

ಚೆನ್ನೈ: ಈ ಡಿಜಿಟಲ್ ಲೋಕದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ದುರುಪಯೋಗ ಮತ್ತು ನಕಲಿ ಖಾತೆಗಳ ಹಾವಳಿ ಮಿತಿಮೀರುತ್ತಿದ್ದು, ಚಿತ್ರರಂಗದ ನಟಿಯರು ಇದರಿಂದ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಖ್ಯಾತ ನಟಿ ಹಾಗೂ ಮಾಜಿ ಕಿಕ್ಬಾಕ್ಸರ್ ರಿತಿಕಾ ಸಿಂಗ್ ( Actress Ritika Singh ) ತಮ್ಮ ಹೆಸರಿನಲ್ಲಿ ಸೃಷ್ಟಿಯಾಗಿರುವ ನಕಲಿ ಸೋಷಿಯಲ್ ಮೀಡಿಯಾ ಪೇಜ್ಗಳು ಮತ್ತು ಎಐ (AI) ವಿಡಿಯೋಗಳ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಹೆಸರಿನಲ್ಲೇ ನಕಲಿ ಪೇಜ್ ತೆರೆದು ಗ್ಲಾಮರಸ್ ವಿಡಿಯೋಗಳಿಗಾಗಿ ತಿಂಗಳಿಗೆ 400 ರೂಪಾಯಿ ಚಂದಾದಾರಿಕೆ (Subscription) ಪಡೆಯುತ್ತಿದ್ದರೂ, ಜನರು ಯೋಚಿಸದೆ ಹಣ ಪಾವತಿಸುತ್ತಿರುವುದನ್ನು ಕಂಡು ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ರಿತಿಕಾ ಸಿಂಗ್, "ಪ್ರಸ್ತುತ ಬ್ಲೂ ಟಿಕ್ (Blue Tick) ಹೊಂದಿರುವ ಈ ಇನ್ಸ್ಟಾಗ್ರಾಮ್ ಪ್ರೊಫೈಲ್ ಮಾತ್ರ ನನ್ನ ಏಕೈಕ ಅಧಿಕೃತ ಖಾತೆಯಾಗಿದೆ. ಇಲ್ಲಿ ಹಂಚಿಕೊಳ್ಳಲಾಗುವ ಪ್ರತಿಯೊಂದು ಪೋಸ್ಟ್ ಅನ್ನು ನಾನೇ ಖುದ್ದಾಗಿ ಶೇರ್ ಮಾಡುತ್ತೇನೆ. ಇದನ್ನು ಹೊರತುಪಡಿಸಿ ಫೇಸ್ಬುಕ್ನಲ್ಲಿ ಅಥವಾ ಇತರ ಯಾವುದೇ ವೇದಿಕೆಯಲ್ಲಿ ಸಕ್ರಿಯವಾಗಿರುವ ನಕಲಿ ಖಾತೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ಫೇಸ್ಬುಕ್ನಲ್ಲಿ ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ಸಬ್ಸ್ಕ್ರಿಪ್ಷನ್ ದಂಧೆಯ ಬಗ್ಗೆ ವಿವರಣೆ ನೀಡಿದ ನಟಿ, "ನನ್ನ ಹೆಸರಿನಲ್ಲೇ ಫೇಸ್ಬುಕ್ನಲ್ಲಿ ಪೇಜ್ವೊಂದನ್ನು ಆರಂಭಿಸಲಾಗಿದ್ದು, ಅಲ್ಲಿ ತಿಂಗಳಿಗೆ 400 ರೂಪಾಯಿಗಳ ಸಬ್ಸ್ಕ್ರಿಪ್ಷನ್ ಮಾಡೆಲ್ ನಡೆಸಲಾಗುತ್ತಿದೆ. ದುರಂತವೆಂದರೆ ಜನರು ಅದಕ್ಕಾಗಿ ಹಣ ನೀಡುತ್ತಿದ್ದಾರೆ! ಅದು ವೆರಿಫೈಡ್ ಪೇಜ್ ಕೂಡ ಅಲ್ಲ, ಬದಲಾಗಿ ನನ್ನ ಹೆಸರನ್ನೇ ತಪ್ಪಾಗಿ ಬರೆಯಲಾಗಿದೆ. ಇಂತಹ ನಕಲಿ ಖಾತೆಗಳಿಗೆ ಹಣ ಪಾವತಿಸುವವರು ದಯವಿಟ್ಟು ತಮ್ಮ ಹಣದ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಎಂದು ಅಭಿಮಾನಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮೊದಲಿಗೆ ನಾನು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ, ಸಮಯ ಹೋದಂತೆ ತಾನಾಗಿಯೇ ಬಂದ್ ಆಗಬಹುದು ಅಂದುಕೊಂಡಿದ್ದೆ. ಆದರೆ ದಿನಕಳೆದಂತೆ ಇದು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹಂತಕ್ಕೆ ತಲುಪಿದೆ. ಇಷ್ಟೇ ಅಲ್ಲದೆ, ಸಂಪೂರ್ಣವಾಗಿ ನಿಜವೆಂದೇ ಬಿಂಬಿಸುವಂತಹ ನಕಲಿ ಎಐ (AI) ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಡಲಾಗುತ್ತಿದೆ. ನಾನು ಯಾವುದೇ ತಪ್ಪು ಮಾಡದಿದ್ದರೂ, ಈ ರೀತಿ ಸಾರ್ವಜನಿಕವಾಗಿ ಬಂದು ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ಬಂದಿರುವುದು ನನಗೆ ತೀವ್ರ ಬೇಸರ ತಂದಿದೆ," ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಯಾವುದೇ ಅಧಿಕೃತ ಗುರುತಿನ ಚೀಟಿ ಅಥವಾ ದಾಖಲೆಗಳನ್ನು ನೀಡದ ನಕಲಿ ಪೇಜ್ಗಳಿಗೆ ನಮ್ಮ ಹೆಸರಿನಲ್ಲಿ ಸಬ್ಸ್ಕ್ರಿಪ್ಷನ್ ಮಾಡೆಲ್ ಮೂಲಕ ಹಣ ಗಳಿಸಲು ಹೇಗೆ ಅವಕಾಶ ಸಿಗುತ್ತದೆ ಎಂಬುದೇ ಅರ್ಥವಾಗುತ್ತಿಲ್ಲ. ಎಐ ತಂತ್ರಜ್ಞಾನ ಎಷ್ಟು ಭಯಾನಕವಾಗಿದೆ ಎಂದರೆ ಅದನ್ನು ನಂಬುವುದೇ ಕಷ್ಟ. ಈಗ ಸೃಷ್ಟಿಯಾಗುತ್ತಿರುವ ವಿಡಿಯೋಗಳು ವೈಯಕ್ತಿಕ ಗೌರವ ಮತ್ತು ವರ್ಚಸ್ಸನ್ನು ನಾಶಪಡಿಸುತ್ತಿವೆ. ಇವುಗಳನ್ನು ನನ್ನ ಕುಟುಂಬದವರು ಅಥವಾ ಸ್ನೇಹಿತರು ನೋಡಿದರೆ, ಅದು ನಾನಲ್ಲ ಎಂಬುದನ್ನು ಗುರುತಿಸುವುದೂ ಸಹ ಕಷ್ಟವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತಮ್ಮ ವಿಡಿಯೋ ಸಂದೇಶದ ಕೊನೆಯಲ್ಲಿ ಅಭಿಮಾನಿಗಳಿಗೆ ಕರೆ ನೀಡಿದ ರಿತಿಕಾ, "ಆ ನಕಲಿ ಪೇಜ್ಗೆ ಮತ್ತಷ್ಟು ಪ್ರಚಾರ ಸಿಗಬಾರದು ಎಂಬ ಕಾರಣಕ್ಕೆ ನಾನು ಅದರ ಲಿಂಕ್ ಹಂಚಿಕೊಳ್ಳುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ಇಂತಹ ಪೇಜ್ಗಳು ಕಂಡುಬಂದರೆ ದಯವಿಟ್ಟು ನಂಬಬೇಡಿ ಮತ್ತು ಸಬ್ಸ್ಕ್ರೈಬ್ ಆಗಬೇಡಿ. ಅಂತಹ ಪೇಜ್ಗಳನ್ನು ರಿಪೋರ್ಟ್ (Report) ಮಾಡುವ ಮೂಲಕ ಅವುಗಳನ್ನು ಡಿಲೀಟ್ ಮಾಡಲು ನನಗೆ ನೆರವಾಗಿ ಎಂದು ವಿನಂತಿಸಿದ್ದಾರೆ. ರಿತಿಕಾ ಅವರ ಈ ಭಾವುಕ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಡಿಜಿಟಲ್ ಸುರಕ್ಷತೆ ಮತ್ತು ಎಐ ದುರುಪಯೋಗದ ಕುರಿತು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ವೃತ್ತಿಪರ ಕಿಕ್ಬಾಕ್ಸರ್ ಆಗಿದ್ದ ರಿತಿಕಾ ಸಿಂಗ್, ಆರ್. ಮಾಧವನ್ ಅಭಿನಯದ ಹಾಗೂ ಸುಧಾ ಕೊಂಗರ ನಿರ್ದೇಶನದ 'ಇರುಧಿ ಸುಟ್ರು' (Irudhi Suttru) ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಾಕ್ಸಿಂಗ್ ಹಿನ್ನೆಲೆಯ ಈ ಚಿತ್ರದ ಅದ್ಭುತ ಅಭಿನಯಕ್ಕಾಗಿ ಅವರು ರಾಷ್ಟ್ರಪ್ರಶಸ್ತಿ ಹಾಗೂ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ತದನಂತರ ತಮಿಳು, ತೆಲುಗು ಮತ್ತು ಹಿಂದಿಯ 'ಓ ಮೈ ಕಡವುಳೆ', 'ಕೊಲೈ' ಹಾಗೂ ರಜನಿಕಾಂತ್ ಅಭಿನಯದ 'ವೇಟೈಯಾನ್' ಸೇರಿದಂತೆ ಹಲವು ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ, (ಏಜೆನ್ಸೀಸ್).