'ಲವ್​ ಟುಡೇ', 'ಡ್ರ್ಯಾಗನ್'​... ವಿಜಯ್​ ಸಿನಿಮಾಗೆ ಸಂಕಷ್ಟ ತಂದಿಟ್ಟ ಬ್ಲಾಕ್​ಬಸ್ಟರ್​ ಚಿತ್ರಗಳ ಎಡಿಟರ್​ ಹೊರದಬ್ಬಿದ SIFEA

ಜನ ನಾಯಗನ್​ ಸಿನಿಮಾ
ಜನ ನಾಯಗನ್​ ಸಿನಿಮಾ
Published on

ಪ್ರಮುಖ ಮುಖ್ಯಾಂಶಗಳು

  • ಬಹುನಿರೀಕ್ಷಿತ 'ಜನ ನಾಯಗನ್​' ಸಿನಿಮಾದ ದೃಶ್ಯಗಳು ಆನ್​ಲೈನ್​ನಲ್ಲಿ ಲೀಕ್
  • ಈ ಪ್ರಕರಣದಲ್ಲಿ ಮೂವರು ಆರೋಪಿಗಳು ಸೈಬರ್​ ಪೊಲೀಸರ ಬಲೆಗೆ
  • ಜನ ನಾಯಗನ್ ಚಿತ್ರದ ಎಡಿಟರ್​ ಅನ್ನೇ ಸಸ್ಪೆಂಡ್​ ಮಾಡಿದ SIFEA
ಚೆನ್ನೈ: ಪ್ರಸ್ತುತ ತಮಿಳುನಾಡು ಚುನಾವಣಾ ಕಣದಲ್ಲಿ ಗೆಲುವಿಗಾಗಿ ಕಾಯುತ್ತಿರುವ ಟಿವಿಕೆ ಪಕ್ಷದ ನಾಯಕ ವಿಜಯ್​ಗೆ ತಮ್ಮ ಬಹುನಿರೀಕ್ಷಿತ ಚಿತ್ರ 'ಜನ ನಾಯಗನ್​' (Jana Nayagan) ದೃಶ್ಯಗಳು ಲೀಕ್ ಆಗಿರುವುದು ಭಾರೀ ನೋವುಂಟು ಮಾಡಿದೆ. ನಟನ ಕೊನೆಯ ಸಿನಿಮಾಗೆ ಈಗಾಗಲೇ ಸಾಲು ಸಾಲು ಸಂಕಷ್ಟಗಳು ಹೆಗಲೇರಿದ್ದು, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಹುಮುಖ್ಯ ದೃಶ್ಯಗಳು ಸೋರಿಕೆಯಾಯಿತು. ಮೊದಲೇ ರಿಲೀಸ್​ಗೆ ಪರದಾಡುತ್ತಿರುವ ಚಿತ್ರತಂಡಕ್ಕೆ, ಆನ್​ಲೈನ್​ ಸೋರಿಕೆ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್​ವೊಂದು ಲಭಿಸಿದೆ.
ಆನ್‌ಲೈನ್ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಚೆನ್ನೈ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಸೆನ್ಸಾರ್​ ಮಂಡಳಿಯಿಂದ ತೊಂದರೆಗೆ ಸಿಲುಕಿರುವ ವಿಜಯ್ ಚಿತ್ರವು ಕೆಲವು ತಿಂಗಳಿನಿಂದ ತೆರೆ ಕಾಣಲು ತೀರ ಪರದಾಡುತ್ತಿರುವ ಸಮಯದಲ್ಲೇ ಚಿತ್ರದ ದೃಶ್ಯಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟ ಕಿಡಿಗೇಡಿಗಳ ಕೆಲಸಕ್ಕೆ ಇಡೀ ತಮಿಳು ಚಿತ್ರರಂಗವೇ ಹಿಡಿಶಾಪ ಹಾಕಿದೆ. ಈ ಮಧ್ಯೆ, ಜನ ನಾಯಗನ್​ ಚಿತ್ರದ ಮುಖ್ಯ ಎಡಿಟರ್ ಪ್ರದೀಪ್​ ಇ ರಾಘವ್​ರನ್ನು​ ಸೌತ್ ಇಂಡಿಯಾ ಫಿಲ್ಮ್ ಎಡಿಟರ್ಸ್ ಅಸೋಸಿಯೇಷನ್ (SIFEA) ಸಸ್ಪೆಂಡ್ ಮಾಡಿದೆ.
ಸಂಘದ ಮೂಲ ನಿಯಮಗಳ ಉಲ್ಲಂಘನೆ ಮತ್ತು ಚಿತ್ರದ ಬಹುಮುಖ್ಯ ದೃಶ್ಯಗಳ ಸೋರಿಕೆ ತಡೆಯಲು ವಿಫಲರಾದ ಆರೋಪದಡಿ ಅವರನ್ನು ಅಮಾನತುಗೊಳಿಸಲಾಗಿದೆ. ಏ.17ರಂದು ನಡೆದ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು SIFEA ಸ್ಪಷ್ಟಪಡಿಸಿದೆ. ಸಮಿತಿಯಲ್ಲಿ ಹಿರಿಯ ಸಿನಿ ಸಂಪಾದಕರು ಮತ್ತು ಕಾರ್ಯಕಾರಿ ಸದಸ್ಯರು ಭಾಗವಹಿಸಿ, ಒಮ್ಮತದಿಂದ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ರಾಘವ್ ಅವರು ನೇರವಾಗಿ ಚಿತ್ರದ ದೃಶ್ಯಗಳ ಲೀಕ್‌ಗೆ ಕಾರಣವಲ್ಲ ಸಂಘ ತಿಳಿಸಿದ್ದರೂ, ತಮ್ಮ ಅಜಾಗರೂಕತೆಯಿಂದಲೇ ಈ ಘಟನೆ ಸಂಭವಿಸಿರುವುದು ಎಂದು ದೂರಲಾಗಿದೆ. ಅಧ್ಯಕ್ಷ ವಿ. ಗೋಪಿಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿ ಎನ್.ಬಿ. ಉಮಾಶಂಕರ್ ಬಾಬು ಅವರು ಸಹಿ ಹಾಕಿರುವ ಪತ್ರದಲ್ಲಿ ಈ ವಿಷಯಗಳನ್ನು ಉಲ್ಲೇಖಿಸಲಾಗಿದೆ. ತಮಿಳಿನ ಹಲವು ಸೂಪರ್​ಹಿಟ್​ ಸಿನಿಮಾಗಳನ್ನೇ ಎಡಿಟ್ ಮಾಡಿರುವ ಪ್ರದೀಪ್​, ಸ್ಟಾರ್​ ನಟರ ಸಕ್ಸಸ್​ಫುಲ್​ ಚಿತ್ರಗಳನ್ನು ಸಿನಿಪ್ರಿಯರಿಗೆ ಅಚ್ಚುಕಟ್ಟಾಗಿ ತೋರಿಸುವ ಕೆಲಸ ಮಾಡಿರುವುದು ಗಮನಾರ್ಹ. ​
ತಮಿಳಿನ 'ಲವ್ ಟುಡೇ', 'ಡ್ರಾಗನ್', 'ಲವ್ ಇನ್ಶುರೆನ್ಸ್ ಕಂಪನಿ', 'ತಲೈವನ್ ತಲೈವಿ' ಮತ್ತು 'ಅನ್ನಾಬೆಲ್ಲೆ ಸೇತುಪತಿ', ನಯನತಾರಾ: ಬಿಯಾಂಡ್ ದಿ ಫೇರಿಟೇಲ್ ಸೇರಿದಂತೆ ಮುಂತಾದ ಹೈ-ಪ್ರೊಫೈಲ್ ಸಿನಿಮಾಗಳನ್ನು ಎಡಿಟ್​ ಮಾಡಿ, ಶಭಾಷ್​ಗಿರಿ ಪಡೆದಿರುವ ಸಂಕಲನಕಾರ ಈಗ ಕೆಲಸದಿಂದ ಸಸ್ಪೆಂಡ್​ ಆಗಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net