'ಹೀರೋ ಮೆಟಿರಿಯಲ್' ಅಲ್ಲದ ನಟನಿಂದಲೇ ಬ್ಲಾಕ್​ಬಸ್ಟರ್​ಗಳು! 'ಲವ್​' ಬಿಡದ ಪ್ರದೀಪ್​ ಹೊಸ ಚಿತ್ರ ಫೆ.12ಕ್ಕೆ ತೆರೆಗೆ? ​

ತಮಿಳು ಯುವನಟ ಪ್ರದೀಪ್ ರಂಗನಾಥನ್
ತಮಿಳು ಯುವನಟ ಪ್ರದೀಪ್ ರಂಗನಾಥನ್
Published on

ಪ್ರಮುಖ ಮುಖ್ಯಾಂಶಗಳು

  • ಯುವನಟ ಪ್ರದೀಪ್ ರಂಗನಾಥನ್ ಅಭಿನಯದ 'LIK' ಫೆ.12ಕ್ಕೆ ತೆರೆಗೆ
  • ಲವ್​ ಜಾನರ್​ ಬಿಟ್ಟು ಹೋಗದ ಪ್ರದೀಪ್​ರಿಂದ ಮತ್ತೊಂದು ಬಹುನಿರೀಕ್ಷಿತ ಚಿತ್ರ
  • ಬ್ಯಾಕ್​ ಟು ಬ್ಯಾಕ್​ ಮುಂದೂಡಿಕೆ, ಈಗಲಾದರೂ ಸಿಗಲಿದೆಯೇ ರಿಲೀಸ್ ಭಾಗ್ಯ?
ಚೆನ್ನೈ: ತಮಿಳಿನ ಸೂಪರ್​ಹಿಟ್ 'ಲವ್​ ಟುಡೇ',​ ‘ಡ್ರ್ಯಾಗನ್’ ಚಿತ್ರಗಳ ಮೂಲಕ ಯುವ ಪ್ರೇಕ್ಷಕರ ಮನ ಗೆದ್ದಿರುವ ಹಾಗೂ ಭರ್ಜರಿ ಯಶಸ್ಸು ಕಂಡಿರುವ ನಟ ಪ್ರದೀಪ್​ ರಂಗನಾಥನ್ (Pradeep Ranganathan), ಇದೀಗ ಅದೇ ಯುವಜನತೆ ಮುಂದೆ ತಾವು ಅಭಿನಯದ ಮತ್ತೊಂದು ಸಿನಿಮಾ ಮೂಲಕ ಚಿತ್ರಮಂದಿರಕ್ಕೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ. ಈ ಚಿತ್ರದ ಮೇಲೆ ಸದ್ಯ ಅವರ ಯುವ ಅಭಿಮಾನಿಗಳ ಬಳಗ ಹಾಗೂ ತಮಿಳು ಸಿನಿಪ್ರಿಯರು ಸಖತ್ ಥ್ರಿಲ್​ ಆಗಿದ್ದಾರೆ. ಯಾಕಂತ ಕಾತರ ಎಂಬ ಪ್ರಶ್ನೆಗೆ 'ಲವ್​' ಅನ್ನೋದೇ ಉತ್ತರ.

18,17,18...

ಪ್ರದೀಪ್​ ನಟನೆಯ ಬಹುನಿರೀಕ್ಷಿತ 'ಲವ್​ ಇನ್ಶೂರೆನ್ಸ್ ಕಂಪನಿ' ಚಿತ್ರವು ತೆರೆಕಾಣಲು ಸಿದ್ಧವಾಗಿದೆ ಎಂಬ ಸುದ್ದಿಗಳು ಕಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿವೆ. ಇದೇ ಫೆ.12ರಂದು ಸಿನಿಮಾ ಬಹುತೇಕ ಥಿಯೇಟರ್​ಗಳಲ್ಲಿ ರಿಲೀಸ್ ಆಗಲಿದೆ ಎಂದು ಸಿನಿ ವರದಿಗಳು ತಿಳಿಸಿವೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 2025ರಲ್ಲೇ ತೆರೆಗೆ ಬರಬೇಕಿದ್ದ ಪ್ರದೀಪ್​ ಸಿನಿಮಾ, ಆರಂಭದಲ್ಲಿ ಸೆ.18ರಂದು ರಿಲೀಸ್​ಗೆ ಫಿಕ್ಸ್​ ಆಗಿತ್ತು. ಆನಂತರ ಅ.17 ಮತ್ತು ಕೊನೆಯದಾಗಿ ಡಿ.18ಕ್ಕೆ ಮುಂದೂಡಿಕೆಯಾಯಿತು. ಆದರೆ, ಆ ದಿನಕ್ಕೂ ಸಿನಿಮಾ ಬಿಡುಗಡೆಯಾಗಲಿಲ್ಲ. ಈಗ ಫೆ.12 ಎನ್ನಲಾಗಿದೆ. ಇದೇನಾಗುತ್ತೆ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

'ಹೀರೋ ಮೆಟಿರಿಯಲ್​' ಅಲ್ಲದ ನಟ

ಸಾಧಾರಣ ಮೈಕಟ್ಟು, ಸಿಂಪಲ್​ ಲುಕ್​ ಮತ್ತು ಅಭಿನಯದಿಂದಲೇ ಇಂದು ಅಪಾರ ಸಿನಿಪ್ರಿಯರನ್ನು ಸಂಪಾದಿಸಿರುವ ಪ್ರದೀಪ್​, ಇದೀಗ ತಮ್ಮ ಅಭಿಮಾನಿಗಳ ಬಳಗ ಮಾತ್ರವಲ್ಲದೇ ಅವಕಾಶಗಳು ಹಾಗೂ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಅದು ಕೇವಲ ಎರಡ್ಮೂರು ಚಿತ್ರಗಳಿಂದ ಎಂಬುದು ಗಮನಾರ್ಹ. 2022ರಲ್ಲಿ, ಪ್ರದೀಪ್ 'ಲವ್ ಟುಡೇ' ಎಂಬ ಚಿತ್ರದ ಮುಖೇನ ಕಾಲಿವುಡ್​ಗೆ ಪಾದಾರ್ಪಣೆ ಮಾಡಿದ ಅವರು, 'ಡ್ರ್ಯಾಗನ್​' ಚಿತ್ರದಲ್ಲಿ ಅಪಾರ ಯಶಸ್ಸು ಕಂಡರು. ಇದಾದ ಬಳಿಕ ತೆರೆಕಂಡ 'ಡ್ಯೂಡ್'​ನಲ್ಲಿ ಅಂತಹ ಗೆಲುವು ಕಾಣಲಿಲ್ಲ. ಆದರೆ, ಅವರ ನಟನೆಗೆ ಎಂದಿನಂತೆ ಪ್ರಶಂಸೆಗಳು ವ್ಯಕ್ತವಾಯಿತು. ​

LIK?

ವಿಘ್ನೇಶ್ ಶಿವನ್​ ನಿರ್ದೇಶಿಸಿರುವ ಹಾಗೂ ನಿರ್ಮಾಣ ಮಾಡಿರುವ 'ಲವ್​ ಇನ್ಶೂರೆನ್ಸ್​ ಕಂಪನಿ' ಚಿತ್ರದಲ್ಲಿ ಪ್ರದೀಪ್ ರಂಗನಾಥನ್​, ಕೃತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಿವನ್​ ಮತ್ತು ನಟಿ ನಯನತಾರಾ ಬಂಡವಾಳ ಹೂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್​ ಸಿನಿಮಾಗೆ ಮ್ಯೂಸಿಕ್ ಕಂಪೋಸ್​ ಮಾಡಿರುವುದು ವಿಶೇಷ. ಈ ಚಿತ್ರವೂ ಲವ್​ ಜಾನರ್ ಆಗಿದ್ದು, ಪ್ರದೀಪ್​ ಚಿತ್ರಗಳಲ್ಲಿ ಲವ್​ ಕಂಟೆಂಟ್​ ಇಲ್ಲದಿರಲು ಸಾಧ್ಯವೇ ಇಲ್ವಾ? ಎನ್ನುವಂತಾಗಿದೆ.

'ಲವ್'​ ಸಿನಿಮಾಗಳಿಂದಲೇ ಪ್ರದೀಪ್​ಗೆ ಭರ್ಜರಿ ಯಶಸ್ಸು

'ಲವ್ ಟುಡೇ', 'ಡ್ರ್ಯಾಗನ್'​ ಮತ್ತು 'ಡ್ಯೂಡ್'​ ಈಗಿನ ಕಾಲಘಟ್ಟದ ಯುವಜನತೆಯ ಪ್ರೇಮಕಥೆಗಳು ಮತ್ತು ಮನಸ್ಥಿತಿಗಳ ಮೇಲೆ ಹೆಚ್ಚು ಫೋಕಸ್​ ಮಾಡಲಾದ ಚಿತ್ರಗಳು. ಈ ಮೂರರಲ್ಲೂ ಲವ್​​ಸ್ಟೋರಿ, ಕಾಮಿಡಿ ಮತ್ತು ಒಂದೊಳ್ಳೆ ಸಂದೇಶಗಳಿವೆ. ಇದು ಸಿನಿಮಾ ನೋಡಲು ಬರುವ ಪ್ರೇಕ್ಷಕನನ್ನು ಕಥೆಗೆ ಹೊಂದಿಕೊಳ್ಳುವಂತೆ ಮಾಡಿವೆ ಮತ್ತು ಭರಪೂರ ಮನರಂಜನೆಯನ್ನು ನೀಡಿವೆ. ಈ ಚಿತ್ರಗಳೇ ಇಂದು ಪ್ರದೀಪ್​ಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದು, 'ಲವ್​ ಇನ್ಶೂರೆನ್ಸ್ ಕಂಪನಿ' ಮೇಲೂ ಅದೇ ಭರವಸೆ, ನಿರೀಕ್ಷೆಗಳು ಮೂಡುವಂತೆ ಮಾಡಿದೆ.

ಯಾರು ಈ ಪ್ರದೀಪ್​ ರಂಗನಾಥನ್​?

ಮೂಲತಃ ತಮಿಳುನಾಡಿನವರೇ ಆದ ಪ್ರದೀಪ್ ರಂಗನಾಥನ್, ಚೆನ್ನೈನಲ್ಲಿ ಹೆಚ್ಚು ಸಮಯ ಕಳೆದಿದ್ದಾರೆ. ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಅವರು, ನಟ, ಬರಹಗಾರ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ನಟ ಜಯಂ ರವಿ ಮತ್ತು ಕಾಜಲ್ ಅಗರ್ವಾಲ್ ನಟಿಸಿದ 2019ರ ಸೂಪರ್​ಹಿಟ್ ಚಿತ್ರ 'ಕೋಮಲಿ' ಮೂಲಕ ಮೊದಲು ಗಮನ ಸೆಳೆದ ಪ್ರದೀಪ್​, ಆ ನಂತರ ಪೂರ್ಣ ಪ್ರಮಾಣದಲ್ಲಿ ಸ್ಟಾರ್​ ಹೀರೋ ಆಗಿ ಮಿಂಚಿದರು. 2021ರಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕರಿಗಾಗಿ ಸೈಮಾ ಪ್ರಶಸ್ತಿಯನ್ನು ಗೆದ್ದ ಪ್ರದೀಪ್ ರಂಗನಾಥನ್​, ಚೆನ್ನೈನ ಶಿವಸುಬ್ರಮಣ್ಯ ನಾಡರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಮುಗಿಸಿದ್ದಾರೆ. ಸಿನಿಮಾ ನಿರ್ಮಾಣದ ಮೇಲಿನ ಅವರ ಉತ್ಸಾಹ ಕಿರುಚಿತ್ರಗಳಿಂದ ಆರಂಭವಾಗಿ ಇಂದು ಬಹುನಿರೀಕ್ಷಿತ ಚಿತ್ರಗಳ ಹಂತಕ್ಕೆ ಬಂದು ನಿಂತಿದೆ. 'ವಾಟ್ಸಾಪ್ ಕಾದಲ್', 'ಕಾಲೇಜ್ ಡೈರೀಸ್' ಮತ್ತು 'ಟಿವಿ ಕಾದೈ'ನಂತಹ ಸ್ವಂತ ಪ್ರಾಜೆಕ್ಟ್​ಗಳೇ ಇಂದು ಅವರ ಸಿನಿವೃತ್ತಿಗೆ ದೊಡ್ಡ ಅಡಿಪಾಯವನ್ನು ಹಾಕಿಕೊಟ್ಟಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net