5 ರೂ.ಗೆ ಪರೋಟಾ, ಎದೆಯಲ್ಲಿ ರಜಿನಿ... ಅಭಿಮಾನಿಯ ಕಾರ್ಯಕ್ಕೆ ಮೆಚ್ಚಿ ಚಿನ್ನದ ಸರ ಕೊಟ್ಟ 'ತಲೈವಾ' | ​Rajinikanth

ರಜನಿಕಾಂತ್ ಜತೆ ಅಭಿಮಾನಿ ಶೇಖರ್​
ರಜನಿಕಾಂತ್ ಜತೆ ಅಭಿಮಾನಿ ಶೇಖರ್​
Published on

ಪ್ರಮುಖ ಮುಖ್ಯಾಂಶಗಳು

  • ಅಭಿಮಾನಿಯ ಕಾರ್ಯ ಮೆಚ್ಚಿದ ತಮಿಳಿನ ಸೂಪರ್​ಸ್ಟಾರ್ ರಜಿನಿಕಾಂತ್​
  • ಹೋಟೆಲ್​ ಮಾಲೀಕ, ಅಭಿಮಾನಿ ಶೇಖರ್ ಕೆಲಸಕ್ಕೆ ರಜಿನಿ ಶ್ಲಾಘನೆ​
  • ಶೇಖರ್​ಗೆ ಚಿನ್ನದ ಸರ ಉಡುಗೊರೆಯಾಗಿ ನೀಡಿದ ತಲೈವಾ
ಮಧುರೈ: ತಮಿಳು ಚಿತ್ರರಂಗದ ಸೂಪರ್​ಸ್ಟಾರ್, ಅಭಿಮಾನಿಗಳ ನೆಚ್ಚಿನ ತಲೈವಾ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಪ್ರತಿಯೊಬ್ಬ ಚಿತ್ರಪ್ರೇಮಿಗೂ ರಜಿನಿ ಕಂಡರೆ ಅದೇನೋ ವಿಶೇಷ ಪ್ರೀತಿ, ಅಭಿಮಾನ. ಕಾರಣ, ನಟನೆಯಲ್ಲಿ ಅವರ ವಿಭಿನ್ನತೆ ಹಾಗೂ ವಿಶಿಷ್ಟ ಸ್ವ್ಯಾಗ್​. ಮಾಸ್ಸಿಗೂ, ಕ್ಲಾಸಿಗೂ ಸೈ ಎನ್ನುವ ರಜಿನಿಕಾಂತ್​, ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ಅದರಾಚೆಗೂ ತಮ್ಮ ಸಜ್ಜನಿಕೆ ಮತ್ತು ಸರಳತೆಯಿಂದ ಎಲ್ಲರ ಹೃದಯ ಗೆಲ್ತಾರೆ ಅನ್ನೋದಕ್ಕೆ ಈ ಘಟನೆಯೂ ಒಂದು ಸಾಕ್ಷಿ.
ತಮಿಳು ಅಭಿಮಾನಿಗಳು ಸೇರಿದಂತೆ ಅನೇಕರು ಇಂದು ರಜನಿಕಾಂತ್​ರನ್ನು ದೇವರಂತೆ ಪೂಜಿಸುತ್ತಾರೆ. ಅದರಲ್ಲೂ, ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಹಾಗೂ ಸ್ಟಾರ್​ ವಾರ್​ಗೆ ಕಾರಣವಾಗುವ ಇಂದಿನ ಕಾಲಘಟ್ಟದ ಅಭಿಮಾನಿಗಳ ಮಧ್ಯೆ ತಮ್ಮ ನೆಚ್ಚಿನ ನಾಯಕನನ್ನು ಸ್ಮರಿಸಿ, ಅವರ ಹೆಸರಿನಲ್ಲಿ ಇತರರಿಗೆ ಅನ್ನ ಸಂತರ್ಪಣೆ, ಧಾನ ಸೇರಿದಂತೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುವ ಹಳೆಯ ತಲೆಮಾರಿನ ಅಭಿಮಾನಿಗಳು ಇಂದಿಗೂ ಇದ್ದಾರೆ ಎಂಬುದಕ್ಕೆ ತಮಿಳುನಾಡಿನ ಮಧುರೈನ ಶೇಖರ್​ ಉತ್ತಮ ಉದಾಹರಣೆ.
ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ರಜಿನಿ ಅಭಿಮಾನಿಗಳ ಮೆಚ್ಚುಗೆಗೆ ಗುರಿಯಾಗಿರುವ ಶೇಖರ್​, ಮಧುರೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ವಿಶೇಷ ಏನಪ್ಪ ಅಂದರೆ, ಅವರು ಕಳೆದ 15 ವರ್ಷಗಳಿಂದ ಕೇವಲ 5 ರೂ.ಗೆ ಪರೋಟಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಸ್ಥಳೀಯವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಹೋಟೆಲ್ ತುಂಬೆಲ್ಲ ರಜನಿಕಾಂತ್ ಅವರದ್ದೇ ಫೋಟೋಗಳಿವೆ. ಎತ್ತ ನೋಡಿದರೂ ತಲೈವಾ ಸಿನಿಮಾಗಳ ಪೋಟೋಗಳೇ ಕಾಣುತ್ತವೆ.
ಇಲ್ಲಿಗೆ ನಿಲ್ಲದ ಇವರ ಅಭಿಮಾನ, ತಮ್ಮ ಎದೆಯ ಮೇಲೆ ರಜಿನಿಕಾಂತ್​ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮುಖ್ಯವಾಗಿ, ಇಂದಿನ ದಿನಗಳಲ್ಲಿ, ಕೇವಲ 5 ರೂ.ಗೆ ಪರೋಟ ನೀಡುವುದು ಸಾಮಾನ್ಯ ವಿಷಯವಲ್ಲ. ಲಾಭಕ್ಕಿಂತ ಜನರ ಹೊಟ್ಟೆ ತುಂಬಿಸುವುದು ಮುಖ್ಯ ಎಂದು ನಂಬಿರುವ ಅಭಿಮಾನಿ ಶೇಖರ್ ಅವರ ಹೃದಯ ಶ್ರೀಮಂತಿಕೆಯನ್ನು ಸ್ವತಃ ತಲೈವಾ ಅವರೇ ಕೊಂಡಾಡಿದ್ದಾರೆ. ಶೇಖರ್ ಹೋಟೆಲ್​ ಬಗ್ಗೆ ಮಾಹಿತಿ ಪಡೆದ ರಜಿನಿಕಾಂತ್​, ಇತ್ತೀಚೆಗಷ್ಟೇ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಆತ್ಮೀಯವಾಗಿ ಮಾತನಾಡಿಸಿದ್ದಾರೆ.
ತಮ್ಮ ಮೇಲೆ ಇಷ್ಟೊಂದು ಅಭಿಮಾನ, ಪ್ರೀತಿ ತೋರಿಸಿದ ಅಭಿಮಾನಿಯನ್ನು ತಬ್ಬಿಕೊಂಡ ರಜನಿಕಾಂತ್, ಶೇಖರ್ ಅವರ ಕೆಲಸವನ್ನು ಮೆಚ್ಚಿ, ತಮ್ಮ ಬಳಿಯಿದ್ದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷ. ಅಭಿಮಾನಿಯ ಕೆಲಸವನ್ನು ಗುರುತಿಸಿ, ಅವರಿರುವ ಜಾಗಕ್ಕೆ ಬಂದು ಮಾತನಾಡಿಸುವ ನಟನ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net