

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಕಾಮಿಡಿ ಮಾಡುತ್ತಲೇ ಹೀರೋ ಆಗಿ ಮಿಂಚಿದವರ ಸಂಖ್ಯೆ ಕಡಿಮೆ ಏನೂ ಇಲ್ಲ. ನಟರಾದ ಜಗ್ಗೇಶ್, ಕೋಮಲ್, ಶರಣ್ ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು, ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಎನಿಸಿಕೊಂಡಿದ್ದಾರೆ ನಟ ಚಿಕ್ಕಣ್ಣ. ಹೌದು.. ಹೆಚ್ಚೂಕಡಿಮೆ ಒಂದು ದಶಕದಿಂದ ಕನ್ನಡ ಸಿನಿಪ್ರೇಕ್ಷಕರನ್ನು ನಗಿಸುತ್ತಲೇ ಬಂದಿರುವ ಚಿಕ್ಕಣ್ಣ ಸದ್ಯದಲ್ಲೇ ಅದೇ ಕೆಲಸವನ್ನು ದೊಡ್ಡಮಟ್ಟದಲ್ಲಿ ಮಾಡಲಿದ್ದಾರೆ.
ಅಂದರೆ ಒಂದು ಹಾಸ್ಯಪ್ರಧಾನ ಚಿತ್ರದ ಮೂಲಕ ಅವರು ಹೀರೋ ಆಗಿ ಪರದೆ ಮೇಲೆ ಬರಲಿದ್ದಾರೆ. ಇದುವರೆಗೆ ಸಣ್ಣಪುಟ್ಟ ಪಾತ್ರಗಳಲ್ಲಿ ರಂಜಿಸುತ್ತಲೇ ಬಂದಿರುವ ಚಿಕ್ಕಣ್ಣ, ಕೆಲವೊಂದು ಹಾಸ್ಯಪ್ರಧಾನ ಚಿತ್ರಗಳಲ್ಲಿ ಮೂರ್ನಾಲ್ಕು ಕಥಾನಾಯಕರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರೂ ಏಕೈಕ ಹೀರೋ ಆಗಿ ಯಾವ ಚಿತ್ರದಲ್ಲಿ ನಟಿಸಿರಲಿಲ್ಲ. ಆದರೆ ಇದೀಗ ಆ ಅವಕಾಶ ಅವರಿಗೆ ಒದಗಿಬಂದಿದ್ದು, ‘ಸೋಲೋ ಹೀರೋ’ ಆಗಿ ಅವರು ತೆರೆ ಮೇಲೆ ಮಿಂಚಲಿದ್ದಾರೆ. ಸದ್ಯದಲ್ಲೇ ತೆರೆ ಕಾಣಲಿರುವ ‘ಶ್ರೀ ಭರತ ಬಾಹುಬಲಿ’ ಸಿನಿಮಾದಲ್ಲಿ ಹೀರೋ ಸ್ನೇಹಿತನಾಗಿ, ಒಂದರ್ಥದಲ್ಲಿ ಸೆಕೆಂಡ್ ಹೀರೋ ಆಗಿ ಕಾಣಿಸಿಕೊಂಡಿರುವ ಚಿಕ್ಕಣ್ಣ, ಇನ್ನು ಕೆಲವು ದಿನಗಳಲ್ಲಿ ಹೀರೋ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ. ‘ಶ್ರೀ ಭರತ ಬಾಹುಬಲಿ’ ಚಿತ್ರಕ್ಕೆ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿರುವ ಮಂಜು ಮಾಂಡವ್ಯ ಅವರೇ ಚಿಕ್ಕಣ್ಣ ನಾಯಕನಾಗಲಿರುವ ಸಿನಿಮಾಗೆ ನಿರ್ದೇಶನ ಮಾಡಲಿರುವುದು ವಿಶೇಷ. ಅದರಲ್ಲೂ ಸದ್ಯ ದರ್ಶನ್ ಅಭಿನಯದ ಅದ್ದೂರಿ ಸಿನಿಮಾ ‘ರಾಬರ್ಟ್’ಗೆ ಬಂಡವಾಳ ಹೂಡಿರುವ ಉಮಾಪತಿ ಶ್ರೀನಿವಾಸ್ ಅವರೇ ಈ ಚಿತ್ರಕ್ಕೆ ನಿರ್ವಪಕರಾಗಿರುವುದು ಮತ್ತೊಂದು ವಿಶೇಷ. ಈ ಮೂಲಕ ಚಿಕ್ಕಣ್ಣ ನಾಯಕನಾಗಿ ಕಾಣಿಸಲಿರುವ ಸಿನಿಮಾ ದೊಡ್ಡ ಮಟ್ಟದಲ್ಲೇ ಮೂಡಿಬರುವ ಸಾಧ್ಯತೆ ಇದೆ. ಅಂದಹಾಗೆ ಈ ಚಿತ್ರದ ಶೀರ್ಷಿಕೆ ಇನ್ನಷ್ಟೇ ನಿಗದಿ ಆಗಬೇಕಿದ್ದು, ಉಳಿದ ಕಲಾವಿದರ ಆಯ್ಕೆ ಕೂಡ ಇನ್ನಷ್ಟೇ ಆಗಬೇಕಿದೆ.
ಚಿತ್ರರಂಗಕ್ಕೆ ಬಂದು ಹೆಚ್ಚೂಕಮ್ಮಿ ಹತ್ತು ವರ್ಷಗಳಾಗಿವೆ. ಹೀರೋ ಎನ್ನುವುದಕ್ಕಿಂತ ವೃತ್ತಿಜೀವನದಲ್ಲಿ ಒಂದು ಮೆಟ್ಟಿಲು ಮೇಲೇರಿದ್ದೇನೆ ಎನ್ನಬಹುದು. ಈ ಚಿತ್ರ ಕಾಮಿಡಿ ಜಾನರ್ನಲ್ಲಿದ್ದು, ಮುಂದಿನ ತಿಂಗಳಿನಿಂದ ಶೂಟಿಂಗ್ ಶುರು ಆಗಲಿದೆ. | ಚಿಕ್ಕಣ್ಣ ನಟ