ಏನ್​ ಮಾಡೋದು ನಮ್ಮ ಹೀರೋ ಕತೆ ಒಪ್ಪಲಿಲ್ಲ... ರಜಿನಿ ಬಗ್ಗೆ ಕಮಲ್​ ಅಚ್ಚರಿ ಹೇಳಿಕೆ! Rajinikanth

ನಟರಾದ ರಜಿನಿಕಾಂತ್​ ಮತ್ತು ಕಮಲ್​ ಹಾಸನ್​
ನಟರಾದ ರಜಿನಿಕಾಂತ್​ ಮತ್ತು ಕಮಲ್​ ಹಾಸನ್​
Published on

ಪ್ರಮುಖ ಮುಖ್ಯಾಂಶಗಳು

  • ಸೂಪರ್​ ಸ್ಟಾರ್​ ರಜಿನಿಕಾಂತ್​ ಮುಂದಿನ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ
  • ಸಕಲಕಲಾ ವಲ್ಲಭ ಕಮಲ್​ ಹಾಸನ್​ ನಿರ್ಮಾಣದಲ್ಲಿ ರಜಿನಿ ಸಿನಿಮಾ
  • ನಿರ್ದೇಶನದಿಂದ ಹಿಂದೆ ಸರಿದ ಕಾಲಿವುಡ್​ನ ಖ್ಯಾತ ನಿರ್ದೇಶಕ ಸುಂದರ್.ಸಿ
  • ಹೊಸ ನಿರ್ದೇಶಕನಿಗಾಗಿ ನಿರ್ಮಾಪಕ ಕಮಲ್​ ಹಾಸನ್​ ಹುಡುಕಾಟ
ಚೆನ್ನೈ: ಕೂಲಿ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸೂಪರ್​ ಸ್ಟಾರ್​ ರಜಿನಿಕಾಂತ್​ ( Rajinikanth ) ಅವರ ಮುಂದಿನ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳು ಉಂಟಾಗಿವೆ. ಸಕಲಕಲಾವಲ್ಲಭ ಕಮಲ್​ ಹಾಸನ್​ ಅವರ ರಾಜ್​ಕಮಲ್​ ಫಿಲ್ಮ್ಸ್​ ಇಂಟರ್ನ್ಯಾಷನಲ್​ ನಿರ್ಮಾಣ ಸಂಸ್ಥೆ​​ ರಜಿನಿಗೆ ಚಿತ್ರ ನಿರ್ಮಾಣ ಮಾಡಲಿದ್ದು, ಹಲವು ದಶಕಗಳ ಬಳಿಕ ರಜಿನಿ ಮತ್ತು ಕಮಲ್​ ಮತ್ತೆ ಒಂದಾಗಲಿದ್ದಾರೆ. ಈ ಸಿನಿಮಾ ವಿಚಾರವಾಗಿ ಇತ್ತೀಚೆಗೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ.
ಅಂದಹಾಗೆ, ರಜಿನಿ-ಕಮಲ್​ ಸಿನಿಮಾಗಾಗಿ ಅಭಿಮಾನಿಗಳು ಬಹಳ ವರ್ಷಗಳಿಂದಲೇ ಕಾಯುತ್ತಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕಮಲ್ ಹಾಸನ್ ಅವರು ಶೀಘ್ರದಲ್ಲೇ ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡಲಿದ್ದೇವೆ ಎಂದು ಘೋಷಣೆ ಮಾಡಿದರು. ಈ ಮಾತು ಕೇಳಿ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಇಬ್ಬರ ಕಾಂಬಿನೇಷನ್​ನಲ್ಲಿ ಮಲ್ಟಿ ಸ್ಟಾರರ್​ ಸಿನಿಮಾ ಬಂದರೆ ಖಂಡಿತ ಚಿತ್ರರಂಗದ ಎಲ್ಲ ದಾಖಲೆಗಳು ಬ್ರೇಕ್​ ಆಗಲಿವೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಆದರೆ, ಬಹಳ ಸಮಯ ಕಳೆದರೂ, ಈ ಯೋಜನೆಯ ಬಗ್ಗೆ ಯಾವುದೇ ಘೋಷಣೆ ಬಂದಿರಲಿಲ್ಲ. ಹೀಗಾಗಿ, ಈ ಸಿನಿಮಾ ಬರುವುದು ಅನುಮಾನ ಎಂಬ ಮಾತುಗಳು ಕೂಡ ಕೇಳಿಬರುತ್ತಿತ್ತು. ಆದಾಗ್ಯೂ, ಕಮಲ್ ಹಾಸನ್ ಈ ಕಾಂಬೋದಲ್ಲಿ ಒಂದು ಸಿನಿಮಾ ಬರುವುದು ಗ್ಯಾರಂಟಿ ಎಂದು ಅಧಿಕೃತವಾಗಿ ಘೋಷಣೆ ಮಾಡಿದಾಗ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು. ಏಕೆಂದರೆ, ಇದು ಅಭಿಮಾನಿಗಳ ಬಹುದಿನಗಳ ಕನಸಾಗಿದೆ.
ಇಲ್ಲಿ ಒಂದು ಟ್ವಿಸ್ಟ್​ ಏನೆಂದರೆ, ಈ ಚಿತ್ರಕ್ಕೆ ಕಮಲ್​ ಹಾಸನ್​ ಕೇವಲ ನಿರ್ಮಾಪಕ ಮಾತ್ರ. ರಜನಿಕಾಂತ್ ನಾಯಕನಾಗಿ ನಟಿಸುವ ಸಿನಿಮಾಗೆ ಕಮಲ್ ಅವರು ಬಂಡವಾಳ ಹೂಡಲಿದ್ದಾರೆ ಹೊರತು, ಅವರು ನಟನೆ ಮಾಡುವುದಿಲ್ಲ. ಇದರ ನಡುವೆ ಈ ವಾರದ ಆರಂಭದಲ್ಲಿ ಖ್ಯಾತ ನಿರ್ದೇಶಕ ಸುಂದರ್.ಸಿ ಅವರು ಈ ಬಿಗ್​ ಬಜೆಟ್ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ ಎಂದು ಕಮಲ್​ ಹಾಸನ್​ ಅವರು ಘೋಷಿಸಿದರು. ಇನ್ನೇನು ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಏನಾಯಿತೋ ಕಾಣೆ, ನಿರ್ದೇಶಕ ಸುಂದರ್ ಸಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ, ಈ ಚಿತ್ರದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದರು. ಅನಿವಾರ್ಯ ಕಾರಣಗಳಿಂದ ಈ ಸಿನಿಮಾವನ್ನು ಕೈಬಿಡುತ್ತಿರುವುದಾಗಿ ತಿಳಿಸಿದರು. ಹೀಗಾಗಿ, ರಜಿನಿ-ಕಮಲ್​ ಚಿತ್ರಕ್ಕೆ ವಿಘ್ನ ಎದುರಾಗಿದೆ. ಈ ಸಿನಿಮಾ ಸೆಟ್ಟೇರುತ್ತಾ? ಇಲ್ಲವಾ? ಅನ್ನೋದೇ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.

ಆಸೆ ಮೂಡಿಸಿದ ಕಮಲ್​ ಹೇಳಿಕೆ

ಇತ್ತೀಚೆಗೆ ಮಾಧ್ಯಮಗಳ ಮುಂದೆ ಮಾತನಾಡಿದ ಕಮಲ್ ಹಾಸನ್, ಈ ಯೋಜನೆಯ ಬಗ್ಗೆ ನಾನು ಏನೂ ಹೇಳಲಾರೆ. ನಾನು ಒಬ್ಬ ನಿರ್ಮಾಪಕ ಮಾತ್ರ. ನನ್ನ ನಾಯಕನಿಗೆ ಕಥೆ ಇಷ್ಟವಾಗಲಿಲ್ಲ. ಆತನಿಗೆ ಇಷ್ಟವಾಗುವಂತಹ ಕಥೆಯನ್ನು ತರುವುದು ನನ್ನ ಜವಾಬ್ದಾರಿಯಾಗಿದೆ. ಈಗ ನಾವು ಒಟ್ಟಿಗೆ ಮಾಡಲಿರುವ ಚಿತ್ರಕ್ಕೆ ನಿರ್ದೇಶಕರನ್ನು ಹುಡುಕುತ್ತಿದ್ದೇವೆ ಎಂದು ಕಮಲ್ ಹಾಸನ್ ಹೇಳಿಕೆ ನೀಡಿದ್ದಾರೆ.
ಕಮಲ್​ ಅವರ ಮಾತುಗಳನ್ನು ಕೇಳಿದ ಅಭಿಮಾನಿಗಳು ರಜಿನಿ-ಕಮಲ್​ ಚಿತ್ರ ಬರುವುದು ಗ್ಯಾರಂಟಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಆದಷ್ಟು ಬೇಗ ಸಿನಿಮಾ ತೆರೆ ಕಾಣಲಿ ಎಂದು ಬೇಡಿಕೊಳ್ಳುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net