ಒಂದೇ ತಿಂಗಳಲ್ಲಿ 2... 'ಜನ ನಾಯಗನ್'​ಗೆ ಬಂದ ಗತಿಯೇ ರಜಿನಿಕಾಂತ್ ಚಿತ್ರಕ್ಕೂ! ನೆಟ್ಟಿಗರು ಕಿಡಿ

ಜೈಲರ್​ 2 ಚಿತ್ರದ ದೃಶ್ಯಗಳು ಲೀಕ್​
ಜೈಲರ್​ 2 ಚಿತ್ರದ ದೃಶ್ಯಗಳು ಲೀಕ್​
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗಷ್ಟೇ ವಿಜಯ್ ನಟನೆಯ ಜನ ನಾಯಗನ್​ ದೃಶ್ಯಗಳು ಆನ್​ಲೈನ್​ನಲ್ಲಿ ಸೋರಿಕೆ
  • ಇದರ ಬೆನ್ನಲ್ಲೇ ಈಗ ರಜನಿಕಾಂತ್ ಅಭಿನಯಿಸುತ್ತಿರುವ ಜೈಲರ್​ ದೃಶ್ಯಗಳು ಲೀಕ್​
  • ತಮಿಳು ಚಿತ್ರರಂಗವೇ ಏಕೆ ಟಾರ್ಗೆಟ್​?
ತಮಿಳುನಾಡು: ಈ ಹಿಂದೆ ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಿಗೆ ಎಂಟ್ರಿಕೊಟ್ಟ ಒಂದು ದಿನ ಅಥವಾ ಮೂರು ದಿನಕ್ಕೆ ಜಾಲತಾಣಗಳಲ್ಲಿ ಸಿನಿಮಾದ ಎಚ್​ಡಿ ಪ್ರಿಂಟ್​ ಸೋರಿಕೆ ಆಗುತ್ತಿತ್ತು. ಟೆಲಿಗ್ರಾಮ್​ ಸೇರಿದಂತೆ ಒಂದಷ್ಟು ವೆಬ್​ಸೈಟ್​ ಪೋರ್ಟಲ್​ಗಳಲ್ಲಿ ಅಕ್ರಮವಾಗಿ ಸಂಪೂರ್ಣ ಚಿತ್ರದ ಲಿಂಕ್​ಗಳನ್ನು ಹರಿಬಿಡಲಾಗುತ್ತಿತ್ತು. ಇಂತಹ ಪೈರಸಿ ಕಾಟಕ್ಕೆ ಬೇಸತ್ತ ನಿರ್ಮಾಪಕರು, ಅದೆಷ್ಟೇ ಕೈಮುಗಿದು, ಇಂಥಾ ಕೆಲಸಗಳನ್ನು ಮಾಡಬೇಡಿ ಎಂದು ಗೋಳಾಡಿದರು ಸಹ ಕಿಡಿಗೇಡಿಗಳು ಮಾತ್ರ ಇದ್ಯಾವುದನ್ನು ನಿಲ್ಲಿಸದೆ ಇರುವುದು ಸದ್ಯ ಕಳವಳಕಾರಿಯಾಗಿದೆ. 
ಥಿಯೇಟರ್​ಗಳಲ್ಲಿ ಬಿಡುಗಡೆಗೊಂಡ ಕೆಲವು ದಿನಗಳ ಬಳಿಕ ಸೋರಿಕೆ​ ಆಗುತ್ತಿದ್ದ ಚಿತ್ರದ ದೃಶ್ಯಗಳು ಕಳೆದ ಒಂದು ತಿಂಗಳಿನಿಂದ ತೆರೆಗೆ ಬರಲು ಸಿದ್ಧವಾಗಿರುವ ಬಹುನಿರೀಕ್ಷಿತ ಚಿತ್ರಗಳ ಬಹುಮುಖ್ಯ ಫೂಟೇಜ್​ಗಳು ಆನ್​ಲೈನ್​ ಸೋರಿಕೆ ಆಗುತ್ತಿರುವುದು ಆಯಾ ಚಿತ್ರತಂಡಕ್ಕೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಮತ್ತು ಇದರಿಂದ ಮುಂದೆ ಏನು ಮಾಡೋದು ಎಂಬ ಚಿಂತೆ ಕಾಡಲಾರಂಭಿಸಿದೆ. ಇದಕ್ಕೆ ಜ್ವಲಂತ ಸಾಕ್ಷಿ ವಿಜಯ್ ಅಭಿನಯದ 'ಜನ ನಾಯಗನ್​'.     
ಇತ್ತೀಚೆಗಷ್ಟೇ, ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್' ​ಚಿತ್ರದ ಬಹುಮುಖ್ಯ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಯಿತು. ಈ ಘಟನೆಯಿಂದ ಭಾರೀ ಬೇಸರಗೊಂಡ ಚಿತ್ರತಂಡ, ಕಿಡಿಗೇಡಿಗಳು ಯಾರೇ ಆದರೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿತು. ಈ ಪ್ರಕರಣ ಕೈಗೆತ್ತಿಕೊಂಡ ಚೆನ್ನೈ ಸೈಬರ್ ಪೊಲೀಸರು, ಪ್ರಮುಖ ಆರೋಪಿ ಫ್ರೀಲ್ಯಾನ್ಸ್ ಎಡಿಟರ್​ ಸೇರಿ ಒಟ್ಟು ಮೂವರನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ರಜಿನಿಕಾಂತ್ ಅಭಿನಯದ 'ಜೈಲರ್ 2' ಚಿತ್ರದ ಎರಡು ದೃಶ್ಯಗಳು ಲೀಕ್​ ಆಗಿವೆ. 
ತಲೈವಾ ನಟನೆಯ ಸಿನಿಮಾದ ದೃಶ್ಯಗಳು ಸೋರಿಕೆಯಿಂದ ಚಿತ್ರತಂಡ ಆಘಾತಕ್ಕೊಳಗಾಗಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ 'ಜೈಲರ್ 2' ನಿರ್ಮಾಪಕರು ಕ್ಲಿಪ್‌ಗಳನ್ನು ಎಲ್ಲಿಯೂ ಹಂಚಿಕೊಳ್ಳದಂತೆ ನೆಟ್ಟಿಗರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ನಿರ್ಮಾಪಕರಾದ ಕಲಾನಿಧಿ ಮಾರನ್ ರಜನಿ ಅವರ ಚಿತ್ರವನ್ನು ಬಿಗ್​ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಈ ಸೋರಿಕೆಯಿಂದ ನಿರ್ಮಾಣ ಸಂಸ್ಥೆಗೆ ದೊಡ್ಡ ಹೊಡೆತ ನೀಡಲಿದೆ. ದಯವಿಟ್ಟು ಹೀಗೆಲ್ಲ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.
ಈಗಾಗಲೇ ಪೈರಸಿ ವಿರೋಧಿ ತಂಡ ಸೋರಿಕೆ ಮಾಡಿದವರ ಪತ್ತೆಗೆ ಬೆನ್ನತ್ತಿದ್ದು, ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ವಿಡಿಯೋಗಳು ಹಂಚಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದ ಮೊದಲ ಭಾಗ ಭಾರಿ ಯಶಸ್ಸನ್ನು ಗಳಿಸಿದ್ದು, ಜಾಗತಿಕವಾಗಿ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಈಗ, ಸೀಕ್ವೆಲ್​ ತೆರೆಗೆ ಬರಲು ರೆಡಿಯಾಗುತ್ತಿದೆ. ಬಿಗ್ ಬಜೆಟ್ ಮಲ್ಟಿಸ್ಟಾರರ್ ಚಿತ್ರದಲ್ಲಿ, ಮಲಯಾಳಂ ಸ್ಟಾರ್ ಮೋಹನ್ ಲಾಲ್, ಕನ್ನಡದ ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಅನೇಕ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net