ಹೀರೋ ಮೆಟಿರಿಯಲ್ ಅಲ್ಲದ ನಟನಿಂದಲೇ ಬ್ಲಾಕ್​ಬಸ್ಟರ್ಸ್; 'ಲವ್​' ಬಿಡದ ಪ್ರದೀಪ್​ ಹೊಸ ಚಿತ್ರಕ್ಕೆ ಕಡೆಗೂ ರಿಲೀಸ್ ಭಾಗ್ಯ

ತಮಿಳು ನಟ ಪ್ರದೀಪ್ ರಂಗನಾಥನ್​
ತಮಿಳು ನಟ ಪ್ರದೀಪ್ ರಂಗನಾಥನ್​
Published on

ಪ್ರಮುಖ ಮುಖ್ಯಾಂಶಗಳು

  • ತಮಿಳು ನಟ ಪ್ರದೀಪ್ ರಂಗನಾಥನ್ ಅಭಿನಯದ 'LIK' ಚಿತ್ರಕ್ಕೆ ಕಡೆಗೂ ಫಿಕ್ಸ್ ಆಯ್ತು ರಿಲೀಸ್​ ಡೇಟ್​
  • ಪದೇ ಪದೇ ಮುಂದೋಗುತ್ತಿದ್ದ ಬಹುನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕ ನಿಗದಿ
  • ಹೀರೋ ಮೆಟಿರಿಯಲ್ ಅಲ್ಲದ ನಟನಿಂದಲೇ ಬ್ಯಾಕ್ ಟು ಬ್ಯಾಕ್ ಹಿಟ್​ ಚಿತ್ರಗಳು
ಚೆನ್ನೈ: ತಮಿಳಿನ ಸೂಪರ್​ಹಿಟ್ 'ಲವ್​ ಟುಡೇ',​ ‘ಡ್ರ್ಯಾಗನ್’ ಚಿತ್ರಗಳ ಮೂಲಕ ಯುವ ಪ್ರೇಕ್ಷಕರ ಮನ ಗೆದ್ದಿರುವ ಹಾಗೂ ಭರ್ಜರಿ ಯಶಸ್ಸು ಕಂಡಿರುವ ನಟ ಪ್ರದೀಪ್​ ರಂಗನಾಥನ್ (Pradeep Ranganathan), ಇದೀಗ ಅದೇ ಯುವಜನತೆ ಮುಂದೆ ತಾವು ಅಭಿನಯದ ಮತ್ತೊಂದು ಸಿನಿಮಾ ಮೂಲಕ ಚಿತ್ರಮಂದಿರಕ್ಕೆ ಲಗ್ಗೆಯಿಡಲು ತುದಿಗಾಲಿನಲ್ಲಿದ್ದಾರೆ. ಈ ಚಿತ್ರದ ಮೇಲೆ ಸದ್ಯ ಅವರ ಯುವ ಅಭಿಮಾನಿಗಳ ಬಳಗ ಹಾಗೂ ತಮಿಳು ಸಿನಿಪ್ರಿಯರು ಸಖತ್ ಥ್ರಿಲ್​ ಆಗಿದ್ದಾರೆ. ಯಾಕಂತ ಕಾತರ ಎಂಬ ಪ್ರಶ್ನೆಗೆ 'ಲವ್​' ಅನ್ನೋದೇ ಉತ್ತರ.

18,17,18...

ವಿಘ್ನೇಶ್​ ಶಿವನ್ ನಿರ್ದೇಶನದ ಹಾಗೂ ಪ್ರದೀಪ್ ಮತ್ತು ನಟಿ ಕೃತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸೈ-ಫೈ, ಕಾಮಿಡಿ ಜಾನರ್​​ ಬಹುನಿರೀಕ್ಷಿತ 'ಲವ್​ ಇನ್ಶೂರೆನ್ಸ್ ಕಂಪನಿ' ಚಿತ್ರವು ಇದೇ ಏಪ್ರಿಲ್​ 03ಕ್ಕೆ ತೆರೆಕಾಣಲು ಸಿದ್ಧವಾಗಿದೆ. ಇದು ಅಂತಿಮ ದಿನಾಂಕವಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ. ಇದಕ್ಕೂ ಮೊದಲು, 2025ರಲ್ಲೇ ತೆರೆಗೆ ಬರಬೇಕಿದ್ದ ಪ್ರದೀಪ್​ ಸಿನಿಮಾ, ಆರಂಭದಲ್ಲಿ ಸೆ.18ರಂದು ರಿಲೀಸ್​ಗೆ ಫಿಕ್ಸ್​ ಆಗಿತ್ತು. ಆನಂತರ ಅ.17 ಮತ್ತು ಕೊನೆಯದಾಗಿ ಡಿ.18ಕ್ಕೆ ಮುಂದೂಡಿಕೆಯಾಯಿತು. ಆದರೆ, ಆ ದಿನಕ್ಕೂ ಸಿನಿಮಾ ಬಿಡುಗಡೆಯಾಗಲಿಲ್ಲ. ನಂತರದಲ್ಲಿ, ಫೆ.12ಕ್ಕೆ ಎನ್ನಲಾಯಿತು. ಆದರೀಗ, ಏ.03ರಂದು ಖಚಿತ ಎಂದು ಸ್ಪಷ್ಟಪಡಿಸಿದೆ ಚಿತ್ರತಂಡ.  

LIK?

ವಿಘ್ನೇಶ್ ಶಿವನ್​ ನಿರ್ದೇಶಿಸಿರುವ ಹಾಗೂ ನಿರ್ಮಾಣ ಮಾಡಿರುವ 'ಲವ್​ ಇನ್ಶೂರೆನ್ಸ್​ ಕಂಪನಿ' ಚಿತ್ರದಲ್ಲಿ ಪ್ರದೀಪ್ ರಂಗನಾಥನ್​, ಕೃತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಿವನ್​ ಮತ್ತು ನಟಿ ನಯನತಾರಾ ಬಂಡವಾಳ ಹೂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್​ ಸಿನಿಮಾಗೆ ಮ್ಯೂಸಿಕ್ ಕಂಪೋಸ್​ ಮಾಡಿರುವುದು ವಿಶೇಷ. ಈ ಚಿತ್ರವೂ ಲವ್​ ಜಾನರ್ ಆಗಿದ್ದು, ಪ್ರದೀಪ್​ ಚಿತ್ರಗಳಲ್ಲಿ ಲವ್​ ಕಂಟೆಂಟ್​ ಇಲ್ಲದಿರಲು ಸಾಧ್ಯವೇ ಇಲ್ವಾ? ಎನ್ನುವಂತಾಗಿದೆ. 

'ಹೀರೋ ಮೆಟಿರಿಯಲ್​' ಅಲ್ಲದ ನಟ

ಸಾಧಾರಣ ಮೈಕಟ್ಟು, ಸಿಂಪಲ್​ ಲುಕ್​ ಮತ್ತು ಅಭಿನಯದಿಂದಲೇ ಇಂದು ಅಪಾರ ಸಿನಿಪ್ರಿಯರನ್ನು ಸಂಪಾದಿಸಿರುವ ಪ್ರದೀಪ್​, ಇದೀಗ ತಮ್ಮ ಅಭಿಮಾನಿಗಳ ಬಳಗ ಮಾತ್ರವಲ್ಲದೇ ಅವಕಾಶಗಳು ಹಾಗೂ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಅದು ಕೇವಲ ಎರಡ್ಮೂರು ಚಿತ್ರಗಳಿಂದ ಎಂಬುದು ಗಮನಾರ್ಹ. 2022ರಲ್ಲಿ, ಪ್ರದೀಪ್ 'ಲವ್ ಟುಡೇ' ಎಂಬ ಚಿತ್ರದ ಮುಖೇನ ಕಾಲಿವುಡ್​ಗೆ ಪಾದಾರ್ಪಣೆ ಮಾಡಿದ ಅವರು, 'ಡ್ರ್ಯಾಗನ್​' ಚಿತ್ರದಲ್ಲಿ ಅಪಾರ ಯಶಸ್ಸು ಕಂಡರು. ಇದಾದ ಬಳಿಕ ತೆರೆಕಂಡ 'ಡ್ಯೂಡ್'​ನಲ್ಲಿ ಅಂತಹ ಗೆಲುವು ಕಾಣಲಿಲ್ಲ. ಆದರೆ, ಅವರ ನಟನೆಗೆ ಎಂದಿನಂತೆ ಪ್ರಶಂಸೆಗಳು ವ್ಯಕ್ತವಾಯಿತು. ​

'ಲವ್'​ ಸಿನಿಮಾಗಳಿಂದಲೇ ಪ್ರದೀಪ್​ಗೆ ಭರ್ಜರಿ ಯಶಸ್ಸು

'ಲವ್ ಟುಡೇ', 'ಡ್ರ್ಯಾಗನ್'​ ಮತ್ತು 'ಡ್ಯೂಡ್'​ ಈಗಿನ ಕಾಲಘಟ್ಟದ ಯುವಜನತೆಯ ಪ್ರೇಮಕಥೆಗಳು ಮತ್ತು ಮನಸ್ಥಿತಿಗಳ ಮೇಲೆ ಹೆಚ್ಚು ಫೋಕಸ್​ ಮಾಡಲಾದ ಚಿತ್ರಗಳು. ಈ ಮೂರರಲ್ಲೂ ಲವ್​​ಸ್ಟೋರಿ, ಕಾಮಿಡಿ ಮತ್ತು ಒಂದೊಳ್ಳೆ ಸಂದೇಶಗಳಿವೆ. ಇದು ಸಿನಿಮಾ ನೋಡಲು ಬರುವ ಪ್ರೇಕ್ಷಕನನ್ನು ಕಥೆಗೆ ಹೊಂದಿಕೊಳ್ಳುವಂತೆ ಮಾಡಿವೆ ಮತ್ತು ಭರಪೂರ ಮನರಂಜನೆಯನ್ನು ನೀಡಿವೆ. ಈ ಚಿತ್ರಗಳೇ ಇಂದು ಪ್ರದೀಪ್​ಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದು, 'ಲವ್​ ಇನ್ಶೂರೆನ್ಸ್ ಕಂಪನಿ' ಮೇಲೂ ಅದೇ ಭರವಸೆ, ನಿರೀಕ್ಷೆಗಳು ಮೂಡುವಂತೆ ಮಾಡಿದೆ. ಡ್ಯೂಡ್​ ಫ್ಲಾಪ್​ ಆಗಿದ್ದು, 'ಎಲ್​ಐಕೆ' ಹೇಗೆ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net