ತಮ್ಮ ಚಿತ್ರರಂಗಕ್ಕೆ ಸಮಸ್ಯೆ ತಂದಿಟ್ಟ ನಟ ದಳಪತಿ ವಿಜಯ್​! ಕಾಲಿವುಡ್​ಗೆ ಶಾಪವಾಗಿ ಕಾಡ್ತಿದ್ಯಾ 'ಜನನಾಯಗನ್'​? Jana Nayagan

ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್​'
ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್​'
Published on

ಪ್ರಮುಖ ಮುಖ್ಯಾಂಶಗಳು

  • ದಳಪತಿ ವಿಜಯ್​ ಕೊನೆಯ ಚಿತ್ರಕ್ಕೆ ಸೆನ್ಸಾರ್​ ಮಂಡಳಿಯಿಂದ ಅಡಚಣೆ
  • ಇನ್ನೂ ಫಿಕ್ಸ್ ಆಗಿಲ್ಲ ಜನ ನಾಯಗನ್​ ಅಧಿಕೃತ ರಿಲೀಸ್​ ಡೇಟ್​
  • ವಿಜಯ್​ ಚಿತ್ರದಿಂದ ಉಳಿದ ತಮಿಳಿನ ಚಿತ್ರಗಳಿಗೂ ಸಂಕಷ್ಟ
ಚೆನ್ನೈ: ಸ್ಟಾರ್​ ಹೀರೋಗಳ ಸಿನಿಮಾ ತೆರೆಕಾಣಲು ಸಿದ್ಧವಾಗಿದೆ ಎಂದಾದರೆ, ಅದೇ ವಾರದಲ್ಲಿ ಇನ್ನೊಬ್ಬ ಸ್ಟಾರ್​ ನಟನ ಚಿತ್ರ ತೆರೆಗೆ ಬರುವುದು ಅಪರೂಪ. ಕೆಲವೇ ಕೆಲವು ನಿರ್ಮಾಪಕರು ಮಾತ್ರ ರಿಲೀಸ್​ ಕ್ಲ್ಯಾಶ್​ ಬಗ್ಗೆ ಹೆಚ್ಚು ಚಿಂತಿಸದೆ, ಧೈರ್ಯದಿಂದ ರಿಲೀಸ್​ಗೆ ಮುಂದಾಗುತ್ತಾರೆ. ಆದರೆ, ಹೊಸಬರ ತಂಡಗಳು ಮತ್ತು ಹೊಸ ನಟರ ಚಿತ್ರಗಳನ್ನು ಈ ಸಮಯದಲ್ಲಿ ಬಿಡುಗಡೆಗೊಳಿಸಲು ಇಷ್ಟಪಡುವುದಿಲ್ಲ. ಬದಲಿಗೆ ತಮ್ಮ ಸಿನಿಮಾದ ದಿನಾಂಕವನ್ನು ಒಂದು ವಾರ ಹಿಂದೆ ಅಥವಾ ಮುಂದಕ್ಕೆ ಹಾಕಿಕೊಳ್ಳಲಾಗುತ್ತೆ. ಸದ್ಯ ಇದೇ ಪರಿಸ್ಥಿತಿ ತಮಿಳು ಚಿತ್ರರಂಗದ ಹಲವು ಚಿತ್ರಗಳಿಗೆ ಆಗುತ್ತಿವೆ. ಅದಕ್ಕೆ ಕಾರಣ, ಬಹುನಿರೀಕ್ಷಿತ 'ಜನನಾಯಗನ್'​ ರಿಲೀಸ್ ಗೊಂದಲ​!

ಕೋರ್ಟ್​ ಮೆಟ್ಟಿಲೇರಿದ್ದ ಚಿತ್ರತಂಡ...

ಕಾಲಿವುಡ್​ ಸ್ಟಾರ್​ ನಟ, ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್'​ ರಿಲೀಸ್​ಗೆ ಸೆನ್ಸಾರ್​ ಮಂಡಳಿ ಮಾಡಿದ ಅಡಚಣೆಯೇ ಇಂದು ಇಷ್ಟೆಲ್ಲ ಸಮಸ್ಯೆಗೆ ಮೂಲ ಕಾರಣ. ಕೋರ್ಟ್​ ಮೆಟ್ಟಿಲೇರಿದ ಚಿತ್ರತಂಡಕ್ಕೆ ಅಂದುಕೊಂಡ ದಿನದಂದೇ ಬಿಡುಗಡೆ ಭಾಗ್ಯ ನೀಡದಂತೆ ಮಾಡಿದ್ದು ಸಿಬಿಎಫ್​ಸಿ. ಇದು ಚಿತ್ರರಂಗದ ಸದಸ್ಯರು ಹಾಗೂ ಸಿನಿಪ್ರಿಯರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಜ.09ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿದ್ದ ವಿಜಯ್​ ಚಿತ್ರ, ಇಂದಿಗೂ ರಿಲೀಸ್​ ಆಗದೆ ಇರುವುದು ಹಲವು ಕಾಲಿವುಡ್​ ಚಿತ್ರಗಳಿಗೆ ಸಂಕಷ್ಟ ತಂದೊಡ್ಡಿದೆ.

'ಜನನಾಯಗನ್' ರಿಲೀಸ್​ಗೆ ಕಾತರ

ವಿಜಯ್ ಅವರ ಜನನಾಯಗನ್​ ಚಿತ್ರದ ರಿಲೀಸ್​ ಯಾವಾಗ ಎಂಬ ಸ್ಪಷ್ಟ ಮಾಹಿತಿ ತಮಿಳು ಚಿತ್ರರಂಗಕ್ಕೆ ಇನ್ನೂ ಲಭ್ಯವಾಗಿಲ್ಲ. ಇದು ರಿಲೀಸ್​ಗೆ ಎದುರುನೋಡುತ್ತಿರುವ ಇನ್ನಿತರ ಚಿತ್ರಗಳಿಗೆ ದೊಡ್ಡ ಗೊಂದಲ ತಂದಿಟ್ಟಿದೆ. ತಮಿಳಿನಲ್ಲಿ ಬಹುನಿರೀಕ್ಷಿತ ಸಿನಿಮಾವಾಗಿರುವ ಜನನಾಯಗನ್​ ನೋಡಲು ಸದ್ಯ ಸಿನಿಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗ, ವಿಜಯ್​ ಚಿತ್ರದ ದಿನಾಂಕದಂದೇ ತಮ್ಮ ಸಿನಿಮಾವನ್ನು ರಿಲೀಸ್​ ಮಾಡಿದ್ರೆ, ಖಂಡಿತ ನಷ್ಟ ಕಟ್ಟಿಟ್ಟಬುತ್ತಿ ಎಂಬ ಭಯ ಆಯಾ ಚಿತ್ರತಂಡಕ್ಕೆ ಕಾಡತೊಡಗಿದೆ.

ಒಂದು ಸಿನಿಮಾ ಉಳಿದವರಿಗೆ ತೊಂದರೆ

ಈ ನಿಟ್ಟಿನಲ್ಲಿ ಮೊದಲು ವಿಜಯ್ ಚಿತ್ರ ಮುಂದೂಡಿಕೆಯಾದ ಮರುದಿನವೇ ಹಲವು ತಂಡಗಳು ತಮ್ಮ ಸಿನಿಮಾದ ರಿಲೀಸ್​ ದಿನಾಂಕವನ್ನು ಬದಲಿಸಿಕೊಂಡವು. ಆದರೆ, ಇತ್ತೀಚಿನ ವರದಿಯ ಪ್ರಕಾರ, ಜನನಾಯಗನ್ ಫೆ.19 ಅಥವಾ 20ರಂದು ರಿಲೀಸ್ ಆಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ. ಆದರೆ, ಈ ಮಾಹಿತಿ ಕೂಡ ಇನ್ನೂ ಖಚಿತವಾಗಿಲ್ಲ. ಸದ್ಯ ಇದೇ ತಮಿಳಿನ ಇನ್ನಿತರ ಸಿನಿಮಾಗಳ ರಿಲೀಸ್​ಗೆ ತಡೆ ನೀಡಿದೆ. ವಿಜಯ್​ ಚಿತ್ರದ ಅಧಿಕೃತ ರಿಲೀಸ್ ದಿನಾಂಕ ಯಾವಾಗ ಅಂತ ಗೊತ್ತಾದರೆ ಸಾಕಪ್ಪ ಎನ್ನುವಂತಾಗಿದೆ ಉಳಿದವರ ಪರಿಸ್ಥಿತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net