

ಬೆಂಗಳೂರು: ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಅಭಿನಯದ ‘ಮದಗಜ’ ಇನ್ನೇನು ಡಿ.3ಕ್ಕೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೀಚೆಗೆ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿದ್ದು, ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ಹಾಲಿವುಡ್ ರೇಂಜಿನಲ್ಲಿ ಸಿನಿಮಾ ಮಾಡಿದ್ದೀರಿ’ ಎಂದು ಹೊಗಳಿದ್ದಾರೆ.
‘ಒಂದು ಕಡೆ ನೋವು, ಮತ್ತೊಂದು ಕಡೆ ಕರ್ತವ್ಯ ...’ ಎಂದು ಪುನೀತ್ ರಾಜಕುಮಾರ್ ನಿಧನದ ನೋವಿನಲ್ಲೇ ಮಾತು ಶುರು ಮಾಡಿದ ಶ್ರೀಮುರಳಿ, ‘ಮಾಮ ಇಲ್ಲ ಅನ್ನೋ ನೋವು ಎಂದಿಗೂ ಅಳಿಸಿಹೋಗದು. ಡಿ.3ಕ್ಕೆ ‘ಮದಗಜ’ ಬಿಡುಗಡೆಯಾಗುತ್ತಿದ್ದು, ಆ ಕರ್ತವ್ಯಕ್ಕೆ ಬದ್ಧರಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಒಂದು ವಿಭಿನ್ನ ಪ್ರಯತ್ನ ಈ ಸಿನಿಮಾದಲ್ಲಾಗಿದೆ. ನೋಡಿ ಹರಸಿ’ ಎಂದರು.
‘ಮದಗಜ’ದಲ್ಲಿ ಹಿಂದೆಂದೂ ಕಾಣಿಸದ ರೀತಿಯಲ್ಲಿ ಎದುರಾಗಿದ್ದಾರೆ ನಟಿ ಆಶಿಕಾ. ‘ನಾನು ಪಟ್ಟಣದಲ್ಲಿಯೇ ಬೆಳೆದವಳು. ಹಳ್ಳಿಯ ಲುಕ್ನಲ್ಲಿ ಕಾಣಿಸಿಕೊಳ್ಳುವುದು ತುಸು ಕಷ್ಟವೇ. ಆದರೆ, ಈ ಚಿತ್ರದ ಪಲ್ಲವಿ ಪಾತ್ರಕ್ಕಾಗಿ ಗದ್ದೆಯ ಕೆಲಸವನ್ನೂ ಮಾಡಿದ್ದೇನೆ. ಸೈಕಲ್ ಸಹ ತುಳಿದಿದ್ದೇನೆ. ಒಟ್ಟಾರೆಯಾಗಿ ನನ್ನ ನಿಜ ಜೀವನದಲ್ಲಿ ಮಾಡದ ಬಹುತೇಕ ಎಲ್ಲ ಕೆಲಸಗಳನ್ನೂ ನಿರ್ದೇಶಕರು ಈ ಸಿನಿಮಾದಲ್ಲಿ ಮಾಡಿಸಿದ್ದಾರೆ ಎನ್ನುತ್ತಾರವರು. ಉಮಾಪತಿ ಫಿಲಂಸ್ ಬ್ಯಾನರ್ನಲ್ಲಿ ಚಿತ್ರ ಸಿದ್ಧವಾಗಿದ್ದು, ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ.