ನಟ ಧ್ರುವ ಸರ್ಜಾ ಆರೋಗ್ಯದಲ್ಲಿ ಏರುಪೇರು: ಅಣ್ಣನ ಕೊರಗಲ್ಲೇ ಆಸ್ಪತ್ರೆ ಸೇರಿದ್ರಾ ಧ್ರುವ?

Dhruva
Published on

ಬೆಂಗಳೂರು: ಸಹೋದರ ಚಿರಂಜೀವಿ ಸರ್ಜಾ ಅಗಲಿಕೆಯಿಂದ ಮಾನಸಿಕವಾಗಿ ಕುಗ್ಗಿರುವ ನಟ ಧ್ರುವ ಸರ್ಜಾ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಾಗಿ, ಇದೀಗ ಡಿಸ್ಚಾರ್ಜ್​ ಆಗಿದ್ದಾರೆ.

ಎರಡು ದಿನಗಳ ಹಿಂದೆ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಧ್ರುವ ಚಿಕಿತ್ಸೆಯ ಬಳಿಕ ಇಂದು ಬಿಡುಗಡೆಯಾಗಿದ್ದಾರೆ. ಧ್ರುವ ಸರ್ಜಾ ಪೋಷಕರಿಗೂ ಅನಾರೋಗ್ಯ ಕಾಡಿದ್ದು, ಇದರಿಂದಲೂ ಧ್ರುವ ಮತ್ತಷ್ಟು ಕುಗ್ಗಿ ಹೋಗಿದ್ದರು ಎಂದು ತಿಳಿದುಬಂದಿದೆ.

ಚಿಕಿತ್ಸೆಯ ಬಳಿಕ ಮನೆಗೆ ತೆರಳಿರುವ ಧ್ರುವರಿಗೆ ಮಾವ ಅರ್ಜುನ್ ಸರ್ಜಾ ಕುಟುಂಬದ ಜೊತೆಗಿದ್ದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ. ಯಾರೂ ಮನೆಯ ಬಳಿ ಬರಬೇಡಿ ಎಂದು ಸರ್ಜಾ ಕುಟುಂಬ ಮನವಿ ಮಾಡಿದೆ.

ಸದಾ ಹಸನ್ಮುಖಿಯಾಗಿ ಎಲ್ಲರ ಫೆವರೀಟ್​ ಆಗಿದ್ದ ಸಹೋದರ ಚಿರು, ಧ್ರುವನಿಗೆ ಬೆನ್ನೆಲುಬಾಗಿ ನಿಂತಿದ್ದರು. ಅಣ್ಣ-ತಮ್ಮ ಒಟ್ಟಿಗೆ ಊಟ ಮಾಡುವ ವಿಡಿಯೋಗಳು ಈ ಹಿಂದೆ ವೈರಲ್​ ಆಗಿ, ಅವರಿಬ್ಬರ ನಡುವಿನ ಸಹೋದರತ್ವಕ್ಕೆ ಕನ್ನಡಿ ಹಿಡಿದಂತಿತ್ತು. ಅಂತಹ ಅಣ್ಣ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದನಲ್ಲ ಎಂಬ ಕೊರಗು ಧ್ರುವಗೆ ಕಾಡುತ್ತಲೇ ಇತ್ತು. ಹೀಗಾಗಿಯೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದಿನವೂ ಅಣ್ಣನ ಬಗ್ಗೆ ಧ್ರುವ ಏನಾದರೂ ಒಂದನ್ನು ಭಾವುಕವಾಗಿ ಬರೆಯುತ್ತಲೇ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net