

ಮಕ್ಕಳ ರಾಜ್ಯ: ಕನ್ನಡದಲ್ಲಿ ಬಿಡುಗಡೆಯಾದ ಮೊದಲ ಮಕ್ಕಳ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಿತ್ರವೆಂದರೆ, ಅದು ಬಿ.ಆರ್. ಪಂತುಲು ನಿರ್ದೇಶನದ ‘ಮಕ್ಕಳ ರಾಜ್ಯ’. 1960ರಲ್ಲಿ ಬಿಡುಗಡೆಯಾದ ಈ ಚಿತ್ರದ ಮೂಲಕ ಹಿರಿಯ ನಟ ಉಮೇಶ್ ಬಾಲನಟರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದೊಂದು ಕಾಲ್ಪನಿಕ ಜಾನಪದ ಕಥೆಯಾಗಿದ್ದು, ಚಂದ್ರನ ಮೇಲೆ ಮನುಷ್ಯ ಕಾಲಿಡುವಂತಹ ದೃಶ್ಯಗಳನ್ನು ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿತ್ತು.
ನಾಗರಹೊಳೆ: ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಮೊದಲ ಮಕ್ಕಳ ಚಿತ್ರ ಇದು. ಶಾಲಾಮಕ್ಕಳು ನಾಗರಹೊಳೆ ಅಭಯಾರಣ್ಯಕ್ಕೆ ಹೋದ ಸಂದರ್ಭದಲ್ಲಿ ನಡೆಯುವ ರೋಚಕ ಘಟನೆಗಳನ್ನು ಈ ಚಿತ್ರದಲ್ಲಿ ಹಿಡಿದಿಡಲಾಗಿದೆ. ವಿಷ್ಣುವರ್ಧನ್ ಮತ್ತು ಅಂಬರೀಷ್ ಇಬ್ಬರೂ ಈ ಚಿತ್ರದಲ್ಲಿ ನಟಿಸಿದ್ದರು. ಇದಾಗಿ ಕೆಲವು ವರ್ಷಗಳ ಅಂತರದಲ್ಲಿ ‘ಸಿಂಹದ ಮರಿ ಸೈನ್ಯ’ ಎಂಬ ಇನ್ನೊಂದು ಮಕ್ಕಳ ಚಿತ್ರವನ್ನು ಬಾಬು ನಿರ್ದೇಶಿಸಿದ್ದಷ್ಟೇ ಅಲ್ಲ, ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
ಪುಟಾಣಿ ಏಜೆಂಟ್ 123: ಮಕ್ಕಳ ಮತ್ತೊಂದು ಸಾಹಸಮಯ ಕಥೆ ಇದ್ದ ಈ ಚಿತ್ರದಲ್ಲಿ ಮೂವರು ಮಕ್ಕಳು ದುಷ್ಟಶಕ್ತಿಗಳ ವಿರುದ್ಧ ಹೇಗೆ ಹೋರಾಡುತ್ತಾರೆ ಎಂದು ತೋರಿಸಲಾಗಿದೆ. ಕೋತಿಯೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ವಿಶೇಷತೆ.
ಬೆಟ್ಟದ ಹೂವು: ಪುನೀತ್ ರಾಜಕುಮಾರ್ ಬಾಲನಟನಾಗಿ ಅಭಿನಯಿಸಿದ ಈ ಚಿತ್ರವು ರಾಮು ಎಂಬ ಬಾಲಕನೊಬ್ಬನ ಸುತ್ತ ಸುತ್ತುತ್ತದೆ. ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಪುಸ್ತಕವನ್ನು ಖರೀದಿಸಿ ಓದಬೇಕೆನ್ನುವುದು ಅವನ ಆಸೆ. ಆ ಪುಸ್ತಕ ಖರೀದಿಸುವುದಕ್ಕೆ ಹಣ ಹೊಂದಿಸುವ ನಿಟ್ಟಿನಲ್ಲಿ ಆತ ಏನೆಲ್ಲಾ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ಗೆ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಬಾಲನಟ ಪ್ರಶಸ್ತಿ ಸಿಕ್ಕಿತ್ತು.
ಚಿನ್ನಾರಿ ಮುತ್ತ: ಹಳ್ಳಿಯೊಂದರ ಮುಗ್ಧ ಬಾಲಕ ದೊಡ್ಡ ಅಥ್ಲೀಟ್ ಆಗುವ ಕಥೆ ಇರುವ ಈ ಚಿತ್ರದ ಮೂಲಕ ವಿಜಯ್ ರಾಘವೇಂದ್ರ ಬಾಲನಟನಾಗಿ ಪರಿಚಿತರಾದರು. ಮಕ್ಕಳಲ್ಲಿ ಕ್ರೀಡೆಯ ಕುರಿತು ಉತ್ತೇಜನ ತುಂಬುವ ಚಿತ್ರ ಇದಾಗಿದ್ದು, ಸಿ. ಅಶ್ವತ್ಥ್ ಸಂಯೋಜಿಸಿರುವ ಹಾಡುಗಳು ಸಾಕಷ್ಟು ಜನಪ್ರಿಯವಾಗಿವೆ.
ಕೊಟ್ರೇಶಿ ಕನಸು: ಹೆಸರೇ ಹೇಳುವಂತೆ, ಇದು ಕೊಟ್ರೇಶಿ ಎಂಬ ಹುಡುಗನ ಕನಸಿನ ಕುರಿತಾದ ಚಿತ್ರ. ಕೆಳಸ್ಥರದ ಈ ಹುಡುಗ, ಚೆನ್ನಾಗಿ ಓದಬೇಕೆನ್ನುವ ತನ್ನ ಕನಸನ್ನು ಹೇಗೆ ನನಸಾಗಿಸಿಕೊಳ್ಳುತ್ತಾನೆ ಎಂಬ ಕಥೆ ಈ ಚಿತ್ರದ್ದಾಗಿದ್ದು, ಕುಂ.ವೀ. ಅವರ ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ ಕಥೆಯನ್ನು ಆಧರಿಸಿದ್ದಾಗಿದೆ.
ಭೈರವಿ: ಬೇಬಿ ಶ್ಯಾಮಿಲಿ ಅಭಿನಯದ ಈ ಚಿತ್ರವು ಅದೆಷ್ಟು ಜನಪ್ರಿಯವಾಗಿತ್ತೆಂದರೆ, ನಂತರದ ದಿನಗಳಲ್ಲಿ ಶ್ಯಾಮಿಲಿ ಅಭಿನಯದಲ್ಲೇ ‘ಶಾಂಭವಿ’, ‘ದಾಕ್ಷಾಯಿಣಿ’, ‘ಭುವನೇಶ್ವರಿ’ ಮುಂತಾದ ಹಲವು ಚಿತ್ರಗಳು ಬಿಡುಗಡೆಯಾದವು. ಈ ಚಿತ್ರಗಳಲ್ಲಿ ನಾಯಿ, ಕೋತಿ, ಆನೆ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ವಿಶೇಷ.
ಕೇರ್ ಆಫ್ ಫುಟ್ಪಾತ್: ಒಬ್ಬ ಸ್ಲಂ ಹುಡುಗ ವಿದ್ಯಾಭ್ಯಾಸ ಪಡೆಯುವುದಕ್ಕೆ ಏನೆಲ್ಲಾ ಅಡೆತಡೆಗಳನ್ನು ಎದುರಿಸುತ್ತಾನೆ ಎಂಬ ಕಥೆ ಇರುವ ಈ ಚಿತ್ರದಲ್ಲಿ ಮಾಸ್ಟರ್ ಕಿಶನ್ ನಟಿಸಿದ್ದರು. ಅಷ್ಟೇ ಅಲ್ಲ, ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಜಗತ್ತಿನ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ತುತ್ತೂರಿ: ಬೆಂಗಳೂರೆಂಬ ಕಾಂಕ್ರೀಟ್ ಕಾಡಿನಲ್ಲಿ ಮಕ್ಕಳಿಗೆ ಆಡುವುದಕ್ಕೆ ಸ್ಥಳವೇ ಇಲ್ಲ. ಒಂದಿಷ್ಟು ಮಕ್ಕಳು ಆಟದ ಮೈದಾನಕ್ಕಾಗಿ ಏನೆಲ್ಲ ಮಾಡುತ್ತಾರೆ ಎಂಬ ಈ ಚಿತ್ರವನ್ನು ಪಿ. ಶೇಷಾದ್ರಿ ನಿರ್ದೇಶಿಸಿದ್ದಾರೆ.
ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ: ಕಾಸರಗೋಡಿನಲ್ಲಿರುವ ಕನ್ನಡ ಶಾಲೆಯನ್ನು ಮುಚ್ಚುವುದಕ್ಕೆ ಅಧಿಕಾರಿಗಳು ಮುಂದಾದಾಗ, ಅಲ್ಲಿ ಓದುವ ವಿದ್ಯಾರ್ಥಿಗಳೇ ಹೇಗೆ ತಮ್ಮ ಶಾಲೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದು ಮನರಂಜನಾತ್ಮಕವಾಗಿ ಹೇಳುವ ಈ ಚಿತ್ರದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರ ವಹಿಸಿದರೆ, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.
ಇಷ್ಟೇ ಅಲ್ಲ ... ಇದು ಉದಾಹರಣೆಗಳಷ್ಟೇ. ಕನ್ನಡದಲ್ಲಿ ‘ಕಳಸಾಪುರದ ಹುಡುಗರು’, ‘ಜಂಬೂ ಸವಾರಿ’, ‘ಮಕ್ಕಳ ಸಾಕ್ಷಿ’, ‘ಹೆಜ್ಜೆಗಳು’, ‘ದಂಗೆ ಎದ್ದ ಮಕ್ಕಳು;, ‘ಗುಬ್ಬಚ್ಚಿಗಳು’, ‘ಪುಟಾಣಿ ಪಾರ್ಟಿ’, ‘ಗಿರ್ವಿುಟ್’, ‘ಪ್ರಸಾದ್’ ಸೇರಿದಂತೆ ಮಕ್ಕಳಲ್ಲಿ ಸ್ಪೂರ್ತಿ ತುಂಬುವ ಹಲವು ಚಿತ್ರಗಳು ಇದುವರೆಗೂ ಬಿಡುಗಡೆಯಾಗಿವೆ.