

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೆಲವು ವರ್ಷಗಳಿಂದ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಲಕ್ಷ್ಮೀ ಕೃಷ್ಣ, ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಕನ್ನಡದ 20 ಜನಪ್ರಿಯ ನಾಯಕಿಯರ ಫೋಟೋಗಳನ್ನಿಟ್ಟುಕೊಂಡು ಒಂದು ಸೀರೆ ಮತ್ತು ಬ್ಲೌಸ್ ಡಿಸೈನ್ ಮಾಡಿದ್ದಾರೆ. ಈ ಸೀರೆ ಉಡುವ ಮೂಲಕ ಅದಿತಿ ಪ್ರಭುದೇವ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದಾರೆ.
‘ರಂಗನಾಯಕಿ’, ‘ಅಮೃತಮತಿ’, ‘ಚಾಂಪಿಯನ್’ ಸೇರಿದಂತೆ ಕೆಲವು ಚಿತ್ರಗಳಿಗೆ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡಿರುವ ಲಕ್ಷ್ಮೀ ಕೃಷ್ಣ, ಲಾಕ್ಡೌನ್ ಸಮಯದಲ್ಲಿ ಫ್ಯಾಶನ್ ಕುರಿತಾಗಿ ಒಂದಿಷ್ಟು ರೀಸರ್ಚ್ ಮಾಡುತ್ತಿದ್ದರಂತೆ. ಆ ಸಂದರ್ಭದಲ್ಲಿ ಕನ್ನಡದ ನಟಿಯರ ಫೋಟೋಗಳನ್ನಿಟ್ಟುಕೊಂಡು ಸೀರೆ ಮತ್ತು ಬ್ಲೌಸ್ ಯಾಕೆ ಮಾಡಬಾರದು ಎಂದನಿಸಿತಂತೆ. ಯೋಚನೆ ಬರುತ್ತಿದ್ದಂತೆಯೇ ಅವರು ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಇದು ಮಾರಾಟಕ್ಕಲ್ಲ. ಕನ್ನಡದ ಜನಪ್ರಿಯ ನಟಿಯರ ಮೇಲಿನ ಪ್ರೀತಿಗೆ ಈ ತರಹದ್ದೊಂದು ಪ್ರಯೋಗ ಮಾಡಿದ್ದೇನೆ. ಈ ಹೊಸ ವಿನ್ಯಾಸವನ್ನು ಅವರಿಗೇ ಅರ್ಪಿಸುತ್ತಿದ್ದೇನೆ. ಏಳೂವರೆ ಮೀಟರ್ ಮಕ್ಮಲ್ ಕಾಟನ್ ಬಟ್ಟೆಯ ಮೇಲೆ ಡಿಜಿಟಲ್ ಪ್ರಿಂಟ್ ಹಾಕಿಸಲಾಗಿದೆ. ಇನ್ನು ಬ್ಲೌಸ್ ಮೇಲೆ ಎಲ್ಲಾ ನಟಿಯರ ಕೊಲಾಜ್ ಮಾಡಿ, ಬೆಲ್ ಸ್ಲೀವ್ಸ್ ಇಟ್ಟಿದ್ದೇವೆ’ ಎನ್ನುತ್ತಾರೆ ಲಕ್ಷ್ಮೀ.
ಇನ್ನು ಈ ಸೀರೆಯ ಕುರಿತು ಅದಿತಿ ಅವರಿಗೆ ಹೇಳಿದಾಗ, ಮಾಡಲ್ ಆಗುವುದಕ್ಕೆ ಒಪ್ಪಿಕೊಂಡರಂತೆ. ‘ನಾನೇ ಈ ಸೀರೆಗೆ ಮಾಡಲ್ ಆಗುತ್ತೀನಿ ಎಂದು ಅವರು ಮುಂದೆ ಬಂದರು. ಅವರೇ ಫೋಟೋಶೂಟ್ ಮಾಡಿಸಿದರು. ಇಲ್ಲಿ ಈ ಸೀರೆಯೇ ಹೈಲೈಟ್ ಆಗಿರುವುದರಿಂದ,ಆಭರಣಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿಲ್ಲ’ ಎಂದು ಹೇಳುತ್ತಾರೆ ಲಕ್ಷ್ಮೀ. ಈ ಸೀರೆಯ ಮೇಲೆ ಪಂಢರಿಬಾಯಿ, ಲೀಲಾವತಿ, ಲಕ್ಷ್ಮೀ, ಆರುತಿ, ಮಂಜುಳಾ, ಕಲ್ಪನಾ, ಸುಹಾಸಿನಿ, ಮಾಧವಿ, ಸುಧಾರಾಣಿ, ಶ್ರುತಿ, ಪ್ರೇಮಾ, ಬಿ. ಸರೋಜಾದೇವಿ, ಮಹಾಲಕ್ಷ್ಮೀ, ಸರಿತಾ, ಗೀತಾ, ಜಯಂತಿ, ಭಾರತಿ, ಪದ್ಮಪ್ರಿಯಾ, ಸಾವಿತ್ರಿ ಮತ್ತು ಅಂಬಿಕಾ ಅವರ ಫೋಟೋಗಳಿವೆ. ಇನ್ನು ಬ್ಲೌಸ್ ಮೇಲೂ ಅವರ ಕೊಲಾಜ್ ಫೋಟೋಗಳಿವೆ.