

ವಿಜಯ್ ಸೇತುಪತಿ - ಸಾಯಿ ಪಲ್ಲವಿ ನಟನೆಯ ‘ಇಂಜಿ ವೆಲ್ಲಂ’ ರಿಲೀಸ್.
2027 ಜನವರಿ 29ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ.
ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ.
ಪ್ರಸಿದ್ಧ ನಿರ್ದೇಶಕ ಮಣಿರತ್ನಂ ನಿರ್ದೇಶನದ, ವಿಜಯ್ ಸೇತುಪತಿ - ಸಾಯಿ ಪಲ್ಲವಿ ನಟನೆಯ ‘ಇಂಜಿ ವೆಲ್ಲಂ’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. 2027 ಜನವರಿ 29ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ತಮಿಳು ಚಿತ್ರರಂಗದ ಲೆಜೆಂಡರಿ ನಿರ್ದೇಶಕ ಮಣಿರತ್ನಂ ಪೌರಾಣಿಕ, ಆಕ್ಷನ್ ಸಿನಿಮಾಗಳ ನಂತರ, ತಮ್ಮದೇ ಆದ ಲವ್ ಟ್ರ್ಯಾಕ್ ಮತ್ತೊಮ್ಮೆ ಮರಳಿದ್ದಾರೆ. ಯಾವುದೇ ಆಡಂಬರದ ಘೋಷಣೆ ಇಲ್ಲದೆ, ಸಿನಿಮಾದ ಶೂಟಿಂಗ್ ಶುರುವಾಗಿತ್ತು. ಆದರೆ, ಕೋಲ್ಕತ್ತಾದ ಪ್ರಸಿದ್ಧ ಬ್ರಿಡ್ಜ್ ಮೇಲೆ ಶೂಟಿಂಗ್ ಆಗುವಾಗ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗಿದ್ದವು. ನಂತರ ಸಿನಿಮಾ ತಂಡ ಟೈಟಲ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹಲವು ಊಹಾಪೋಹಗಳಿಗೆ ತೆರೆ ಎಳೆದಿತ್ತು.
ಮಣಿರತ್ನಂ ಆಕ್ಷನ್ ಕಟ್ ಹೇಳುತ್ತಿರುವ, ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್ನಲ್ಲಿ ಮೊದಲ ಬಾರಿಗೆ ಮೂಡಿಬರುತ್ತಿರುವ ಸಿನಿಮಾ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ವಿಭಿನ್ನ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ವಿಜಯ್ ಸೇತುಪತಿ ಮತ್ತು ನೈಸರ್ಗಿಕ ಅಂದ ಹಾಗೂ ಸಹಜ ಅಭಿನಯಕ್ಕೆ ಹೆಸರಾಗಿರುವ ಸಾಯಿ ಪಲ್ಲವಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಾಕಷ್ಟು ನಿರೀಕ್ಷೆಗಳಿಗೆ ಕಾರಣವಾಗಿದೆ.
ಇದರೊಂದಿಗೆ ಮಣಿರತ್ನಂ ನಿರ್ದೇಶನ ಎನ್ನುವುದು ಸಿನಿಮಾ ಮೇಲಿನ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡುತ್ತದೆ. ಅವರ ಪಲ್ಲವಿ ಅನುಪಲ್ಲವಿ, ಮೌನ ರಾಗಂ, ನಾಯಗನ್, ಕಣ್ಣತ್ತಿಲ್ ಮುತ್ತಮಿಟ್ಟಾಲ್, ಅಲೈಪಾಯುದೆ, • ರೋಜಾ, ಬಾಂಬೆ ಸಿನಿಮಾಗಳು ಇಂದಿಗೂ ಮತ್ತೊಮ್ಮೆ ನೋಡಿಸಿಕೊಳ್ಳುವಂತೆ ಮಾಡುತ್ತದೆ. ಮಣಿರತ್ನಂ ಅವರು ಪ್ರೇಮಕಥೆಗಳನ್ನು ತಮ್ಮದೇ ಆದ ದೃಶ್ಯ ಶೈಲಿ, ಸಂಗೀತ ಮತ್ತು ಭಾವನಾತ್ಮಕ ನಿರೂಪಣೆಯೊಂದಿಗೆ ತೆರೆಗೆ ತರುತ್ತಾರೆ. ಇದರಂತೆ ಇಂಜಿ ವೆಲ್ಲಂ ಸಹ ಮತ್ತೊಂದು ಸೋಜಿಗವನ್ನು ನೀಡುತ್ತದೆ ಎನ್ನುವುದು ಸಿನಿ ಪ್ರೇಮಿಗಳ ನಿರೀಕ್ಷೆಯಾಗಿದೆ.
ಬುಧವಾರ ನ.11ರಂದು ಮಣಿರತ್ನಂ ಅವರ ಸ್ವಂತ ನಿರ್ಮಾಣ ಸಂಸ್ಥೆಯಾದ ಮದ್ರಾಸ್ ಟಾಕೀಸ್, ಹೊಸ ಮೋಷನ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಈ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.
ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಒಂದು ಸುಂದರವಾದ ಮತ್ತು ಸಂತೋಷದ ಕುಟುಂಬದ ಕ್ಷಣವನ್ನು ಬಿಂಬಿಸುತ್ತದೆ. ವಿಜಯ್ ಸೇತುಪತಿ ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿ, ಮುದ್ದಾದ ಹೆಣ್ಣು ಮಗುವೊಂದನ್ನು ತಮ್ಮ ತೋಳುಗಳಲ್ಲಿ ಹಿಡಿದು ನಗುತ್ತಿದ್ದಾರೆ. ಸಾಯಿ ಪಲ್ಲವಿ ಸೀರೆ ಧರಿಸಿ, ಅವರ ಪಕ್ಕದಲ್ಲಿ ನಿಂತು ಮತ್ತೊಂದು ಸಣ್ಣ ಹೆಣ್ಣು ಮಗುವನ್ನು ಹಿಡಿದುಕೊಂಡಿದ್ದಾರೆ. ಚಿತ್ರದ ಕಥೆಯ ಬಗ್ಗೆ ನಿರ್ಮಾಪಕರು ಇನ್ನೂ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲವಾದರೂ, ಈ ಫರ್ಸ್ಟ್ ಲುಕ್ ಸಿನಿಮಾ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಚಿತ್ರಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಯಶಸ್ವಿ ಜೋಡಿ ಮತ್ತೊಮ್ಮೆ ಒಂದಾಗಿದೆ. ಚಿತ್ರಕ್ಕೆ ಅವಿಕ್ ಮುಖೋಪಾಧ್ಯಾಯ ಅವರ ಛಾಯಾಗ್ರಹಣವಿದ್ದು, ಶ್ರೀಕರ ಪ್ರಸಾದ್ ಸಂಕಲನ ಮಾಡುತ್ತಿದ್ದಾರೆ. ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಭಾಸ್ಕರನ್, ಮಣಿ ರತ್ನಂ ಮತ್ತು ಶಿವ ಅನಂತ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ, (ಏಜೆನ್ಸೀಸ್).