

ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ಇತ್ತೀಚಿನ ವರ್ಷಗಳಲ್ಲಿ ನಟನೆಯ ಅವಕಾಶ ಕಡಿಮೆಯಾಗುತ್ತಿರುವ ಕಾರಣವೋ ಏನೋ, ತಾವೇ ನಿರ್ವಣದತ್ತ ಮುಖ ಮಾಡಿದ್ದಾರೆ. 2018ರಲ್ಲಿ ಭಾರತ ತಂಡದ ಹಾಕಿ ಆಟಗಾರ ಸಂದೀಪ್ ಸಿಂಗ್ ಅವರ ಜೀವನಾಧಾರಿತ ‘ಸೂರ್ವ’ ಚಿತ್ರ ನಿರ್ವಿುಸಿದ್ದ ಚಿತ್ರಾಂಗದಾ, ಈಗ ಎರಡನೇ ಚಿತ್ರ ನಿರ್ವಣಕ್ಕೆ ಮುಂದಾಗಿದ್ದಾರೆ. ವಿಶೇಷ ಅಂದರೆ, ಈ ಬಾರಿಯೂ ಅವರು ನೈಜ ಘಟನೆ ಆಧಾರಿತ, ಬಯೋಪಿಕ್ ಕಥೆಯನ್ನೇ ಆರಿಸಿಕೊಂಡಿದ್ದಾರೆ.
ಹೌದು, ಇತ್ತೀಚೆಗಷ್ಟೇ ಕಾರ್ಗಿಲ್ ಹೀರೋ ಪರಮವೀರ ಚಕ್ರ ಪುರಸ್ಕೃತ ವೀರಯೋಧ ಸುಬೇದಾರ್ ಯೋಗೇಂದ್ರ ಯಾದವ್ ಅವರನ್ನು ಭೇಟಿಯಾಗಿರುವ ಚಿತ್ರಾಂಗದಾ ಅವರ ಕಥೆಗೆ ಹಕ್ಕುಗಳನ್ನು ಪಡೆದಿದ್ದಾರೆ. ತಮ್ಮ 19ನೇ ವಯಸ್ಸಿನಲ್ಲಿಯೇ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಯೋಗೇಂದ್ರ ಸಿಂಗ್ ಯಾದವ್, ಟೈಗರ್ ಹಿಲ್ಸ್ನ್ನು ಪಾಕಿ ಪಾತಕಿಗಳಿಂದ ಮರುವಶ ಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬರೋಬ್ಬರಿ 12 ಬುಲೆಟ್ಗಳು ದೇಹಕ್ಕೆ ಹೊಕ್ಕಿದ್ದರೂ ಎದೆಗುಂದದೇ ಹೋರಾಡಿ ನಾಲ್ಕು ಮಂದಿ ಪಾಕಿಸ್ತಾನದ ಸೈನಿಕರನ್ನು ಹೊಡೆದುರುಳಿಸಿದ್ದರು. ಈಗ ಅವರ ವೀರಗಾಥೆಗೆ ಸಿನಿಮಾ ರೂಪ ನೀಡಲು ನಟಿ ಚಿತ್ರಾಂಗದಾ ಮುಂದಾಗಿದ್ದಾರೆ.
ಈ ಕುರಿತು ಮಾಧ್ಯಮಗಳ ಬಳಿ ಮಾತನಾಡಿರುವ ಅವರು, ‘ನಮ್ಮ ನಡುವೆಯೇ ಇದ್ದರೂ ಕೆಲವು ರಿಯಲ್ ಹೀರೋಗಳನ್ನು ನಾವು ಮರೆತುಬಿಟ್ಟಿರುತ್ತೇವೆ. ಅವರ ಕಥೆಯನ್ನು ಹೇಳುವುದು ನನ್ನ ಉದ್ದೇಶ. ಹೀಗಾಗಿಯೇ ‘ಸೂರ್ವ’ ಬಳಿಕ ಈ ಚಿತ್ರವನ್ನು ನಿರ್ವಿುಸಲಿದ್ದೇನೆ’ ಎಂದಿದ್ದಾರೆ 45 ವರ್ಷದ ಚಿತ್ರಾಂಗದಾ ಸಿಂಗ್. -ಏಜೆನ್ಸೀಸ್