

ಪ್ರೀತಿ ಹುಟ್ಟಿಗೆ ಇಂಥದ್ದೇ ಸಮಯದಲ್ಲಿ ಎಂದು ಹೇಳಲು ಸಾಧ್ಯವಿಲ್ಲ. ಆ ಸೆಳೆತಕ್ಕೆ ಕಾರಣ ಹುಡುಕ ಹೊರಟರೆ ಅಲ್ಲಿ ನೂರಾರು ಉತ್ತರಗಳು ದಕ್ಕುತ್ತವೆ. ಇದೀಗ ಪ್ರೇಮಿಗಳ ದಿನದ ನಿಮಿತ್ತ ಪ್ರೀತಿಸಿ ಮದುವೆಯಾದ ಚಂದನವನದ ಜೋಡಿಗಳು ಆ ಪ್ರೀತಿ ಮೊಳಕೆಯೊಡೆದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
* ಈಗಲೂ ನಾವಿಬ್ಬರು ಸ್ನೇಹಿತರು ... ಇಮ್ರಾನ್ ಸರ್ದಾರಿಯಾ ಡಾನ್ಸ್ ತರಗತಿಯಲ್ಲಿ ನಾನು ಮತ್ತು ರಾಗಿಣಿ ಬ್ಯಾಚ್ಮೇಟ್ಸ್. ಹಾಗಂತ ಇಬ್ಬರ ನಡುವೆ ಅಷ್ಟೊಂದು ಪರಿಚಯ ಇರಲಿಲ್ಲ. ಆದರೆ, ಆ ಡಾನ್ಸ್ ಕ್ಲಾಸ್ನಲ್ಲಿ ರಾಗಿಣಿ ಟಾಪ್ ಡಾನ್ಸರ್. ನಮ್ಮ ಮನೆ ಗೃಹಪ್ರವೇಶಕ್ಕೂ ಎಲ್ಲರ ಜತೆ ಬಂದಿದ್ದಳು. ಇಬ್ಬರ ನಡುವೆ ಸ್ನೇಹ ಗಾಢವಾಯಿತು. ಮೊದಲಿಗೆ ೋನ್ ಮಾಡಿ, "ನಿನ್ನ ಸಲುವಾಗಿ ತುಂಬ ಕಾದಿದ್ದೀನಿ. ನೀನು ಹೂಂ ಅನ್ನಲಿಲ್ಲ ಅಂದರೆ, ಮನೆಗೆ ಬಂದು ನಿನ್ನ ತಂಗಿಗೆ ಪ್ರಪೋಸ್ ಮಾಡ್ತಿನಿ' ಅಂತ ಹೇಳಿದ್ದೆ. ಅದಕ್ಕವಳು ಮಾಡ್ಕೋ ಅಂದಿದ್ಲು. ಏಪ್ರಿಲ್ 8ಕ್ಕೆ ನಾನೇ ಪ್ರಪೋಸ್ ಸಹ ಮಾಡಿದ್ದೆ. ಆ ಮೇಲೆ ಡೇಟಿಂಗ್ ಶುರುವಾಯ್ತು. ಸ್ನೇಹದ ವಿಚಾರಕ್ಕೆ ನಮ್ಮಿಬ್ಬರದ್ದೂ 17 ವರ್ಷಗಳ ಸ್ನೇಹ. ಈಗಲೂ ಹಾಗೇ ಇದ್ದೇವೆ. | ಪ್ರಜ್ವಲ್ ದೇವರಾಜ್
* ಪ್ರೀತಿ ಅರಳಿಸಿದ ಟ್ರೆಕ್ಕಿಂಗ್
ನನ್ನ ಮತ್ತು ಕವಿತಾ ಸ್ನೇಹ 2012ರ "ಲಕ್ಷ್ಮಿ ಬಾರಮ್ಮ' ಧಾರಾವಾಹಿಯಿಂದ ಶುರುವಾಗಿತ್ತು. ಇದೀಗ ಅದು ದಶಕದ ಹೊಸ್ತಿಲಲ್ಲಿದೆ. ಧಾರಾವಾಹಿ ಶುರುವಾದಾಗ ನಮ್ಮ ನಡುವೆ ಸಹಜ ಸ್ನೇಹ ಇತ್ತೇ ವಿನಃ ಪ್ರೀತಿಯ ಸೆಳೆತ ಶುರುವಾಗಿರಲಿಲ್ಲ. ಕೆಲ ವರ್ಷಗಳ ಬಳಿಕ ಕಾರಣಾಂತರಗಳಿಂದ ನಾನು ಧಾರಾವಾಹಿಯಿಂದ ಹೊರಬಂದೆ. ಇಬ್ಬರೂ ನಮ್ಮ ನಮ್ಮ ಕೆಲಸಗಳಲ್ಲಿ ಬಿಜಿಯಾದೆವು. ಸಮಯ ಸಿಕ್ಕಾಗಲೆಲ್ಲ ಹೆಚ್ಚು ಹೊತ್ತು ಮಾತನಾಡುತ್ತಿದ್ದೆವು. ಹೀಗಿರುವಾಗ 2020ರಲ್ಲಿ ಲಾಕ್ಡೌನ್ ಸಹ ಘೋಷಣೆ ಆಯಿತು. ಸ್ನೇಹಿತರ ಜತೆ ಸೇರಿ ಆಗೊಮ್ಮೆ ಈಗೊಮ್ಮೆ ಸ್ಕಂದಗಿರಿ, ನಂದಿ ಬೆಟ್ಟ, ಸಾವನದುರ್ಗ, ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದೆವು. ಆವತ್ತೊಂದಿನ ನಾನೇ ಮುಂದುವರಿದು, "ಪ್ರೀತಿಯಲ್ಲಿ ಬೀಳೋಣ್ವಾ ಅಥವಾ ಮದುವೆಯಲ್ಲಿ ಬೀಳೋಣ್ವಾ ...' ಎಂದು ಕವಿತಾಗೆ ಪ್ರಪೋಸ್ ಮಾಡಿದ್ದೆ. ಅಲ್ಲಿಂದ ನಮ್ಮ ಈ ಪ್ರೇಮಕಥೆ ಶುರುವಾಯ್ತು.
| ಚಂದನ್ಕುಮಾರ್
ಥ್ಯಾಂಕ್ಯೂ ಬಿಗ್ ಬಾಸ್...
"ಬಿಗ್ ಬಾಸ್'ನಿಂದಲೇ ನಮ್ಮ ಪ್ರೀತಿಗೆ ಅಡಿಗಲ್ಲು ಬಿದ್ದಿದ್ದು. ಆ ಶೋ ಮುಗಿಸಿ ಬರುವಷ್ಟರಲ್ಲಿಯೇ ನಮ್ಮಿಬ್ಬರ ಹೆಸರ ಮೇಲೆ ಸಾಕಷ್ಟು ಫ್ಯಾನ್ ಪೇಜ್ಗಳು ಸೃಷ್ಟಿಯಾಗಿದ್ದವು. ನನ್ನ ಮತ್ತು ಚಂದನ್ ಫೋಟೋಗಳನ್ನು ಒಟ್ಟಿಗೆ ಸೇರಿಸಿ "ಕ್ಯೂಟ್ ಕಪಲ್' ಎಂಬಂತೆ ವಿಡಿಯೋಗಳೂ ಹರಿದಾಡುತ್ತಿದ್ದವು. ಇದನ್ನು ನೋಡಿ ಇಬ್ಬರಿಗೂ ಅದೇನೋ ಖುಷಿ. ಜೋಡಿ ಚೆನ್ನಾಗಿದೆಯಲ್ಲ ಎಂದು ಇಬ್ಬರೂ ಮಾತನಾಡಿಕೊಂಡಿದ್ದೆವು. ಆದರೆ, ಪ್ರೀತಿಯನ್ನು ಪರಸ್ಪರ ಹೇಳಿಕೊಂಡಿರಲಿಲ್ಲ. ಅದೆಲ್ಲ ಮುಗಿದು ವರ್ಷದ ಬಳಿಕ ಚಂದನ್ ಕಡೆಯಿಂದ ಪ್ರೇಮ ನಿವೇದನೆ ಬಂತು. ಡೇಟಿಂಗ್ ಬಗ್ಗೆ ನಮ್ಮಿಬ್ಬರಿಗೆ ಹೆಚ್ಚು ಒಲವಿರಲಿಲ್ಲ. ಏಕೆಂದರೆ, ಮೊದಲಿಂದಲೂ ಪರಿಚಯ ಇದ್ದಿದ್ದರಿಂದ ಬೇಗ ಬೇಗ ನಿಶ್ಚಿತಾರ್ಥವೂ ಆಯಿತು. ಮದುವೆಯೂ ಆಯಿತು.
| ನಿವೇದಿತಾ ಗೌಡ