‘ಜೈಲರ್’ ಯಶಸ್ಸಿನ ಬೆನ್ನಲ್ಲೇ ತಮಿಳು ಖ್ಯಾತ ನಟ ರಜಿನಿಕಾಂತ್, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸೀಕ್ವೆಲ್ ಘೋಷಿಸಿದ್ದರು. ವಿಶೇಷ ವಿಡಿಯೋ ಮೂಲಕ ‘ಜೈಲರ್ 2’ ಅನೌನ್ಸ್ ಮಾಡಲಾಗಿತ್ತು. ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದರಿಂದಾಗಿ ಸೀಕ್ವೆಲ್ ಮೇಲೆ ‘ತಲೈವಾ’ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ರಾಜ್ಯದ ಹಳೆ ಮೈಸೂರು ಭಾಗ ಸೇರಿ ತಮಿಳುನಾಡಿನ ವಿವಿಧೆಡೆ ‘ಜೈಲರ್ 2’ ಶೂಟಿಂಗ್ ನಡೆಸಲಾಗಿದೆ. ಇದೀಗ ‘ಜೈಲರ್ 2’ ಚಿತ್ರೀಕರಣ ಪೂರ್ಣಗೊಂಡಿದ್ದು, ಇತ್ತೀಚೆಗೆ ಕುಂಬಳಕಾಯಿ ಒಡೆಯಲಾಗಿದೆ. ಚಿತ್ರತಂಡವು ಕೇಕ್ ಕತ್ತರಿಸಿ, ಸಂಭ್ರಮಿಸಿದೆ. ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡು ಮಾಹಿತಿ ನೀಡಿರುವ ತಂಡ, ‘ನಿರೀಕ್ಷೆ ಹೆಚ್ಚಿಸೋಣ, ತಲೈವಾ ಎಂದಿಗೂ ಶಾಶ್ವತ’ ಎಂದು ಸಂಭ್ರಮಿಸಿದೆ. ‘ಜೈಲರ್’ನಲ್ಲಿದ್ದ ಬಹುತೇಕ ಪಾತ್ರಗಳೇ ಸೀಕ್ವೆಲ್‌ನಲ್ಲೂ ಮುಂದುವರಿದಿವೆ. ನಟರಾದ ಶಿವರಾಜಕುಮಾರ್, ಮೋಹನ್‌ಲಾಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಜತೆಗೆ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ.ಸೂರ್ಯ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಮಧ್ಯೆ ನಟ ಶಾರುಖ್ ಖಾನ್‌ಗೆ ಅತಿಥಿ ಪಾತ್ರದ ಆರ್ ಬಂದಿದ್ದು, ಆದರೆ, ಅವರು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಶೂಟಿಂಗ್ ಪೂರ್ಣಗೊಳಿಸಿರುವ ‘ಜೈಲರ್ 2’ ಸದ್ಯದಲ್ಲೇ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಲಿದೆ. ಇದೇ ವರ್ಷ ಸಿನಿಮಾ ತೆರೆಗೆ ಬರಲಿದೆ. -ಏಜೆನ್ಸೀಸ್