ಅಂದೊಂದಿತ್ತು ಕಾಲ!; ಆ ದಿನಗಳ ಭೂಗತಲೋಕದ ದರ್ಶನ

Cinivani
Published on
ಕನ್ನಡದಲ್ಲಿ ಪೀರಿಯಡ್ (ಬೇರೆ ಕಾಲಘಟ್ಟದ) ಚಿತ್ರಗಳು ಹೊಸದೇನಲ್ಲ. ಇಲ್ಲಿಯವರೆಗೂ ಅಂತಹ ಸಾಕಷ್ಟು ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಇತ್ತೀಚೆಗೆ ಅದೊಂದು ಟ್ರೆಂಡ್ ಆಗಿದೆ. ಅದರಲ್ಲೂ ‘ಕೆಜಿಎಫ್’ ಚಿತ್ರದ ಯಶಸ್ಸಿನ ನಂತರ 70, 80ರ ದಶಕದ ಕಥೆಗಳಿರುವ ಚಿತ್ರಗಳು ಹೆಚ್ಚೆಚ್ಚು ನಿರ್ವಣವಾಗುತ್ತಿವೆ. ಈ ಮೂಲಕ ಹಳೆಯ ಕಾಲವನ್ನು ನೆನಪಿಸುವ ಪ್ರಯತ್ನವಾಗುತ್ತಿದೆ.

| ಚೇತನ್ ನಾಡಿಗೇರ್ ಬೆಂಗಳೂರು

ಇದಕ್ಕೆ ‘ಕೆಜಿಎಫ್’ ಎಫೆಕ್ಟ್ ಅನ್ನಬಹುದಾ? ಗೊತ್ತಿಲ್ಲ. ಏಕೆಂದರೆ, ಅದಕ್ಕೂ ಮುನ್ನವೂ ಹಳೆಯ ಕಾಲವನ್ನು ನೆನಪಿಸುವಂತಹ ಚಿತ್ರಗಳು ಕನ್ನಡದಲ್ಲಿ ಸಾಕಷ್ಟು ಬಿಡುಗಡೆಯಾಗಿದ್ದವು. ‘ಆ ದಿನಗಳು’ ಚಿತ್ರದಲ್ಲಿ 80ರ ದಶಕದ ಕಾಲಘಟ್ಟವನ್ನು ಯಶಸ್ವಿಯಾಗಿ ಹಿಡಿದಿಡಲಾಗಿತ್ತು. ಆದರೆ, ‘ಕೆಜಿಎಫ್’ ನಂತರ ಸದ್ದಿಲ್ಲದೆ ಅದೊಂದು ಟ್ರೆಂಡ್ ಆಗಿಬಿಟ್ಟಿದೆ. ಹಳೆಯ ಕಾಲಘಟ್ಟವನ್ನು ನೆನಪಿಸುವಂತಹ ಹಲವು ಚಿತ್ರಗಳು ಕನ್ನಡದಲ್ಲಿ ಸದ್ಯಕ್ಕೆ ನಿರ್ವಣವಾಗುತ್ತಿವೆ. ಅದರಲ್ಲೂ ಹಿಂದೊಮ್ಮೆ ಭೂಗತಲೋಕ ಹೇಗಿತ್ತು ಎಂದು ತೋರಿಸುವ ಕೆಲವು ಪ್ರಯತ್ನಗಳು ಒಂದರ ಹಿಂದೊಂದು ಆಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಭೂಗತಲೋಕದ ಚಿತ್ರಗಳು ಹೊಸದೇನಲ್ಲ. ‘ಓಂ’ ಮೂಲಕ ಅಂಡರ್​ವರ್ಲ್ಡ್ ಚಿತ್ರಗಳು ಹೆಚ್ಚಾದವು ಎಂಬ ವಿಷಯ ಎಲ್ಲರಿಗೂ ಗೊತ್ತೇ ಇದೆ. 80-90ರ ದಶಕದ ಬೆಂಗಳೂರಿನ ಭೂಗತಲೋಕದ ಚಿತ್ರಣವನ್ನು ಈ ಚಿತ್ರಗಳು ಹಿಡಿದಿಟ್ಟವು. ಆದರೆ, ಅದಕ್ಕೂ ಮುನ್ನ ಭೂಗತಲೋಕದ ಚಟುವಟಿಕೆಗಳು ಹೇಗಿತ್ತು? ಇಂಥದ್ದೊಂದು ಪ್ರಶ್ನೆಗೆ ಹಲವು ಚಿತ್ರಗಳ ಮೂಲಕ ಉತ್ತರಗಳನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ಅದರಲ್ಲೂ ‘ಕೆಜಿಎಫ್ 1’ ಚಿತ್ರ ಗೆಲ್ಲುತ್ತಿದ್ದಂತೆಯೇ 60-70ರ ಕಾಲಘಟ್ಟದ ಭೂಗತಲೋಕದ ಸುತ್ತ ಕಥೆ ಹೆಣೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ಮೊದಲು ಪ್ರಾರಂಭವಾಗಿದ್ದೇ ಉಪೇಂದ್ರ ಅಭಿನಯದ ‘ಕಬ್ಜ’. 

ಕಬ್ಜ ಚಿತ್ರದಲ್ಲಿ 1950ರಿಂದ 80ರ ದಶಕದ ನಡುವಿನ ಭೂಗತಲೋಕವನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಖುದ್ದು ನಿರ್ದೇಶಕ ಆರ್. ಚಂದ್ರು ಹೇಳಿಕೊಂಡಿದ್ದಾರೆ. ಶಿವರಾಜಕುಮಾರ್ ಅಭಿನಯದ 125ನೇ ಚಿತ್ರವಾದ ‘ವೇದ’ ಸಹ ಇದೇ ತರಹದ ಇನ್ನೊಂದು ಪ್ರಯತ್ನ. ‘ದಿ ಬ್ರೂಟಲ್ ಸಿಕ್ಸ್ ಟೀಸ್’ ಎಂಬ ಟ್ಯಾಗ್​ಲೈನ್ ಹೇಳುವಂತೆ, ಆ ಕಾಲಘಟ್ಟದ ಭೂಗತಲೋಕವನ್ನು ತೋರಿಸುವ ಪ್ರಯತ್ನ ಚಿತ್ರದಲ್ಲಾಗುತ್ತಿದೆಯಂತೆ. ‘ಹೆಡ್ ಬುಷ್’ ಸಹ 80ರ ದಶಕದ ಬೆಂಗಳೂರಿನ ಭೂಗತ ಜಗತ್ತಿನ ಕಥೆ. ಡಾನ್ ಎಂ.ಪಿ. ಜಯರಾಜ್ ಪಾತ್ರವನ್ನು ಧನಂಜಯ್ ಮಾಡಿದರೆ, ಕೋತ್ವಾಲ್ ರಾಮಚಂದ್ರನಾಗಿ ವಸಿಷ್ಠ ಕಾಣಿಸಿಕೊಂಡಿರುವುದು ಈಗಾಗಲೇ ಸುದ್ದಿಯಾಗಿದೆ. ಉಪೇಂದ್ರ ಅಭಿನಯದಲ್ಲಿ ರಾಮ್ೋಪಾಲ್ ವರ್ವ ನಿರ್ದೇಶಿಸುತ್ತಿರುವ ‘ಐ ಆಮ್ ಆರ್’ ಚಿತ್ರವು ಮುತ್ತಪ್ಪ ರೈ ಅವರ ಜೀವನವನ್ನಾಧರಿಸಿದೆ ಎಂದು ಹೇಳಲಾಗುತ್ತಿದೆ. ‘ಜೋಗಿ’ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ಹೆಸರಿಡದ ಚಿತ್ರ ಸಹ ಇದೇ ಸಾಲಿಗೆ ಸೇರುತ್ತದೆ. ‘ಬೆಂಗಳೂರು ಭೂಗತಲೋಕದಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡುತ್ತಿದ್ದೇವೆ.

1968ರಿಂದ 1978ರವರೆಗಿನ ಸಮಯದಲ್ಲಿ ಬೆಂಗಳೂರಿನಲ್ಲಿ ರೌಡಿಸಂ ಹೇಗಿತ್ತು ಎಂಬುದನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇನೆ. ಹಾಗಂತ ಇದು ಬರೀ ರೌಡಿಸಂ ಕಥೆಯಲ್ಲ. ಪ್ರೀತಿ, ಆಕ್ಷನ್, ಸೆಂಟಿಮೆಂಟ್ ಸಹ ಇರಲಿದೆ’ ಎನ್ನುತ್ತಾರೆ ಪ್ರೇಮ್ ಒಟ್ಟಾರೆ, ಕನ್ನಡ ಚಿತ್ರರಂಗದಲ್ಲಿ ಹಳೆಯ ಕಾಲವನ್ನು ನೆನಪಿಸವಂತಹ ಹಲವು ಸಿನಿಮಾಗಳು ಸದ್ದಿಲ್ಲದೆ ನಿರ್ವಣವಾಗುತ್ತಿವೆ. 10 ವರ್ಷಗಳ ಹಿಂದಿನ ಚಿತ್ರ ಮಾಡುವುದು ಅಷ್ಟು ಸಮಸ್ಯೆಯಲ್ಲ. ಆದರೆ, ಅದಕ್ಕೂ ಹಿಂದಿನ ಕಾಲಘಟ್ಟವನ್ನು ಸೃಷ್ಟಿಸುವುದು ನಿಜಕ್ಕೂ ದೊಡ್ಡ ಸವಾಲು. ಏಕೆಂದರೆ, ಆಗಿನ ಪರಿಸರ, ಪರಿಕರ, ವೇಷಭೂಷಣ ... ಮರುಸೃಷ್ಟಿ ಮಾಡುವುದರ ಜತೆಗೆ, ಎಲ್ಲೂ ಆಭಾಸವಾಗದಂತೆ ಕಟ್ಟಿಕೊಡುವ ಕೆಲಸ ಅಷ್ಟು ಸುಲಭವಲ್ಲ. ಇದಕ್ಕೆ ಸಮಯವಷ್ಟೇ ಅಲ್ಲ, ಬಜೆಟ್ ಸಹ ಜಾಸ್ತಿ ಬೇಕು. ಆದರೂ ಈ ಸವಾಲನ್ನು ಹಲವರು ಸ್ವೀಕರಿಸುತ್ತಿದ್ದಾರೆ. ಸವಾಲು ಸ್ವೀಕರಿಸುವುದಷ್ಟೇ ಅಲ್ಲ, ಇದರಲ್ಲಿ ಎಷ್ಟು ಜನ ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

ಬರೀ ರೌಡಿಸಂ ಚಿತ್ರಗಳಿಗೆ ಸೀಮಿತವಲ್ಲ

ಹಳೆಯ ಕಾಲಘಟ್ಟದ ಚಿತ್ರ ಎಂದರೆ, ಬರೀ ರೌಡಿಸಂ ಚಿತ್ರ ಎಂದೇ ಆಗಬೇಕಿಲ್ಲ. ಅದರಾಚೆಗೂ ಬೇರೆ ತರಹದ ವಿಭಿನ್ನ ಪ್ರಯತ್ನಗಳು ಕನ್ನಡದಲ್ಲಾಗುತ್ತಿವೆ. ಸತೀಶ್ ನೀನಾಸಂ ಅಭಿನಯದ ‘ಅಶೋಕಾ ಬ್ಲೇಡ್’ ಚಿತ್ರದಲ್ಲಿ 70ರ ದಶಕದಲ್ಲಿ ಮೈಸೂರು ಭಾಗದಲ್ಲಿ ನಡೆದ ವರ್ತಕರು ಮತ್ತು ಕಾರ್ವಿುಕರ ನಡುವಿನ ಯುದ್ಧವನ್ನು ಸೆರೆಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ‘ಎಲ್ರ ಕಾಲೆಳೆಯತ್ತೇ ಕಾಲ’ ಸಹ 80ರ ದಶಕದ ಕಥೆ ಹೊಂದಿದೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರಿಗೆ 80ರ ದಶಕದಲ್ಲಿ ಟಿವಿ ತಂದಾಗ, ಅದು ಜನರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಪೃಥ್ವಿ ಅಂಬರ್ ಅಭಿನಯದ ‘ದೂರದರ್ಶನ’ ಚಿತ್ರದ ಮೂಲಕ ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net