

ಬೆಂಗಳೂರು: ‘ಜೋಡೆತ್ತು’ ಎಂದಾಕ್ಷಣ ನಟರಾದ ಯಶ್ ಮತ್ತು ದರ್ಶನ್ ಕಣ್ಣಮುಂದೆ ಬರುತ್ತಾರೆ. 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಜ್ಯ ರಾಜಕಾರಣದಲ್ಲಿ ಅತಿಹೆಚ್ಚು ಸದ್ದು ಮಾಡಿದ ಪದವದು. ಆಗಲೇ ಆ ಶೀರ್ಷಿಕೆಯನ್ನು ನೋಂದಣಿ ಮಾಡಿಸಲು ಚಿತ್ರತಂಡಗಳು ಫಿಲಂ ಚೇಂಬರ್ ಎದುರು ಸಾಲುಗಟ್ಟಿದ್ದವು. ಆದರೆ, ಯಾವ ಸಿನಿಮಾ ಕೂಡ ಸೆಟ್ಟೇರಿರಲಿಲ್ಲ. ಇದೀಗ ಆರು ವರ್ಷಗಳ ಬಳಿಕ ‘ಜೋಡೆತ್ತು’ ಸೆಟ್ಟೇರಿದೆ. ‘ಉಪಾಧ್ಯಕ್ಷ’ ಮತ್ತು ‘ಲಕ್ಷ್ಮೀಪುತ್ರ’ ಬಳಿಕ ಹಾಸ್ಯನಟ ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ಮೂರನೇ ಚಿತ್ರವಿದು. ‘ಅಯೋಗ್ಯ’, ‘ಮದಗಜ’, ‘ಅಯೋಗ್ಯ 2’ ನಂತರ ನಿರ್ದೇಶಕ ಮಹೇಶ್ ಆ್ಯಕ್ಷನ್-ಕಟ್ ಹೇಳುತ್ತಿರುವ ನಾಲ್ಕನೇ ಸಿನಿಮಾ. ಹಾಗೇ ‘ಫೈಟರ್’ ಬಳಿಕ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸುತ್ತಿರುವ ಎರಡನೇ ಚಿತ್ರವಿದು. ಇತ್ತೀಚೆಗಷ್ಟೆ ‘ಜೋಡೆತ್ತು’ ಮುಹೂರ್ತ ನೆರವೇರಿದ್ದು, ನಿರ್ದೇಶಕ ಆರ್.ಚಂದ್ರು ಕ್ಯಾಮರಾಕ್ಕೆ ಚಾಲನೆ ನೀಡಿದರೆ, ನಟ ಶರಣ್ ಆರಂಭ ಫಲಕ ತೋರಿಸಿ, ಟೈಟಲ್ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು. ‘ಜೋಡೆತ್ತು’ನಲ್ಲಿ ಚಿಕ್ಕಣ್ಣ ಜತೆ ತೆಲುಗು ಹಾಸ್ಯನಟ ಸುನೀಲ್ ಹೆಗಲಾಗಿದ್ದಾರೆ. ‘ಮ್ಯಾಕ್ಸ್’ ಬಳಿಕ ಸುನೀಲ್ ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ. ಚಿಕ್ಕಣ್ಣ, ‘ಇದು 80ರ ಕಾಲಘಟ್ಟದಲ್ಲಿ ನಡೆಯುವ ಕಥೆ. ನನ್ನ ಕರಿಯರ್‌ನಲ್ಲೇ ದೊಡ್ಡ ಬಜೆಟ್ ಸಿನಿಮಾ. ಹಳ್ಳಿಯಲ್ಲಿ ಶುರುವಾಗಿ ಹಳ್ಳಿಯಲ್ಲೇ ಮುಗಿಯುವ ಕಥೆ. ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ, ಆ್ಯಕ್ಷನ್ ಎಲ್ಲ ಅಂಶಗಳಿರುವ ಚಿತ್ರ. ನವೆಂಬರ್‌ನಿಂದ ಶೂಟಿಂಗ್ ಶುರುವಾಗಲಿದೆ’ ಎಂದು ಮಾಹಿತಿ ನೀಡಿದರು. ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ, ರಾಜಶೇಖರ್, ರಘು ನಿಡುವಳ್ಳಿ ಸಂಭಾಷಣೆ, ಮೋಹನ್ ಬಿ.ಕೆರೆ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ. ಕನ್ನಡ ಸೇರಿ ತೆಲುಗು, ತಮಿಳಿನಲ್ಲಿ ‘ಜೋಡೆತ್ತು’ ಮೂಡಿಬರಲಿದೆ.