

ಚಿಕ್ಕಬಳ್ಳಾಪುರ: ನಟ ಚಿರಂಜೀವಿ ಅಭಿನಯದ ಮುಂದಿನ ತೆಲಗು ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಿದ್ದು ಈ ಬಗ್ಗೆ ನಿರ್ದೇಶಕರೊಬ್ಬರು ಚರ್ಚಿಸಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮುಠಾಮೇಸ್ತ್ರಿ ಸಿನಿಮಾದಲ್ಲಿ ದೃಶ್ಯದಂತೆ ಮಾರುಕಟ್ಟೆಯಲ್ಲಿ ಮೂಟೆಯನ್ನು ಹೊತ್ತು ಸಾಗಿದ ವಿಡಿಯೋ ವೈರಲ್ ಆಗಿದ್ದು ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ನಟ ಚಿರಂಜೀವಿ ಅಭಿನಂದಿಸಿದ್ದರು. ಇಬ್ಬರದ್ದು ಒಂದೇ ಸಮುದಾಯ. ಈಗ ಅವರ ನಟನೆಯ ಸಿನಿಮಾನದಲ್ಲಿ ಅಭಿನಯಿಸಲು ಖ್ಯಾತ ನಿರ್ದೇಶಕರು ಚರ್ಚಿಸಿದ್ದಾರೆ. ಅದು ಈಗಾಗಲೇ ಬಿಡುಗಡೆಯ ಹಂತದಲ್ಲಿರುವ ಚಿರಂಜೀವಿರವರ ವಿಶ್ವಾಂಭರ ಸಿನಿಮಾ ಅಲ್ಲ. ಇನ್ನು ಆ ಸಿನಿಮಾಗೆ ಹೆಸರಿಟ್ಟಿಲ್ಲ, ಶೂಟಿಂಗ್ ನಡೆದಿಲ್ಲ. ಕೇವಲ ಒಂದು ಹಂತದ ಮಾತುಕತೆಯಾಗಿದೆ. ಆದರೆ, ಪಾತ್ರಧಾರಿ ಸೇರಿದಂತೆ ಯಾವುದೇ ವಿಚಾರಗಳು ಅಂತಿಮಗೊಂಡಿಲ್ಲ ಎಂದರು.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಒತ್ತು ನೀಡಲಾಗುತ್ತಿದೆ. ಜನರ ಬಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಲಾಗುವುದು. ಕೋಟ್ಯಂತರ ರೂ ಮೌಲ್ಯದ ಪ್ರಗತಿಪರ ಕೆಲಸಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
*ಮುಠಾಮೇಸ್ತ್ರಿ ಪ್ರಚಾರ
ಕಳೆದ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದಾಗ ಹಮಾಲಿಗಳೊಂದಿಗೆ ಪ್ರದೀಪ್ ಈಶ್ವರ್ ಮೂಟೆ ಹೊತ್ತು, ಲಾರಿಗೆ ಹಾಕಿದ್ದರು. ಇದರ ವಿಡಿಯೋ ಚಿರಂಜೀವಿ ನಟನೆಯ ಮುಠಾಮೇಸ್ತ್ರಿ ಹಾಡಿನೊಂದಿಗೆ ವೈರಲ್ ಆಗಿತ್ತು. ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿ, ಚುನಾವಣಾ ಫಲಿತಾಂಶದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತ್ತು.