ಗಾಂಧಿನಗರದಿಂದ ಚಿತ್ರರಂಗ ದೂರ

Gandhi Nagar
Published on

| ಚೇತನ್ ನಾಡಿಗೇರ್ ಬೆಂಗಳೂರು

ಗಾಂಧಿನಗರದ ಸಂತೋಷ್, ನರ್ತಕಿ ಹಾಗೂ ಸಪ್ನಾ ಚಿತ್ರಮಂದಿರಗಳಲ್ಲಿ ತಾತ್ಕಾಲಿಕವಾಗಿ ಚಿತ್ರಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ಅಲ್ಲಿ ಚಿತ್ರಪ್ರದರ್ಶನ ಮುಂದುವರೆಯುವುದೇ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಕನ್ನಡ ಚಿತ್ರರಂಗ ಮತ್ತು ಗಾಂಧಿನಗರದ ಮಧ್ಯೆ ದೊಡ್ಡ ಕೊಂಡಿಯಾಗಿದ್ದ ಈ ಚಿತ್ರಮಂದಿರಗಳಲ್ಲಿ ಪ್ರದರ್ಶನ ಸ್ಥಗಿತಗೊಂಡಿರುವುದರಿಂದ, ಅವೆರಡರ ಮಧ್ಯೆ ಇದ್ದ ದೊಡ್ಡ ನಂಟು ಇನ್ನಷ್ಟು ಕ್ಷೀಣವಾಗಿದೆ. ಒಂದು ಕಾಲಕ್ಕೆ ಕನ್ನಡ ಚಿತ್ರರಂಗ ಎಂದರೆ ಅದು ಗಾಂಧಿನಗರ ಎಂದೇ ಜನಪ್ರಿಯವಾಗಿತ್ತು. ಅದಕ್ಕೆ ಕಾರಣ, ಬೆಂಗಳೂರಿಗೆ ಗಾಂಧಿನಗರ ಎನ್ನುವುದು ಹೇಗೆ ಹೃದಯಭಾಗವಾಗಿತ್ತೋ, ಅದೇ ರೀತಿ ಕನ್ನಡ ಚಿತ್ರರಂಗಕ್ಕೂ ಗಾಂಧಿನಗರ ಹೃದಯದಂತೆ ಕೆಲಸ ಮಾಡುತ್ತಿತ್ತು. ಕನ್ನಡ ಚಿತ್ರರಂಗದ ಎಲ್ಲ ಪ್ರಮುಖ ಚಟುವಟಿಕೆಗಳು ನಡೆಯುತ್ತಿದ್ದುದು ಇದೇ ಪ್ರದೇಶದಲ್ಲಿ. ಚಿತ್ರೀಕರಣ ಅಥವಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬೇರೆ ಕಡೆ ನಡೆದರೂ, ಚಿತ್ರಕ್ಕೆ ಸಂಬಂಧಿಸಿದ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದುದು ಇದೇ ಪ್ರದೇಶದಲ್ಲಿ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಗಾಂಧಿನಗರ ಮತ್ತು ಕನ್ನಡ ಚಿತ್ರರಂಗದ ನಂಟು ಬಹಳ ಕಡಿಮೆಯಾಗಿದ್ದು, ಅದಕ್ಕೆ ಹಲವು ಕಾರಣಗಳಿವೆ.

15ಕ್ಕೂ ಹೆಚ್ಚು ಚಿತ್ರಮಂದಿರಗಳು

ಕೆಂಪೇಗೌಡ ರಸ್ತೆ, ಮೆಜೆಸ್ಟಿಕ್ ಪ್ರದೇಶವನ್ನೊಳಗೊಂಡಿರುವ ಗಾಂಧಿನಗರ ಜನಪ್ರಿಯವಾಗಿದ್ದು ಚಿತ್ರಮಂದಿರಗಳಿಂದ. ಒಂದು ಕಾಲಕ್ಕೆ, ಈ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದವು. ಮೇನಕಾ, ಭೂಮಿಕಾ, ಸಾಗರ್, ಅಭಿನಯ್, ಕೆಂಪೇಗೌಡ, ಕಲ್ಪನಾ, ತ್ರಿಭುವನ್, ಕೈಲಾಶ್, ಅಲಂಕಾರ್, ಸಂತೋಷ್, ನರ್ತಕಿ, ಸಪ್ನಾ, ಮೆಜೆಸ್ಟಿಕ್, ಹಿಮಾಲಯ, ವಿಜಯಲಕ್ಷ್ಮೀ, ಸಂಗಮ್ ತ್ರಿವೇಣಿ, ಅಪರ್ಣಾ, ಮೂವಿಲ್ಯಾಂಡ್ ಮತ್ತು ಕಪಾಲಿ ಚಿತ್ರಮಂದಿರಗಳಿದ್ದವು. ಇವೆಲ್ಲವೂ ಪ್ರಮುಖ ಚಿತ್ರಮಂದಿರಗಳಾಗಿದ್ದು, ಕೆಲವು ಕಡೆ ಕನ್ನಡ ಚಿತ್ರಗಳು ಬಿಡುಗಡೆಯಾದರೆ, ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಪರಭಾಷೆಯ ಚಿತ್ರಗಳು ಬಿಡುಗಡೆಯಾಗುತ್ತಿದ್ದವು.

ಉಳಿದಿರುವುದು ಐದು ಮಾತ್ರ

ಆದರೆ, ಕಳೆದ ಒಂದು ದಶಕದಲ್ಲಿ ಸಾಕಷ್ಟು ಚಿತ್ರಮಂದಿರಗಳು ನೆಲೆಸಮವಾಗಿ, ಆ ಜಾಗದಲ್ಲಿ ವಾಣಿಜ್ಯ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಇಷ್ಟು ಚಿತ್ರಮಂದಿರಗಳಲ್ಲಿ ಸದ್ಯ ಉಳಿದಿರುವುದು ಮೇನಕಾ, ಭೂಮಿಕಾ, ಅಭಿನಯ್, ಸಂತೋಷ್, ನರ್ತಕಿ, ಸಪ್ನಾ, ತ್ರಿವೇಣಿ, ಅಪರ್ಣಾ ಮತ್ತು ಮೂವಿಲ್ಯಾಂಡ್ ಚಿತ್ರಮಂದಿರಗಳು ಮಾತ್ರ. ಅದರಲ್ಲೂ ಮೇನಕಾ, ಸಂತೋಷ್, ನರ್ತಕಿ ಮತ್ತು ಸಪ್ನಾ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಸ್ಥಗಿತಗೊಂಡಿರುವುದರಿಂದ, ಗಾಂಧಿನಗರದಲ್ಲಿ ಕೇವಲ ಐದು ಚಿತ್ರಮಂದಿರಗಳು ಮಾತ್ರ ಉಳಿದಂತಾಗಿವೆ.

ಮುಚ್ಚಲು ಹಲವು ಕಾರಣಗಳು

ಇಷ್ಟಕ್ಕೂ, ಬಹಳಷ್ಟು ಚಿತ್ರಮಂದಿರಗಳು ಕಣ್ಮರೆಯಾಗಿದ್ದೇಕೆ ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಹಲವು ಕಾರಣಗಳಿವೆ. ಪ್ರಮುಖವಾಗಿ ಪ್ರೇಕ್ಷಕರ ಕೊರತೆ, ಹೊಸಹೊಸ ಮಾಧ್ಯಮಗಳ ಆವಿಷ್ಕಾರ, ಚಿತ್ರಮಂದಿರಗಳ ಗುಣಮಟ್ಟ, ಹೆಚ್ಚಾದ ನಷ್ಟ ಮುಂತಾದ ಹಲವು ಕಾರಣಗಳನ್ನು ನೀಡಬಹುದು. ಕೆಲವು ಚಿತ್ರಮಂದಿರಗಳು ಸ್ಟಾರ್ ಮತ್ತು ದೊಡ್ಡ ಚಿತ್ರಗಳಿಗೆ ಸೀಮಿತವಾಗಿ ಸ್ಟಾರ್ ಚಿತ್ರಮಂದಿರಗಳೆಂದು ಗುರುತಿಸಿಕೊಂಡವು. ಇದರಿಂದ ಬೇರೆ ಚಿತ್ರಮಂದಿರಗಳಿಗೆ ಆದಾಯ, ಪ್ರೇಕ್ಷಕರ ಸಂಖ್ಯೆ ಎರಡೂ ಕಡಿಮೆಯಾದ್ದರಿಂದ, ಆ ಚಿತ್ರಮಂದಿರಗಳು ಮುಚ್ಚಿದ್ದವು.

ಬೇರೆ ಪ್ರದೇಶಗಳಿಗೆ ಶಿಫ್ಟ್

ಇನ್ನು, ಗಾಂಧಿನಗರದ ಒಳಗೆ (ಸಿಂಡಿಕೇಟ್ ಬ್ಯಾಂಕ್ ಹಿಂಭಾಗ) ಹಲವು ವಿತರಕರ ಮತ್ತು ಫೈನಾನ್ಶಿಯರ್​ಗಳ ಕಚೇರಿ ಇತ್ತು. ವಜ್ರೇಶ್ವರಿ ಕಂಬೈನ್ಸ್, ಈಶ್ವರಿ ಪಿಕ್ಚರ್ಸ್, ರಾಮು ಎಂಟರ್​ಪ್ರೖೆಸಸ್ ಸೇರಿದಂತೆ ಹಲವು ಚಿತ್ರ ನಿರ್ಮಾಣ ಮತ್ತು ವಿತರಣಾ ಕಚೇರಿಗಳಿದ್ದವು. ಆದರೆ, ಇಂದು ಗಾಂಧಿನಗರದಲ್ಲಿ ಕೆಲವೇ ಕೆಲವು ವಿತರಕರು ಮಾತ್ರ ಉಳಿದುಕೊಂಡಿದ್ದಾರೆ. ಹಳೆಯ ವಿತರಕರೆಲ್ಲ ಇದೀಗ ಈ ವ್ಯವಹಾರವನ್ನು ಬಿಟ್ಟು ಆಫೀಸ್ ಬಂದ್ ಮಾಡಿದರೆ, ಹೊಸಬರಿಗೆ ಗಾಂಧಿನಗರಕ್ಕೆ ಕಾಲಿಡುವ ಪ್ರಮೇಯವೇ ಇರುವುದಿಲ್ಲ. ಹಾಗಾಗಿ, ಇಂದು ನಾಗರಬಾವಿ, ಸಹಕರ ನಗರ, ರಾಜರಾಜೇಶ್ವರಿ ನಗರ ಮುಂತಾದ ಕಡೆ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಕಚೇರಿಗಳಿವೆ.

ಬೇರೆ ಚಟುವಟಿಕೆಗಳೂ ಸ್ಥಗಿತ

ಇನ್ನು, ಗಾಂಧಿನಗರವು ಕನ್ನಡ ಚಿತ್ರರಂಗದ ಹಬ್ ಎಂದು ಗುರುತಿಸಿಕೊಂಡಿದ್ದಾಗ, ಚಿತ್ರರಂಗಕ್ಕೆ ಸಂಬಂಧಿಸಿದ್ದ ಕಚೇರಿಗಳಿದ್ದಾಗ ಹಲವು ಕಲಾವಿದರು ಮತ್ತು ತಂತ್ರಜ್ಞರು ಗಾಂಧಿನಗರದಲ್ಲಿ ಓಡಾಡುತ್ತಿದ್ದರು. ಕಾನಿಷ್ಕಾ, ಟೂರಿಸ್ಟ್, ಗ್ರೀನ್ ಹೌಸ್ ಮುಂತಾದ ಹೋಟೆಲ್​ಗಳಿಗೆ ಹಲವು ಕಲಾವಿದರು ಮತ್ತು ತಂತ್ರಜ್ಞರು ಬರುತ್ತಿದ್ದರು. ಈ ಪೈಕಿ ಕೆಲವು ಹೋಟೆಲ್​ಗಳಲ್ಲಿ ನಿರಂತರವಾಗಿ ಪತ್ರಿಕಾಗೋಷ್ಠಿಗಳು ನಡೆಯುತ್ತಿದ್ದವು. ಈಗ ಒಂದು ಕಡೆ ಚಿತ್ರರಂಗಕ್ಕೆ ಸಂಬಂಧಿಸಿರುವ ಕಚೇರಿಗಳು ಕಡಿಮೆಯಾಗುವುದರ ಜತೆಗೆ, ಪತ್ರಿಕಾಗೋಷ್ಠಿಗಳೂ ಬೇರೆ ಪ್ರದೇಶಕ್ಕೆ ಶಿಫ್ಟ್ ಆಗುತ್ತಿರುವ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳು ಗಾಂಧಿನಗರಕ್ಕೆ ಬರುವ ಪರಿಪಾಠ ನಿಂತೇಹೋಗಿದೆ.

ಸಿನಿಮಾ ಇವತ್ತು ಎಲ್ಲರ ಕೈಯಲ್ಲಿ ಇದೆ. ಮನೆಯಲ್ಲೇ ಕುಳಿತು ನೋಡಬಹುದು ಎಂಬ ಸ್ಥಿತಿ ಇದೆ. ಹೀಗಿರುವಾಗ, ಮುಖ್ಯ ಚಿತ್ರಮಂದಿರ ಎಂಬ ಕಲ್ಪನೆ ಹೊರಟು ಹೋಗಿದೆ. ಹಾಗೆ ನೋಡಿದರೆ, ಮುಖ್ಯ ಚಿತ್ರಮಂದಿರ ಎಂಬ ಕಲ್ಪನೆ ಕರ್ನಾಟಕದಲ್ಲಿ ಮಾತ್ರ ಇದೆ. ಬೇರೆ ಭಾಷೆಗಳಲ್ಲಿ ಇಲ್ಲ. ಅದೊಂದು ಪ್ರತಿಷ್ಠೆ ಅಷ್ಟೇ. ಅದು ಬಿಟ್ಟರೆ, ಅದು ಅಷ್ಟು ಮುಖ್ಯ ಅಲ್ಲ | ಸುದೀಪ್

ಗಾಂಧಿನಗರ ಹಬ್ ಆಗಲು ಇದೇ ಕಾರಣ

ಇಷ್ಟಕ್ಕೂ ಯಾಕೆ ಗಾಂಧಿನಗರದಲ್ಲಿ ವಿತರಕರು ಮತ್ತು ಫೈನಾನ್ಶಿಯರ್​ಗಳ ಕಚೇರಿ ಕಡಿಮೆಯಾಗುತ್ತಿವೆ ಎಂದು ಗೊತ್ತಾಗಬೇಕಿದ್ದರೆ, ಗಾಂಧಿನಗರವೆಂಬ ಪ್ರದೇಶ ಚಿತ್ರರಂಗದ ಹೃದಯಭಾಗವಾಗಿದ್ದು ಯಾಕೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕೆಲವು ದಶಕಗಳ ಹಿಂದೆ ಚಿತ್ರಪ್ರದರ್ಶನ ನಡೆಯುತ್ತಿದ್ದುದು ನೆಗೆಟಿವ್ (ರೀಲ್​ಗಳ) ಮೂಲಕವೇ. ಒಂದು ಚಿತ್ರದ ಒಂದಿಷ್ಟು ಪ್ರಿಂಟ್ ಹಾಕಿಸಿ, ಅದನ್ನು ಡಬ್ಬದಲ್ಲಿಟ್ಟು ಬೇರೆ ಊರುಗಳಿಗೆ ತಲುಪಿಸಲಾಗುತ್ತಿತ್ತು. ಬಸ್ ಮತ್ತು ರೈಲ್ವೇ ನಿಲ್ದಾಣಕ್ಕೆ ಗಾಂಧಿನರ ಬಹಳ ಹತ್ತಿರವಿದ್ದುದರಿಂದಲೇ ಅಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ವ್ಯವಹಾರಗಳು ಪ್ರಾರಂಭವಾದವು. ಅಲ್ಲೇ ಹಲವು ವಿತರಣೆ ಆಫೀಸುಗಳು ಹುಟ್ಟಿಕೊಂಡವು. ಮೊದಲು ನಗರ ಪ್ರದೇಶಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಿ, ನಂತರದ ದಿನಗಳಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು ಮತ್ತು ಬಸ್ ಅಥವಾ ರೈಲುಗಳ ಮೂಲಕ ರೀಲ್​ಗಳನ್ನು ಕಳಿಸಿಕೊಡಲಾಗುತ್ತಿತ್ತು. ಆದರೆ, ಈಗ ನೆಗೆಟಿವ್ ವ್ಯವಸ್ಥೆ ಹೋಗಿ ಡಿಜಿಟಲ್ ವ್ಯವಸ್ಥೆ ಬಂದಿದೆ. ಈಗೇನಿದ್ದರೂ ಸ್ಯಾಟಿಲೈಟ್ ಮೂಲಕ ಚಿತ್ರಪ್ರದರ್ಶನವಾಗುವುದರಿಂದ ರೀಲ್ ಸಾಗಾಣಿಕೆ ಅವಶ್ಯಕತೆಯೇ ಇಲ್ಲ. ಹಾಗಾಗಿ, ಗಾಂಧಿನಗರದಲ್ಲಿ ವಿತರಣಾ ಕಚೇರಿಗಳನ್ನು ಹೊಂದಿದ್ದ ಹಲವರು ತಮ್ಮ ಕಚೇರಿಗಳನ್ನು ಬಂದ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net