

"ಲವ್ ಮಾಕ್ಟೇಲ್' ಸಿನಿಮಾ ಬಳಿಕ ಎಲ್ಲವೂ ಬದಲಾಯಿತು. ಅದರಲ್ಲೂ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಆದಮೇಲಂತೂ, ಸಾವಿರ ಇದ್ದ ನನ್ನ ಇನ್ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಎರಡೇ ದಿನಕ್ಕೆ 50 ಸಾವಿರಕ್ಕೆ ಏರಿಕೆಯಾಯಿತು. ಇದೆಲ್ಲದಕ್ಕೂ ಕಾರಣ "ಲವ್ ಮಾಕ್ಟೇಲ್'- ಹೀಗೆ ಈವರೆಗೂ ಏನಾಗಿದೆಯೋ ಅದನ್ನು ಮನಸ್ಸಿಂದ ಹೇಳಿಕೊಳ್ಳುತ್ತಾರೆ ನಟಿ ರಚನಾ ಇಂದರ್.
ರಚನಾಗೆ ಲಕ್ ಅನ್ನೋದು "ಲವ್' ಮೂಲಕ ಸಿಕ್ಕಿದೆ. ಹಾಗಾಗಿ, ಅವರ ಬತ್ತಳಿಕೆಯಲ್ಲಿನ ಬಹುತೇಕ ಚಿತ್ರಗಳು ಪ್ರೀತಿ ಪ್ರೇಮದ ಹಿನ್ನೆಲೆಯ ಸಿನಿಮಾಗಳೇ ಆಗಿವೆ. "ಲವ್ 360', "ಲೆಟ್ಸ್ ಬ್ರೇಕ್ಅಪ್', "ಲವ್ ಮಾಕ್ಟೇಲ್ 2' ... ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಎರಡೇ ವರ್ಷದ ಅವಧಿಯಲ್ಲಿ ಕನ್ನಡದ ಜತೆಗೆ ತೆಲುಗಿನಲ್ಲಿಯೂ ಸಿನಿಮಾ ಮಾಡಿ ಬಂದಿದ್ದಾರೆ ರಚನಾ.
"ಚಿಕ್ಕಂದಿನಲ್ಲಿ ನಟಿಯಾಗಬೇಕು ಎಂಬ ಆಸೆ ಇದ್ದಿದ್ದಕ್ಕೆ ನಟನಾ ಶಾಲೆ ಸೇರಿದೆ. ಸೇರಿ ಒಂದೇ ವಾರಕ್ಕೆ "ಲವ್ ಮಾಕ್ಟೇಲ್' ಚಿತ್ರದ ಆಡಿಷನ್ ಆಯ್ತು. ಅವಕಾಶವೂ ಸಿಕ್ಕಿತು. ಒಟಿಟಿಯಲ್ಲಿ ಸಿನಿಮಾ ಬಂದ ಮೇಲೆ ಈ ಮಟ್ಟದ ಫೇಮ್ ಸಿಗುತ್ತೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಎಲ್ಲವೂ ಕನಸಂತಾಯ್ತು. ಅದಾದ ಮೇಲೆ ಗಣೇಶ್ ಜತೆಗೆ "ತ್ರಿಬಲ್ ರೈಡಿಂಗ್', ಅದಾದ ಮೇಲೆ ರಿಷಬ್ ಶೆಟ್ಟಿ ತಂಡದ ಜತೆಗೆ "ಹರಿಕಥೆ ಅಲ್ಲ ಗಿರಿಕಥೆ'ಯೂ ಮುಗೀತು. ತೆಲುಗಿನ "ಚಿತ್ತನ್ ಮಹಾರಾಣಿ' ಸಹ ರೆಡಿಯಾಗಿದೆ' ಎನ್ನುವ ರಚನಾ, ಚಾಲೆಂಜಿಂಗ್ ಪಾತ್ರದ ಬಗ್ಗೆಯೂ ಹೇಳುತ್ತಾರೆ.
"ಶಶಾಂಕ್ ನಿರ್ದೇಶನದ "ಲವ್ 360' ಚಿತ್ರದ ನನ್ನ ಪಾತ್ರ ಈವರೆಗೂ ಹೆಚ್ಚು ಕಾಡಿದ ಪಾತ್ರ. ನಟನೆಯಲ್ಲಿಯೂ ಆ ಪಾತ್ರ ಪೋಷಣೆ ಮಾಡಲು ಸಾಕಷ್ಟು ತರಬೇತಿ ಪಡೆದಿದ್ದೇನೆ. ಚಿತ್ರದಲ್ಲಿ ಸುಮ್ಮನೆ ಬಂದು ಹೋಗುವ ಬದಲು, ನೋಡುಗರ ಮನಸ್ಸಿಗೆ ನಾಟುತ್ತದೆ. ಆದರೆ, ಅದರ ಬಗ್ಗೆ ಹೆಚ್ಚು ಹೇಳುವುದಕ್ಕಿಂತ ತೆರೆಮೇಲೆ ನೋಡುವುದೇ ಚೆಂದ' ಎಂದು ಗೌಪ್ಯತೆ ಕಾಪಾಡಿಕೊಳ್ಳುತ್ತಾರವರು.
ಆ್ಯಕ್ಷನ್ ಪಾತ್ರ ಮಾಡುವಾಸೆ
ಪ್ರತಿಯೊಬ್ಬ ನಟ-ನಟಿಗೂ ಒಂದೊಂದು ರೀತಿಯ ಪಾತ್ರಗಳನ್ನು ಮಾಡುವ ಆಸೆ, ಕನಸಿರುತ್ತದೆ. ಅದೇ ರೀತಿ ರಚನಾಗೂ ಅಂಥದೊಂದು ಆಸೆ ಚಿಕ್ಕಂದಿನಲ್ಲಿಯೇ ಮೊಳಕೆಯೊಡೆದಿತ್ತು. "ಶಾಲೆಗೆ ಹೋಗುವಾಗ ಟಿವಿಯಲ್ಲಿ ನಾಯಕಿಯರು ಫೈಟ್ ಮಾಡುವ ದೃಶ್ಯಗಳನ್ನು ನೋಡುತ್ತಿದ್ದೆ. ನನಗೂ ಆಗಿನಿಂದಲೇ ಆ್ಯಕ್ಷನ್ ಇಷ್ಟ. ಇದೀಗ ಅವಕಾಶ ಸಿಕ್ಕರೆ ಆ್ಯಕ್ಷನ್ ಸಿನಿಮಾ ಮಾಡುಲು ರೆಡಿ. ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದೂ ನನಗಿಷ್ಟ' ಎನ್ನುತ್ತಾರೆ ರಚನಾ.
ಒಂದೇ ತರಹದ ಪಾತ್ರ ಬೇಡ
"ಲವ್ ಮಾಕ್ಟೇಲ್' ಸಿನಿಮಾ ಬಳಿಕ "ಹೆಂಗೆ ನಾವು' ಹುಡುಗಿಗೆ ಅದೇ ತತರಹದ ಸಾಕಷ್ಟು ಸಿನಿಮಾ ಅವಕಾಶಗಳು ಬಂದವಂತೆ. ಅವೆಲ್ಲವನ್ನೂ ಬಿಟ್ಟು ವಿಭಿನ್ನ ಕಥೆಗಳನ್ನೇ ರಚನಾ ಆಯ್ಕೆ ಮಾಡಿಕೊಂಡರು. "ಲಾಕ್ಡೌನ್ ಸಮಯದಲ್ಲಿ ಕನ್ನಡ ಮಾತ್ರವಲ್ಲದೆ, ತೆಲುಗಿನ ಸಿನಿಮಾ ಅವಕಾಶಗಳೂ ಬಂದವು. ಆದರೆ, ಎಲ್ಲವೂ ಒಂದೇ ತರಹದ ಪಾತ್ರಗಳು. ನನಗೆ ಬದಲಾವಣೆ ಬೇಕಿತ್ತು. ಆಗ "ತ್ರಿಬಲ್ ರೈಡಿಂಗ್' ಸಿಕ್ಕಿತು. "ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾದಲ್ಲಿಯೂ ನಟಿಸಿದೆ. ಬಯಸಿದ್ದು ಸಿಗುತ್ತಾ ಹೋದವು. ಇದೀಗ ನನ್ನ ಐದು ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ' ಎನ್ನುತ್ತಾರೆ.