

ಬೆಂಗಳೂರು: ಕನ್ನಡದ ಸೂಪರ್ ಹಿಟ್ ಚಿತ್ರ ‘ಕಾಲೇಜ್ ಕುಮಾರ್’ ತೆಲುಗು ಮತ್ತು ತಮಿಳಿಗೆ ರೀಮೇಕ್ ಆಗಿರುವುದು ಗೊತ್ತಿರುವ ವಿಚಾರ. ಈಗ ಇದೇ ಚಿತ್ರತಂಡ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಹುಟ್ಟುಹಬ್ಬಕ್ಕೆ ಟೈಟಲ್ ಟ್ರಾ್ಯಕ್ ಬಿಡುಗಡೆ ಮಾಡಿಕೊಂಡು ಶುಭಕೋರಿದೆ. ರೆಹಮಾನ್ಗೂ ಕಾಲೇಜ್ಕುಮಾರ್ ಚಿತ್ರಕ್ಕೇನು ಸಂಬಂಧ? ಅದಕ್ಕೆ ಉತ್ತರವೂ ಇದೆ. ರೆಹಮಾನ್ ಗರಡಿಯಲ್ಲಿ ಪಳಗಿದ ನಕುಲ್, ಪವನ್, ಕಾಶಿಫ್, ಸಂತೋಷ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿಷ್ಯಂದಿರ ಈ ಪ್ರಯತ್ನಕ್ಕೆ ರೆಹಮಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2017ರ ನ.10ರಂದು ಹರಿಸಂತೋಷ್ ನಿರ್ದೇಶನದಲ್ಲಿ ಕನ್ನಡದಲ್ಲಿ ಮೂಡಿಬಂದಿದ್ದ ‘ಕಾಲೇಜ್ ಕುಮಾರ್’ ಚಿತ್ರ ಭಾರಿ ಸಕ್ಸಸ್ ಕಂಡಿತ್ತು. ಚಿತ್ರಕ್ಕೆ ಸಿಕ್ಕ ಜನಪ್ರಿಯತೆ ಬಳಸಿಕೊಳ್ಳಲು ನಿರ್ದೇಶಕ ಹರಿ ಸಂತೋಷ್ ತೆಲುಗು-ತಮಿಳಿಗೂ ರಿಮೇಕ್ ಮಾಡಿದ್ದಾರೆ. ಕನ್ನಡದಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದ ಎಲ್.ಪದ್ಮನಾಭ ಅವರೇ ರಿಮೇಕ್ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಕನ್ನಡದಲ್ಲಿ ನಟ ವಿಕ್ಕಿ ವರುಣ್ ಮತ್ತು ನಟಿ ಸಂಯುಕ್ತಾ ಹೆಗ್ಡೆ ಅಭಿನಯಿಸಿದ ಪಾತ್ರಕ್ಕೆ ‘ಸೂರ್ಯಕಾಂತಮ್ ಚಿತ್ರ ಖ್ಯಾತಿಯ ನಟ ರಾಹುಲ್ ವಿಜಯ್ ಹಾಗೂ ಮಾಡೆಲಿಂಗ್ ಚೆಲುವೆ, ತೆಲುಗಿನ ‘ಹುಷಾರು’ ಚಿತ್ರದ ನಟಿ ಪ್ರಿಯಾ ವಡ್ಲಾಮನಿ ತೆಲುಗು-ತಮಿಳು ರಿಮೇಕ್ನಲ್ಲಿ ಜತೆಯಾಗಿದ್ದಾರೆ. ತೆಲುಗಿನಲ್ಲಿ ರಾಜೇಂದ್ರ ಪ್ರಸಾದ್, ತಮಿಳಿನಲ್ಲಿ ಪ್ರಭು ಅವರು ನಾಯಕನ ತಂದೆಯ ಪಾತ್ರಗಳಲ್ಲಿ ಅಭಿನಯಿಸಿದರೆ, ಮಧುಬಾಲಾ, ನಜೀರ್, ಮನೋಬಾಲಾ, ಶಿವ, ಚಾಮ್ರ್ಸ್ ತಾರಾಬಳಗದಲ್ಲಿದ್ದಾರೆ.
ಕನ್ನಡದಲ್ಲಿ ಸಿಕ್ಕ ಜನಪ್ರಿಯತೆ ಯಿಂದ ತೆಲುಗು-ತಮಿಳಿಗೆ ‘ಕಾಲೇಜ್ ಕುಮಾರ್’ ಚಿತ್ರ ರಿಮೇಕ್ ಮಾಡಲಾಗುತ್ತಿದೆ. ಚಿತ್ರೀಕರಣ ಮುಗಿದಿದ್ದು, ಇದೇ ತಿಂಗಳಾಂತ್ಯಕ್ಕೆ ತೆರೆಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ. ಕನ್ನಡದಂತೆ ತೆಲುಗು-ತಮಿಳಿನಲ್ಲೂ ಚಿತ್ರ ಖಂಡಿತ ಹಿಟ್ ಆಗಲಿದೆ ಎಂಬ ಭರವಸೆ ಇದೆ. | ಹರಿ ಸಂತೋಷ್ ನಿರ್ದೇಶಕ