

ಬೆಂಗಳೂರು: ‘ಮತ್ತೆ ಉದ್ಭವ’ ಚಿತ್ರದ ನಂತರ ಇನ್ನೊಂದು ಚಿತ್ರವನ್ನು ಪ್ರಮೋದ್ ಒಪ್ಪಬೇಕು ಮತ್ತು ಅದು ಶುರುವಾಗಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಶುರುವಾಯ್ತು. ಈ ಸಮಯದಲ್ಲಿ ಒಂದಿಷ್ಟು ಕಥೆಗಳನ್ನು ಕೇಳಿದ್ದ ಪ್ರಮೋದ್, ಆ ಪೈಕಿ ಒಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದೇ ‘ಇಂಗ್ಲಿಷ್ ಮಂಜ’.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸದ್ದಿಲ್ಲದೆ ಬೆಂಗಳೂರಿನಲ್ಲಿ ಮುಗಿದಿದೆ. ನಿರ್ದೇಶಕ ಎ.ಪಿ. ಅರ್ಜುನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಶುಭಕೋರಿದ್ದಾರೆ. ಇದೊಂದು ಲವ್ ಕಂ ಆಕ್ಷನ್ ಚಿತ್ರವಾಗಿದ್ದು, ಮಂಜ ಎಂಬ ಪಾತ್ರದಲ್ಲಿ ಪ್ರಮೋದ್ ನಟಿಸುತ್ತಿದ್ದಾರೆ. ರೌಡಿಸಂ ಹಿನ್ನೆಲೆಯ ಈ ಚಿತ್ರದಲ್ಲಿ ಅವರಿಗೆ ರಫ್ ಆಂಡ್ ಟಫ್ ಪಾತ್ರ ಸಿಕ್ಕಿದ್ದು, ನಾಯಕಿಯಾಗಿ ತೇಜಸ್ವಿನಿ ಶರ್ಮಾ ನಟಿಸುತ್ತಿದ್ದಾರೆ. ಈ ಹಿಂದೆ, ಯೋಗಿ ಅಭಿನಯದ ‘ಕೋಲಾರ’, ‘ಸ್ಲಂ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮಹೇಶ್, ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಜಿ.ಆರ್. ಹೇಮಂತ್ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದು, ನಿರಂಜನ್ ಬಾಬು ಛಾಯಾಗ್ರಹಣವಿದೆ.