ಒಂದೊಳ್ಳೆಯ ಸಿನಿಮಾ ಪ್ರೇಕ್ಷಕರು ಬೇಕಾಗಿದ್ದಾರೆ!

dia
Published on

ಸಿನಿಮಾ ಗೆಲ್ಲಲು ಒಳ್ಳೇ ಕಂಟೆಂಟ್ ಇದ್ದರಷ್ಟೇ ಸಾಲದು. ಜನರು ಚಿತ್ರಮಂದಿರಕ್ಕೆ ಬಂದು ಆ ಚಿತ್ರ ನೋಡಿ ಹೊತ್ತು ಕುಣಿದಾಗ ಮಾತ್ರ ತಂಡಕ್ಕೆ ಗೆಲುವು ದಕ್ಕಿದೆ ಎನ್ನಬಹುದು. ಆದರೆ, ಕಳೆದ 2 ವಾರ ಬಿಡುಗಡೆಯಾದ ಕನ್ನಡ ಸಿನಿಮಾಗಳಿಗೆ ವಿಮರ್ಶೆಯಲ್ಲೂ ಒಳ್ಳೆಯ ಮಾತುಗಳೇ ಕೇಳಿಬಂದರೂ, ಪ್ರೇಕ್ಷಕರೇ ಇಲ್ಲ ಎಂಬುದು ವಿಪರ್ಯಾಸ. ಹೀಗಾಗಿ ಕನ್ನಡದ ಸ್ಟಾರ್ ನಟರೇ ಪ್ರಚಾರ ಕಣಕ್ಕಿಳಿದಿದ್ದಾರೆ. ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವ ಕೆಲಸ ಮಾಡುತ್ತಿದ್ದಾರೆ.

ಚಂದನವನದಲ್ಲಿ 2020ರ ವರ್ಷಾರಂಭದಿಂದ ಇಲ್ಲಿಯವರೆಗೂ ಗೆಲುವಿನ ಗಾಳಿ ಚೆನ್ನಾಗಿಯೇ ಬೀಸತೊಡಗಿದೆ. ಆದರೆ, ಫಸಲು ಅದೇ ಗಾಳಿಗೆ ಹಾರಿಹೋಗುತ್ತಿದೆ. ಅಂದರೆ, ಒಳ್ಳೆಯ ಸಿನಿಮಾ ಕೊಟ್ಟರೂ ಅದನ್ನು ನೋಡಲು ಪ್ರೇಕ್ಷಕರೇ ಇಲ್ಲ ಎಂಬುದು ಸದ್ಯದ ದುರದೃಷ್ಟ ಮತ್ತು ವಿಪರ್ಯಾಸ! ಈ ನಡುವೆ ‘ಒಳ್ಳೆಯ ಸಿನಿಮಾ ಸೋಲಬಾರದು’ ಎಂಬ ನಿಟ್ಟಿನಲ್ಲಿ ಇಡೀ ಸ್ಯಾಂಡಲ್​ವುಡ್ ಒಂದಾಗಿದೆ. ತಮ್ಮದೇ ಸಿನಿಮಾ ಎಂಬಂತೆ ಅವುಗಳ ಪ್ರಚಾರಕ್ಕೆ ಧುಮುಕಿದ್ದಾರೆ. ಈ ಬೆಳವಣಿಗೆ ಚಿತ್ರತಂಡಗಳಿಗೆ ಖುಷಿ ನೀಡಿರುವುದು ಒಂದೆಡೆಯಾದರೆ, ಕನ್ನಡ ಚಿತ್ರೋದ್ಯಮದ ದೃಷ್ಟಿಯಿಂದಲೂ ಆರೋಗ್ಯಕರ ವಾತಾವರಣ ಸೃಷ್ಟಿಸಿದೆ.

ಕಳೆದ ಎರಡು ವಾರದಲ್ಲಿ ಹತ್ತಾರು ಸಿನಿಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿರುವ ಸಿನಿಮಾಗಳ ಸಂಖ್ಯೆ ಬೆರಳೆಣಿಕೆ ಮಾತ್ರ. ‘ದಿಯಾ’ ದಿಲ್ ಕದ್ದರೆ, ‘ಲವ್ ಮಾಕ್​ಟೇಲ್’ ಪ್ರೀತಿಯ ಅಮಲಲ್ಲಿ ತೇಲಿಸಿದೆ. ‘ಜಂಟಲ್​ವುನ್’ ಚಿತ್ರವನ್ನು ಜೆಮ್ ಎಂದೇ ಹೇಳಲಾಗುತ್ತಿದೆ. ಈ ನಡುವೆ ‘ಮತ್ತೆ ಉದ್ಭವ’ ಮತ್ತು ‘ಕಾಣದಂತೆ ಮಾಯವಾದನು’ ಚಿತ್ರಗಳೂ ಪ್ರೇಕ್ಷಕರನ್ನು ನಿರಾಸೆ ಮಾಡಲಿಲ್ಲ. ಪಡೆದ ದುಡ್ಡಿಗೆ ಸಲ್ಲಬೇಕಾದ ಮನರಂಜನೆ ನೀಡಿಯೇ ಕಳುಹಿಸಿವೆ. ಆದರೆ, ಜನರನ್ನು ತಲುಪುವಲ್ಲಿ ಈ ಸಿನಿಮಾಗಳು ಹಿಂದುಳಿದಿರುವುದು ಬೇಸರ ತರಿಸದೇ ಇರದು. ಸಿನಿಮಾ ಮಾರ್ಕೆಟ್ ಮಾಡುವ ಕೆಲ ಏಜೆನ್ಸಿಗಳ ಅಡ್ಡದಾರಿಯಿಂದಲೂ ಒಂದಷ್ಟು ಸಿನಿಮಾಗಳಿಗೆ ಪೆಟ್ಟುಬಿದ್ದಿವೆ.

ದಿಲ್ ಕದ್ದ ‘ದಿಯಾ’ಗೆ ರಕ್ಷಿತ್ ಹೆಗಲು: ‘6-5=2’ ಸಿನಿಮಾ ನೀಡಿದ್ದ ನಿರ್ದೇಶಕ ಕೆ.ಎಸ್. ಅಶೋಕ್, ‘ದಿಯಾ’ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದಾರೆ. ಬೆರಳೆಣಿಕೆ ಚಿತ್ರಮಂದಿರಗಳಲ್ಲಿ ಮಾತ್ರ ತೆರೆಕಂಡಿದ್ದ ‘ದಿಯಾ’ ಮೆಲ್ಲನೆ ಮತ್ತೇರಿಸಿ ಜನರ ಮೆಚ್ಚುಗೆ ಗಿಟ್ಟಿಸಿಕೊಳ್ಳಲು ಶುರುಮಾಡಿತು. ಅದಕ್ಕೆ ಮತ್ತಷ್ಟು ಬಲ ತುಂಬಿದ್ದು ನಟ ರಕ್ಷಿತ್ ಶೆಟ್ಟಿ. ತಮ್ಮ ಟ್ವಿಟರ್ ಖಾತೆಗೆ ‘ದಿಯಾ’ ಫೋಟೋವನ್ನೇ ಪ್ರೊಫೈಲ್ ಮಾಡಿಕೊಂಡು, ಚಿತ್ರದ ಪ್ರಚಾರಕ್ಕಿಳಿದರು. ಅಷ್ಟೇ ಅಲ್ಲ, ಹೊಸಬರ ಹೊಸ ಪ್ರಯತ್ನ ಗೆಲ್ಲಬೇಕು, ಅದನ್ನು ಎಲ್ಲರೂ ನೋಡಬೇಕು ಎಂಬ ಉದ್ದೇಶದಿಂದ ಸಿನಿಮಾ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದಾರೆ. ರಕ್ಷಿತ್ ಅವರ ಈ ಕೆಲಸದಿಂದ ಚಿತ್ರಕ್ಕೆ ಮತ್ತಷ್ಟು ಮೈಲೇಜ್ ಸಿಗುತ್ತಿದೆ ಎನ್ನುತ್ತಾರೆ ಚಿತ್ರದ ವಿತರಕ ಕಾರ್ತಿಕ್ ಗೌಡ. ‘ಭಾನುವಾರ ರಕ್ಷಿತ್ ಅವರು ಸಿನಿಮಾ ನೋಡಿ, ಸ್ವತಃ ಪ್ರಚಾರಕ್ಕೆ ನಿಂತರು. ಅವರ ಅನಿಸಿಕೆ ಅಭಿಪ್ರಾಯ ಮತ್ತಷ್ಟು ಜನರನ್ನು ಸೆಳೆಯಿತು. ಮುಂದಿನ ವಾರವೂ ಯಾವ ಅಡೆತಡೆ ಇಲ್ಲದೆ ‘ದಿಯಾ’ ಸಿನಿಮಾ ಪ್ರದರ್ಶನ ಇರಲಿದೆ. ಸಿಂಗಲ್ ಸ್ಕ್ರೀನ್​ಗಿಂತಲೂ ಮಲ್ಟಿಪ್ಲೆಕ್ಸ್​ಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ’ ಎನ್ನುತ್ತಾರವರು.

ರಿವ್ಯೂ ಚೆನ್ನಾಗಿದೆ.. ಆದರೆ, ಗಳಿಕೆ ಇಲ್ಲ!: ‘ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಆದರೆ, ಜನರು ಸಿನಿಮಾ ನೋಡುತ್ತಿಲ್ಲ. ಅದೇ ತೆಲುಗಿನ ಅಲ್ಲು ಅರ್ಜುನ್ ಸಿನಿಮಾ ಬಿಡುಗಡೆ ಆಗಿ ಆರು ವಾರವಾದರೂ ಕರ್ನಾಟಕದಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ನಮ್ಮ ಸಿನಿಮಾಕ್ಕೆ ನಮ್ಮವರೇ ಏಕೆ ಬೆಂಬಲ ನೀಡುತ್ತಿಲ್ಲ. ನಿಜಕ್ಕೂ ಇದು ಬೇಸರದ ಸಂಗತಿ’- ಹೀಗೆ ಕೊಂಚ ಬೇಸರದಲ್ಲಿ ಕನ್ನಡ ಸಿನಿಮಾಗಳ ಪರಿಸ್ಥಿತಿ ಬಗ್ಗೆ ಹೇಳಿಕೊಂಡರು ‘ಜಂಟಲ್​ವುನ್’ ಚಿತ್ರದ ನಿರ್ವಪಕ ಗುರು ದೇಶಪಾಂಡೆ. ‘ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರಲ್ಲ ಎನ್ನುತ್ತಿದ್ದರು. ಒಳ್ಳೇ ಚಿತ್ರ ಬಂದಮೇಲೆ ಅದನ್ನು ಸ್ವೀಕರಿಸುವವರಿಲ್ಲ ಎಂಬುದು ವಿಪರ್ಯಾಸ. ವಿಮರ್ಶೆ ದೃಷ್ಟಿಯಿಂದ ಸಿನಿಮಾ ಗೆದ್ದರೂ, ಗಳಿಕೆಯ ವಿಚಾರದಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ. ಸಿನಿಮಾ ಮಾಡುವುದೇ ಹಣ ಮಾಡುವುದಕ್ಕೆ ಎಂದಮೇಲೆ, ಆ ಹಣವೇ ಬರಲಿಲ್ಲ ಎಂದರೆ ನಿರ್ವಪಕರ ಸ್ಥಿತಿ ಏನಾಗಬೇಡ. ಇದು ಕೇವಲ ನನ್ನೊಬ್ಬನ ಸಿನಿಮಾಕ್ಕೆ ಎದುರಾದ ಸಂಕಷ್ಟ ಅಲ್ಲ. ‘ದಿಯಾ’, ‘ಲವ್ ಮಾಕ್​ಟೇಲ್’, ‘ನಾನು ಮತ್ತು ಗುಂಡ’ ಚಿತ್ರಕ್ಕೂ ಹೀಗೇ ಆಗಿದೆ’ ಎನ್ನುತ್ತಾರೆ ಗುರು.

ರೇಟಿಂಗ್ ಬಗ್ಗೆ ದನಿ ಎತ್ತಲೇ ಬೇಕಾಯಿತು!: ಬುಕ್​ವೆುೖ ಶೋದಲ್ಲಿ ಆಗಾಗ ಕನ್ನಡ ಸಿನಿಮಾಗಳಿಗೆ ರೇಟಿಂಗ್ ಬರೆ ಬೀಳುತ್ತಲೇ ಇರುತ್ತದೆ. ಅದು ಈ ಬಾರಿ ಮತ್ತೆ ಪುನರಾವರ್ತನೆ ಆಯಿತು. ‘ದಿಯಾ’ ಸೇರಿ ಹಲವು ಸಿನಿಮಾಗಳಿಗೆ ರೇಟಿಂಗ್ ಕಂಟಕವಾಗಿ ಪರಿಣಮಿಸಿತು. ಆ ಬಗ್ಗೆ ಮತ್ತೆ ದನಿ ಎತ್ತಬೇಕಾದ ಅನಿವಾರ್ಯತೆ ಎದುರಾಯಿತು. ‘ಈ ವಾರ ಹತ್ತಾರು ಸಿನಿಮಾಗಳು ಬಿಡುಗಡೆ ಆಗಿರುವುದರಿಂದ ಒಳ್ಳೊಳ್ಳೆಯ ಸಿನಿಮಾಗಳು ಅವುಗಳ ಮಧ್ಯೆ ಕಳೆದು ಹೋಗುತ್ತಿವೆ. ‘ದಿಯಾ’, ‘ಲವ್ ಮಾಕ್​ಟೇಲ್’ ಚೆನ್ನಾಗಿ ಹೋಗುತ್ತಿವೆ. ಸ್ಲೋ ಪಿಕ್​ಅಪ್ ಇರುವುದರಿಂದ ಅಂತ ಸಿನಿಮಾಗಳಿಗೆ ಸಮಯ ಕೊಡಲೇಬೇಕು. ಕಡಿಮೆ ರೇಟಿಂಗ್ ನೀಡಿದ್ದಕ್ಕೂ ಬೇಸರವಾಯಿತು. ಹಾಗಾಗಿ ಒಳ್ಳೆಯ ಸಿನಿಮಾಗಳ ಪರವಾಗಿ ದನಿಯತ್ತಲೇ ಬೇಕಾದ ಅನಿವಾರ್ಯತೆ ಇತ್ತು’ ಎಂಬುದು ಕಾರ್ತಿಕ್ ಮಾತು.

-ಮಂಜು ಕೊಟಗುಣಸಿ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net