

ಹೈದರಾಬಾದ್: ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇತ್ತೀಚೆಗೆ ಕರೊನಾ ಪಾಸಿಟಿವ್ ಆಗಿದೆ ಎಂಬಂತಹ ಸುದ್ದಿಯೊಂದು ಕೇಳಿಬಂದಿತ್ತು. ಇದೀಗ ಮತ್ತೆ ಟೆಸ್ಟ್ ಮಾಡಿಸಿರುವ ಚಿರಂಜೀವಿ ಅವರಿಗೆ ನೆಗೆಟಿವ್ ಬಂದಿದೆ. ಇಷ್ಟಕ್ಕೂ ಅವರು ಕರೊನಾ ಪಾಸಿಟಿವ್ ಆಗಿದ್ದು ಹೇಗೆ ಗೊತ್ತಾ?
ಇದನ್ನೂ ಓದಿ: ದೀಪಾವಳಿಗೆ ಶುಭಕೋರಿದ ‘ಆರ್ಆರ್ಆರ್’
ಚಿರಂಜೀವಿ ಅವರಿಗೆ ಕರೊನಾ ಪಾಸಿಟಿವ್ ಎಂಬ ಸುದ್ದಿ ಬಂದಾಗ, ಬಹುಶಃ ಮದುವೆಗೆ ಹೋದಾಗ ಹೀಗಾಗಿರಬಹುದು, ಇನ್ನೆಲ್ಲೋ ಹೋದಾಗ ವೈರಸ್ ಅಂಟಿಕೊಂಡಿರಬಹುದು ಎಂದೆಲ್ಲಾ ತರ್ಕ ಮಾಡಲಾಗಿತ್ತು. ಆದರೆ, ಇದೀಗ ನಿಜಾಂಶ ಬೆಳಕಿಗೆ ಬಂದಿದ್ದು, ಚಿರಂಜೀವಿ ಅವರು ಕರೊನಾ ಪಾಸಿಟಿವ್ ಆಗಿದ್ದು ದೋಷಪೂರಿತ ಕಿಟ್ನಿಂದಾಗಂತೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ವೈದ್ಯರು ನನ್ನನ್ನು ಮೂರು ಟೆಸ್ಟ್ಗಳಿಗೆ ಒಳಪಡಿಸಿದರು. ಈ ಮೂರೂ ಟೆಸ್ಟ್ಗಳಲ್ಲಿ ನೆಗೆಟಿವ್ ಬಂದಿದ್ದು, ಮೊದಲ ಟೆಸ್ಟ್ ಪಾಸಿಟಿವ್ ಆಗುವುದಕ್ಕೆ ಮುಖ್ಯ ಕಾರಣ ದೋಷಪೂರಿತ ಆರ್ಟಿ-ಪಿಸಿಆರ್ ಕಿಟ್ ಆಗಿತ್ತು' ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ವೈದ್ಯರು ನೀಡಿರುವ ಹೊಸ ವರದಿಯನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ.
ಈ ಕುರಿತು ಇನ್ನಷ್ಟು ಬರೆದುಕೊಂಡಿರುವ ಅವರು, 'ಸಮಯ ಮತ್ತು ಕರೊನಾ ಕಳೆದ ನಾಲ್ಕು ದಿನಗಳಿಂದ ನನ್ನ ಜತೆಗೆ ಆಟ ಆಡುತ್ತಿದೆ. ಭಾನುವಾರ ಕರೊನಾ ಪಾಸಿಟಿವ್ ಎಂದು ಗೊತ್ತಾದಾಗ, ಕ್ವಾರಂಟೈನ್ಗೆ ಒಳಪಟ್ಟೆ. ಆದರೆ, ಎರಡು ದಿನಗಳಾದರೂ ನನಗೆ ಕರೊನಾದ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಕೊನೆಗೆ ಅಪೋಲೋ ಆಸ್ಪತ್ರೆಯ ವೈದ್ಯರನ್ನು ಭೃಟಿ ಮಾಡಿದೆ. ಸಿಟಿ ಸ್ಕ್ಯಾನ್ ನಂತರ, ನನ್ನ ದೇಹದಲ್ಲಿ ಯಾವುದೇ ವೈರಸ್ ಇಲ್ಲ ಎಂಬುದು ಗೊತ್ತಾಯಿತು. ಸುಮ್ಮನೆ ಸಮಸ್ಯೆ ಬೇಡ ಎಂಬ ಕಾರಣಕ್ಕೆ, ಇನ್ನೊಮ್ಮೆ ಕರೊನಾ ಟೆಸ್ಟ್ ಮಾಡಿಸಿದೆ. ಈ ಬಾರಿ ಮೂರು ವಿಭಿನ್ನ ಕಿಟ್ಗಳಲ್ಲಿ. ಈ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ' ಎನ್ನುತ್ತಾರೆ ಅವರು.
ಇದನ್ನೂ ಓದಿ: ಕೊನೆಗೂ ರವಿ ಬೆಳಗೆರೆ ನಿರ್ದೇಶಕರಾಗಲೇ ಇಲ್ಲ …
ಚಿರಂಜೀವಿ ಅವರು ಸದ್ಯದಲ್ಲೇ 'ಆಚಾರ್ಯ' ಚಿತ್ರದ ಚಿತ್ರೀಕರಣಕ್ಕೆ ತೆರಳಬೇಕಿದ್ದು, ಅದಕ್ಕೂ ಮುನ್ನ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಆಗ ಪಾಸಿಟಿವ್ ಬಂದಿದ್ದರಿಂದ, ಚಿತ್ರೀಕರಣ ಮುಂದೂಡಲ್ಪಟ್ಟಿದೆ. ಇದೀಗ ಅವರಿಗೆ ನೆಗೆಟಿವ್ ಎಂದು ವರದಿ ಬಂದಿರುವುದರಿಂದ, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.