

ಬೆಂಗಳೂರು: ಸಿನಿಮಾ ಸಹನಟ ಹರ್ಷ ಮತ್ತು ಆತನ ಸ್ನೇಹಿತರು ಬಾಗಲಗುಂಟೆಯಲ್ಲಿ ರಸ್ತೆಬದಿ ಮದ್ಯ ಸೇವಿಸಿ ಕಿರುಚಾಡಿದ್ದು, ಈ ಬಗ್ಗೆ ಪ್ರಶ್ನಿಸಿದ ಪೊಲೀಸರ ಜತೆ ವಾಗ್ವಾದ ನಡೆಸಿದ್ದಾರೆ.
ಭಾನುವಾರ ತಡರಾತ್ರಿ ರಸ್ತೆಬದಿ ಕುಡಿದು ಜೋರಾಗಿ ಮಾತನಾಡುತ್ತಿದ್ದರು. ಇದರಿಂದ ಸಮೀಪದ ಅಪಾರ್ಟ್ವೆುಂಟ್ ನಿವಾಸಿಗಳ ನಿದ್ದೆಗೆ ಭಂಗ ಉಂಟಾಗಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಹರ್ಷ ಮತ್ತು ಸ್ನೇಹಿತರು ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ. ಆಗ ಸ್ಥಳದಿಂದ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ಆಗ ಆಕ್ರೋಶಗೊಂಡು ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದಾರೆ.
ಅಲ್ಲದೆ, ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಆವಾಜ್ ಹಾಕಿದ್ದನು. ಹರ್ಷ ಮತ್ತು ಸ್ನೇಹಿತರನ್ನು ಸಿಬ್ಬಂದಿ ಠಾಣೆಗೆ ಕರೆತಂದು ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.