ಸಿನಿಮಾ ಅನ್ನೋದು ರಣರಂಗವಲ್ಲ...

Bhajarangi
Published on

ಬೆಂಗಳೂರು: ‘ಸಿನಿಮಾ ಅನ್ನೋದು ರಣರಂಗ ಅಲ್ಲ. ಅದೊಂದು ಸಮುದ್ರ. ಸಾಮರ್ಥ್ಯ ಇದ್ದವರು ಈಜುತ್ತಾರೆ. ಇಲ್ಲದವರು ಮುಳುಗುತ್ತಾರೆ. ಎಲ್ಲರೂ ಚೆನ್ನಾಗಿರೋಣ, ಒಟ್ಟಿಗೆ ಇರೋಣ, ಪ್ರೀತಿಯಿಂದ ಇರೋಣ ...’

ಸಿನಿಮಾ ಸಮಾರಂಭವೊಂದರಲ್ಲಿ ಯಶ್ ಕಾಣಿಸಿಕೊಳ್ಳದೇ ಒಂದೂವರೆ ವರ್ಷಗಳೇ ಆಗಿದ್ದವು. ಬಹಳ ಅಪರೂಪಕ್ಕೆಂಬಂತೆ ಅವರು ‘ಭಜರಂಗಿ 2’ ಚಿತ್ರದ ಪ್ರೀ ರಿಲೀಸ್ ಇವೆಂಟ್​ನಲ್ಲಿ ಕಾಣಿಸಿಕೊಂಡರು. ಅವರೊಬ್ಬರೇ ಅಲ್ಲ ಪುನೀತ್ ಸಹ ಇದ್ದರು. ಕೆಲವು ಸ್ಟಾರ್​ಗಳು ಪ್ರತ್ಯಕ್ಷವಾಗಿ ಹಾಜರಿರದಿದ್ದರೂ, ಪರೋಕ್ಷವಾಗಿ ಕೆಲವರ ಮಾತುಗಳಲ್ಲಿ ಬಂದು ಹೋದರು. ಒಟ್ಟಾರೆ, ಸಿನಿಮಾ ಮಂದಿಯ ಸಮಾಗಮಕ್ಕೆ ಮತ್ತು ಸಂಭ್ರಮಕ್ಕೆ ಆ ವೇದಿಕೆ ಸಾಕ್ಷಿಯಾಯಿತು.

‘ನಾನು ಇವತ್ತು ಈ ಜಾಗದಲ್ಲಿ ಇದ್ದೇನೆ ಎಂದರೆ ಅದಕ್ಕೆ ನಿರ್ವಪಕ ಜಯಣ್ಣ ಮತ್ತು ಭೋಗಣ್ಣ ಕಾರಣ’ ಎಂದ ಯಶ್, ‘ನನ್ನನ್ನು ನಂಬಿ ಐದು ಸಿನಿಮಾ ಮಾಡಿದವರು ಅವರು. ಶಿವಣ್ಣ ಅಭಿನಯದ ‘ಭಜರಂಗಿ’ ಚಿತ್ರವನ್ನೂ ನಾನು ಒಬ್ಬ ಅಭಿಮಾನಿಯಾಗಿ ನೋಡಿದ್ದೆ. ಈಗಲೂ ಅಭಿಮಾನಿಯಾಗಿ ನೋಡುತ್ತೇನೆ. ನಾವು ಏನು ಆಗಿರದಿದ್ದಾಗ ನಮ್ಮನ್ನು ಜನ ಹೇಗೆ ನೋಡುತ್ತಾರೋ, ಗೌರವಿಸುತ್ತಾರೋ ಅದು ಬಹಳ ಮುಖ್ಯ. ಅದು ನಮ್ಮ ಮನಸ್ಸಿನಲ್ಲಿ ಯಾವಾಗಲೂ ಉಳಿದುಬಿಡುತ್ತದೆ. ನಾವು ಗೆದ್ದ ಮೇಲೆ ಪ್ರಪಂಚವೇ ಹಿಂದೆ ಬೀಳುತ್ತದೆ. ಆದರೆ, ಏನು ಆಗಿರದಿದ್ದಾಗಲೂ ಬೆಲೆ ಕೊಡುವವರ ಬಗ್ಗೆ ಯಾವತ್ತೂ ಗೌರವ ಇರುತ್ತದೆ. ಆ ವಿಷಯದಲ್ಲಿ ಶಿವಣ್ಣ ಮತ್ತು ಪುನೀತ್ ಯಾವತ್ತೂ ಎಲ್ಲರನ್ನೂ ಒಂದೇ ರೀತಿಯಲ್ಲಿ ಪ್ರೀತಿಯಿಂದ ನಡೆಸಿಕೊಂಡು ಬರುತ್ತಾರೆ’ ಎಂದು ಹೇಳಿದರು.

ತಾನು ಯಶ್ ಅಭಿಮಾನಿ ಎಂದ ಶಿವರಾಜಕುಮಾರ್, ‘ನನಗೆ ಅವರ ಡ್ಯಾನ್ಸ್ ಬಹಳ ಇಷ್ಟ. ಯಶ್ ಒಬ್ಬರೇ ಅಲ್ಲ, ಅಪು್ಪ, ವಿನೋದ್ ರಾಜ್, ಶಶಿಕುಮಾರ್, ಧ್ರುವ ಡ್ಯಾನ್ಸ್ ಮಾಡುವುದೆಂದರೆ ನೋಡುವುದು ಖುಷಿ. ಯಶ್ ನೋಡಿದರೆ ಖುಷಿಯಾಗುತ್ತದೆ. ‘ತಮಸ್ಸು’ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು. ಒಂದು ದಿನದ ಅತಿಥಿಯಾಗಿ ಅವರು ಕಾಣಿಸಿಕೊಂಡಿದ್ದರು. ಅವರು ಬೆಳೆದ ರೀತಿ ಬಹಳ ಪಾಸಿಟಿವ್ ಆಗಿದೆ. ಇಂಡಿಯಾ ಲೆವೆಲ್ ನಟನಾಗಿದ್ದರೂ ಅವರು ಬದಲಾಗಿಲ್ಲ. ಒಳ್ಳೆಯತನ ಇದ್ದರೆ ಒಳ್ಳೆಯದೇ ಆಗುತ್ತದೆೆ’ ಎಂದರು. ನಂತರ ಶಿವಣ್ಣ, ಪುನೀತ್ ಮತ್ತು ಯಶ್ ಜತೆಯಾಗಿ ಹಾಡಿಗೆ ಹೆಜ್ಜೆ ಹಾಕಿದರು. ಸಮಾರಂಭದಲ್ಲಿ ನಿರ್ದೇಶಕ ಹರ್ಷ, ಶ್ರುತಿ, ಭಾವನಾ ಮೆನನ್, ದಿನಕರ್ ತೂಗುದೀಪ, ಸಂತೋಷ್ ಆನಂದರಾಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net