ಸ್ಪಷ್ಟಪಡಿಸಲಾಗಿದೆ. ಈ ಸಂದರ್ಭದಲ್ಲಿ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವಿಟರ್‌ನಲ್ಲಿ (ಪ್ರಸ್ತುತ ಎಕ್ಸ್) ಸೆನ್ಸಾರ್ ಮಂಡಳಿಯ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
"ಇದು ಇಂಟರ್ನೆಟ್ ಯುಗ. ಬೇಡದ ವಿಷಯಗಳು ಎಲ್ಲೆಡೆ ಮುಕ್ತವಾಗಿ ಹರಿದಾಡುತ್ತಿರುವಾಗ, ಚಲನಚಿತ್ರಗಳಿಗೆ ಏಕೆ ಈ ಸೆನ್ಸಾರ್ ಮಂಡಳಿ? ವಯಸ್ಸಿನ ಮಿತಿಗೆ ರೇಟಿಂಗ್‌ ಮತ್ತು ಎಚ್ಚರಿಕೆಗಳು ಕೊಡುವುದು ಓಕೆ. ಇದು ಸಂವಿಧಾನದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಮತ್ತು ಈ ವಾಸ್ತವದಲ್ಲಿ, ಸೆನ್ಸಾರ್ ಮಂಡಳಿಯು ಚಿತ್ರದಲ್ಲಿ ಬಳಸಲಾದ ಕೆಲವು ಪದಗಳಿಗೆ, ದೃಶ್ಯಗಳಿಗೆ ಕತ್ತರಿ ಹಾಕುವುದು ಅಥವಾ ಸಿಗರೇಟ್​ ಸೇದುವ ದೃಶ್ಯಗಳನ್ನು ಬ್ಲರ್​ ಮಾಡುವುದರಿಂದ ಸಮಾಜವನ್ನು ರಕ್ಷಿಸುತ್ತೇವೆ ಎಂಬ ನಂಬಿಕೆಗಳು ನಿಜಕ್ಕೂ ಹಾಸ್ಯಸ್ಪದ ಎಂದಿದ್ದಾರೆ.
ಇಂದು, ಯಾವುದೇ ರೀತಿಯ ನಿಯಂತ್ರಣ ಅಸಾಧ್ಯ. ಕಾರಣ, ಜನರು ಏನ್ನನ್ನು ವೀಕ್ಷಿಸಬೇಕು ಅಥವಾ ನೋಡಬಾರದು ಎಂಬುದನ್ನು ಯಾರೂ ಇನ್ನು ಮುಂದೆ ನಿರ್ಧರಿಸಲು ಸಾಧ್ಯವಿಲ್ಲ. ವಯಸ್ಸಿನ ಮಿತಿ, ವಿಷಯದ ಬಗ್ಗೆ ಎಚ್ಚರಿಕೆಗಳು ಅರ್ಥಪೂರ್ಣ. ಆದರೆ, ಸೆನ್ಸಾರ್​ಶಿಪ್​ ಅರ್ಥಹೀನವಾಗಿದೆ ಎಂದು ಸಿಬಿಎಫ್​ಸಿ ವಿರುದ್ಧ ಟ್ವೀಟ್​ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಮತ್ತೊಂದೆಡೆ ಈ ವಿವಾದದ ಹಿಂದೆ ರಾಜಕೀಯ ಪಿತೂರಿಗಳಿವೆ ಎಂಬ ಬಲವಾದ ಆರೋಪಗಳು ಕೇಳಿಬಂದಿವೆ.

ಹಾಗಿದ್ರೆ ರಿಲೀಸ್​ ಯಾವಾಗ?

ದಳಪತಿ ವಿಜಯ್ ರಾಜಕೀಯ ಪ್ರವೇಶಿಸಿರುವುದು ಕೆಲವರಿಂದ ಸಹಿಸಲಾಗುತ್ತಿಲ್ಲ. ಈ ತೊಂದರೆಗಳಿಗೆ ಇದೇ ಕಾರಣ ಎನ್ನಲಾಗಿದೆ. ಹೀಗಾಗಿಯೇ, ನಟನ ಅಭಿಮಾನಿಗಳು ಇಂತಹ ಅಡೆತಡೆಗಳು ಬರುತ್ತಿವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸಿನಿಪ್ರಿಯರಲ್ಲಿ ಕಾಡುತ್ತಿರುವ ಏಕೈಕ ಪ್ರಶ್ನೆ, ಚಿತ್ರ ಯಾವಾಗ ರಿಲೀಸ್ ಆಗಲಿದೆ ಎಂದು? ವಿಜಯ್​ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾವನ್ನು ಮೆರವಣಿಗೆ ಮೂಲಕ ಭರ್ಜರಿಯಾಗಿ ಸಂಭ್ರಮಿಸಲು ತೀರ ಕುತೂಹಲದಿಂದ ಕಾಯತೊಡಗಿದ್ದಾರೆ. ಆದರೆ, ಬಿಡುಗಡೆಗೆ ಎದುರಾಗಿರುವ ಅಡಚಣೆಗಳು ಸದ್ಯ ಬೇಸರ ತಂದೊಡ್ಡಿದೆ ಎಂದೇ ಹೇಳಬಹುದು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net