

ಚಿಕ್ಕಂದಿನಲ್ಲಿ ನನ್ನ ಸಂಕ್ರಾಂತಿ ನೆನಪುಗಳು ಜಾಸ್ತಿಯೇ ಇವೆ. ಆಗೆಲ್ಲಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು. ಅಂಥ ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದೇನೆ. ಹೂವಿನ ಪಕಳೆಗಳ ರಂಗೋಲಿ, ಪೌಡರ್ ರಂಗೋಲಿ ಹೀಗೆ ... ಎಲ್ಲದರಲ್ಲಿಯೂ ಮುಂದಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅದ್ಯಾವುದೂ ಕಾಣಿಸುವುದಿಲ್ಲ. ಎಲ್ಲ ಮನೆಯಂಗಳವೂ ಖಾಲಿಖಾಲಿ. ಎಲ್ಲೋ ಒಂದು ಕಡೆ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಅನಿಸಿದ್ದೂ ಉಂಟು. ಅದೇ ರೀತಿ ಮನೆಯಲ್ಲಿ ಅಪ್ಪ ಸೇನೆಯಲ್ಲಿದ್ದವರು. ಹಾಗಾಗಿ, ಪ್ರತಿ ಹಬ್ಬವೂ ಅಷ್ಟೇ ಜೋರಾಗಿಯೇ ಆಚರಣೆ ಮಾಡುತ್ತೇವೆ. ಅದರಲ್ಲೂ ಈ ವರ್ಷ ಅಣ್ಣನಿಗೆ ಮದುವೆಯಾಗಿದೆ. ಅತ್ತಿಗೆ ಬಂದಿದ್ದಾರೆ. ಅವರ ಆಚರಣೆಯೂ ನಮ್ಮ ಮನೆಯಲ್ಲಿ ಇರಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಮನೆಯವರಷ್ಟೇ ಮನೆ ಯಲ್ಲಿಯೇ ಈ ಸಲದ ಹಬ್ಬವನ್ನು ಆಚರಿಸಲಿದ್ದೇವೆ.
| ಸಂಗೀತಾ ಶೃಂಗೇರಿ
ಸಂಕ್ರಾಂತಿ ಅಂದರೆ ಮೊದಲು ನೆನಪಿಗೆ ಬರುವುದು ಅಜ್ಜಿ ಮನೆ. ನಾವೆಲ್ಲ ಚಿಕ್ಕವರಿದ್ದಾಗ ಸಂಕ್ರಾಂತಿ ಬರುತ್ತಿದೆ ಎನ್ನುತ್ತಿರುವಾಗಲೇ ಅಜ್ಜಿ ಮನೆಗೆ ಹೋಗಲು ನಮ್ಮ ತಯಾರಿ ಶುರುವಾಗುತ್ತಿತ್ತು. ಎಲ್ಲ ಸಂಬಂಧಿಕರೂ ಅಲ್ಲಿ ಒಟ್ಟಿಗೆ ಸೇರುವುದೇ ದೊಡ್ಡ ಸಂಭ್ರಮ. ಹೊಸ ಬಟ್ಟೆ, ಉಡುಗೊರೆಗಳು ಸಿಗಲಿವೆ ಎಂಬ ಖುಷಿ ಒಂದೆಡೆಯಾದರೆ, ಒಟ್ಟಿಗೆ ಕುಳಿತು ಭೋಜನ ಸವಿಯುವುದು ಮತ್ತೊಂದು ಸಡಗರ. ಮಾತು, ಹರಟೆ ಎಲ್ಲವೂ ಅಲ್ಲಿರುತ್ತಿತ್ತು. ಮಕ್ಕಳ ತುಂಟಾಟವೂ ಜಾಸ್ತಿ ಇರುತ್ತಿತ್ತು. ಆದರೆ, ಇದೀಗ ಒಟ್ಟಿಗೆ ಸೇರುವುದೇ ಕನಸಾಗಿದೆ. ಪ್ಲಾನ್ ಹಾಕಿದರೂ ಎಲ್ಲರೂ ಅವರವರ ಕೆಲಸಗಳಲ್ಲಿ ಬಿಜಿ. ಕೋವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೂ ಹೋಗುತ್ತಿಲ್ಲ. ಹಾಗಾಗಿ ನಮ್ಮ ಮನೆಯಲ್ಲಿಯೇ ಈ ಬಾರಿ ಸರಳ ಆಚರಣೆ ನಡೆಯಲಿದೆ. ಈಗಲೂ ಹಬ್ಬದ ಸಂದರ್ಭಗಳಲ್ಲಿ ಮನೆಯಲ್ಲಿ ಪೂಜೆಯ ಜವಾಬ್ದಾರಿ ವಹಿಸಿಕೊಂಡಿ ರುತ್ತೇನೆ. ವಾರಕ್ಕೂ ಮುನ್ನ ತಯಾರಿ ಶುರುವಾದರೆ, ಅದಕ್ಕೆ ಸಂಬಂಧಿ ಸಿದ ಅಲಂಕಾರ, ನೈವೇದ್ಯ ಎಲ್ಲ ಕೆಲಸಗಳನ್ನು ಅಮ್ಮನ ಜತೆ ನಾನೇ ನೋಡಿ ಕೊಳ್ಳುತ್ತೇನೆ.
| ಶರ್ವಿುಳಾ ಮಾಂಡ್ರೆ
ಸಂಕ್ರಾಂತಿ ಬಂದಿರುವುದೆನೋ ನಿಜ. ಆದರೆ, ಮನೆಮನೆಗೆ ಹೋಗಿ ಎಳ್ಳು ಬೀರಿ ಬರುವ ಸ್ಥಿತಿಯಲ್ಲಿ ನಾವಿಲ್ಲ. ಚಿಕ್ಕವರಿದ್ದಾಗ ಸ್ನೇಹಿತರೊಂದಿಗೆ ಸುತ್ತಾಡಿ ಬರುತ್ತಿದ್ದೆವು. ಇದೀಗ ಕೋವಿಡ್ ಹಿನ್ನೆಲೆಯಲ್ಲಿ ಅದ್ಯಾವುದೂ ಸಾಧ್ಯವಾಗುತ್ತಿಲ್ಲ. ನನಗೆ ಈಗಲೂ ನೆನಪಿರುವಂತೆ, ಚಿಕ್ಕಂದಿನಲ್ಲಿ ಮನೆಯಲ್ಲಿ ಚಿಕ್ಕವಳು ನಾನೇ ಆಗಿದ್ದರಿಂದ ಹೊಸ್ತಿಲ ಮೇಲೆ ಕೂರಿಸಿ ಈಚಲು ಹಣ್ಣು ಮತ್ತು ಕಬ್ಬನ್ನು ತಲೆ ಮೇಲೆ ಹಾಕುತ್ತಿದ್ದರು. ಆ ಮಜವೇ ಬೇರೆ. ಇತ್ತೀಚಿನ ದಿನಗಳಲ್ಲಿ ಆ ಯಾವ ಸಂಭ್ರಮವೂ ಕಾಣಿಸುತ್ತಿಲ್ಲ. ನಮ್ಮ ಮನೆಗಳಲ್ಲಿಯೇ ಮನೆಯವರಷ್ಟೇ ಸೇರಿ ಹಬ್ಬ ಆಚರಣೆ ಮಾಡುವ ಸ್ಥಿತಿ ನಿರ್ವಣವಾಗಿದೆ. ಪೂಜೆ ವಿಚಾರದಲ್ಲಿ ಅಮ್ಮನದ್ದೇ ಸಂಪೂರ್ಣ ಜವಾಬ್ದಾರಿ. ಅಡುಗೆ ಕೆಲಸದಲ್ಲಿ ನಾನು ಸಹಾಯ ಮಾಡುತ್ತೇನೆ. ಚಿಕ್ಕಂದಿನಿಂದಲೇ ದೇವರ ಮೇಲೆ ಅಪಾರ ಒಲವಿರುವ ಕಾರಣದಿಂದಲೇ ಪೂಜೆಯ ಮೇಲೆ ವಿಪರೀತ ಆಸಕ್ತಿ. ಕಳೆದ ಎರಡು ವರ್ಷಗಳಿಂದ ಯಾವ ಹಬ್ಬವನ್ನೂ ಅದ್ದೂರಿಯಾಗಿ ಆಚರಿಸಿರಲಿಲ್ಲ. ಇದೀಗ ಹೊಸ ವರ್ಷಕ್ಕೆ ಮೊದಲ ಹಬ್ಬವಾಗಿ ಸಂಕ್ರಾಂತಿ ಬಂದಿದೆ. ಇಡೀ ಕುಟುಂಬ ಒಟ್ಟಾಗಿ ಅಷ್ಟೇ ಸಂಭ್ರಮದಿಂದಲೇ ಆಚರಣೆ ಮಾಡುತ್ತೇವೆ.
| ಕಾವ್ಯಾ ಶಾಸ್ತ್ರಿ
ನಾವು ಮೂಲತಃ ಕೊಡಗಿನವರು. ನಮ್ಮ ಕಡೆಯಲ್ಲಿ ಸಂಕ್ರಾಂತಿಗೂ ಮುನ್ನ ಹುತ್ತರಿ ಹಬ್ಬ ಮಾಡುತ್ತಾರೆ. ಅದಾದ ಮೇಲೆ ಬರುವ ಸಂಕ್ರಾಂತಿಯೂ ಅಷ್ಟೇ ವಿಶೇಷ. ಮನೆಯಲ್ಲಿ ಸರಳವಾಗಿ ಪೂಜೆ ಮೂಲಕ ಹಬ್ಬ ಶುರುವಾಗುತ್ತದೆ. ದೇವರ ಕೋಣೆಯ ಅಲಂಕಾರದಿಂದ ಆರಂಭವಾಗಿ ಏನೆಲ್ಲ ವಿಧಿವಿಧಾನಗಳಿರುತ್ತವೆಯೋ ಅದೆಲ್ಲವೂ ನಡೆಯುತ್ತದೆ. ಇದೀಗ ಕೋವಿಡ್ ಹಿನ್ನೆಲೆಯಲ್ಲಿ ಆಚರಣೆಯ ರೀತಿ ನೀತಿಯಲ್ಲಿ ಕೊಂಚ ಬದಲಾವಣೆಗಳಾಗಿವೆ. ಹಬ್ಬಗಳು ಪ್ರತಿ ವರ್ಷ ಬಂದೇ ಬರುತ್ತವೆ. ಅದಕ್ಕಿಂತ ಮೇಲಾಗಿ ನಮ್ಮ ಆರೋಗ್ಯ ತುಂಬ ಮುಖ್ಯ. ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಯೇ ಆಚರಣೆ ಮಾಡಬೇಕಿದೆ. ಕರೊನಾದಿಂದಾಗಿ ಹಬ್ಬಗಳು ಮನೆಗಷ್ಟೇ ಸೀಮಿತವಾಗಿವೆ. ನಮ್ಮ ಮನೆಯಲ್ಲಿ ಹಬ್ಬ ಅಂತ ಬಂದಾಗ ಅಮ್ಮನೇ ಎಲ್ಲ. ಪೂಜೆಯಿಂದ ಹಿಡಿದು ಅಡುಗೆಯ ಎಲ್ಲ ಕೆಲಸವೂ ಅವರದ್ದೇ. ನಮ್ಮದೇನಿದ್ದರೂ ಚೆನ್ನಾಗಿ ಊಟ ಮಾಡುವುದೇ ಕೆಲಸ.
| ರೀಷ್ಮಾ ನಾಣಯ್ಯ
ಚಿಕ್ಕವರಿದ್ದಾಗ ಸಂಬಂಧಿಕರ ಮನೆಗೆ ಸ್ನೇಹಿತರ ಮನೆಗೆ ಹೋಗಿ ಎಳ್ಳು ಬೀರಿ ಬರುತ್ತಿದ್ದೆವು. ಕಬ್ಬು ತಿನ್ನುವುದು ಮತ್ತೊಂದು ಕೆಲಸ. ಅದರಲ್ಲೂ ಸಂಕ್ರಾಂತಿ ಅಂದರೆ, ಸಕ್ಕರೆ ಅಚ್ಚು ವಿಶೇಷ. ಅಂಗಡಿಯಿಂದ ಖರೀದಿ ಮಾಡಿದ ಅಚ್ಚು ಅಷ್ಟೊಂದು ಇಷ್ಟ ಆಗುತ್ತಿರಲಿಲ್ಲ. ಮನೆಯಲ್ಲಿಯೇ ಅಮ್ಮ, ದೊಡ್ಡಮ್ಮ ಒಟ್ಟಿಗೆ ಸೇರಿ ಸಕ್ಕರೆ ಅಚ್ಚು ಮಾಡುತ್ತಿದ್ದರು. ಬಾಯಲ್ಲಿಟ್ಟರೆ ಕರಗುವಂತಿರುತ್ತಿತ್ತು. ಅಮ್ಮನಿಗೆ ಗೊತ್ತಾಗದಂತೆ ಕದ್ದು ತಿನ್ನುವುದೇ ನಮ್ಮ ಕೆಲಸ. ಬೈಯಿಸಿಕೊಂಡಿದ್ದೂ ಉಂಟು. ಏನಾದರೂ ಕೊಡಿಸುತ್ತಾರೆ ಎಂಬ ಆಸೆಗೆ, ಸಂಜೆ ಹಬ್ಬದ ಸಂತೆಗೂ ಅಮ್ಮನ ಜತೆ ಹೋಗುತ್ತಿದ್ದೆ. ಈಗ ಎಲ್ಲವೂ ತಣ್ಣಗಾಗಿದೆ.
ಮನೆಗಷ್ಟೇ ಹಬ್ಬಗಳು ಸೀಮಿತವಾಗಿವೆ. ನಾನು ಶೂಟಿಂಗ್ನಲ್ಲಿದ್ದೇನೆ. ದೇವರಿಗೆ ಕೈ ಮುಗಿದು ಎಳ್ಳು ಬೆಲ್ಲ ತಿಂದರೆ ಮುಗೀತು. ಮೊದಲಿನಷ್ಟು ಭಯ ಇಲ್ಲದಿದ್ದರೂ, ಮುನ್ನೆಚ್ಚರಿಕೆಯಲ್ಲಿಯೇ ಹಬ್ಬದ ಆಚರಣೆ ಮಾಡಬೇಕಿದೆ. ದೇವಸ್ಥಾನಕ್ಕೆ ಹೋಗಲ್ಲ, ಮನೆಯಲ್ಲಿಯೇ ನಮ್ಮ ಸಂಭ್ರಮ ಮತ್ತು ಸಡಗರ ಜೋರಾಗಿರಲಿದೆ.
| ನಯನಾ