ಗಲ್ವಾನ್‌ನಲ್ಲಿ ಚಿತ್ರಾಂಗದಾ: ಇದೇ ಮೊದಲ ಬಾರಿಗೆ ಸಲ್ಮಾನ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಬಾಲಿವುಡ್ ನಟಿ

chitrangada
Published on

‘ಸಿಕಂದರ್’ ಬಳಿಕ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಚಿತ್ರ ‘ಬ್ಯಾಟಲ್ ಆಫ್ ಗಲ್ವಾನ್’. 2020ರ ಜೂನ್ 15ರಂದು ಭಾರತ ಹಾಗೂ ಚೀನಾದ ನಡುವೆ ನಡೆದಿದ್ದ ಗಡಿ ಸಂಘರ್ಷದಲ್ಲಿ ಬಿಹಾರ್ ರೆಜಿಮೆಂಟ್ ಕಮಾಂಡಿಂಗ್ ಆಫೀಸರ್ ಸಂತೋಷ್ ಬಾಬು ಸೇರಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಅಷ್ಟೇ ಅಲ್ಲದೇ, ಚೀನಾದ ಶತ್ರು ಸೈನಿಕರನ್ನು ಭಾರತೀಯ ಸೈನಿಕರು ಧೈರ್ಯವಾಗಿ ಸದೆಬಡಿದಿದ್ದರು. ಈ ಕದನದ ನೈಜ ಘಟನೆಗಳೇ ಇದೀಗ ‘ಬ್ಯಾಟಲ್ ಆಫ್​ ಗಲ್ವಾನ್’ ಮೂಲಕ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ‘ಜಂಜೀರ್’ ನಿರ್ದೇಶಕ ಅಪೂರ್ವ ಲಾಖಿಯಾ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸಿಒ ಸಂತೋಷ್ ಬಾಬು ಪಾತ್ರದಲ್ಲಿ ಸಲ್ಮಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಪೂರ್ಣಗೊಂಡಿದ್ದು, ಸದ್ಯದಲ್ಲೇ ಚಿತ್ರದ ಶೂಟಿಂಗ್ ಕೂಡ ಆರಂಭವಾಗಲಿದೆ. ಹೀಗಿರುವಾಗ, ಚಿತ್ರದ ಮತ್ತೊಂದು ಅಪ್‌ಡೇಟ್ ದೊರೆತಿದ್ದು, ನಾಯಕಿಯಾಗಿ ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ಆಯ್ಕೆಯಾಗಿದ್ದಾರೆ. ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ, ಸಂಜಯ್ ದತ್ ಸೇರಿ ಹಲವು ಸ್ಟಾರ್‌ಗಳ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಚಿತ್ರಾಂಗದಾ ಇದೇ ಮೊದಲ ಬಾರಿಗೆ ಸಲ್ಮಾನ್‌ಗೆ ಜೋಡಿಯಾಗಲಿದ್ದಾರೆ. ಉಳಿದಂತೆ, 48 ವರ್ಷದ ಚಿತ್ರಾಂಗದಾ ‘ರಾತ್ ಅಕೇಲಿ ಹೈ-2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net