ಶುಕ್ರವಾರದಿಂದ 'ಚೇಸ್​' ಮಾಡಲಿದ್ದಾರೆ ರಾಧಿಕಾ ನಾರಾಯಣ್ ...

Chase_(151)
Published on

ಬೆಂಗಳೂರು: ಕೋವಿಡ್​ಗೂ ಮುನ್ನವೇ ಮುಗಿದಿತ್ತು ಅವಿನಾಶ್​ ನರಸಿಂಹರಾಜು, ರಾಧಿಕಾ ನಾರಾಯಣ್​ ಮುಂತಾದವರು ನಟಿಸಿದ್ದ 'ಚೇಸ್​'. ಆದರೆ, ಚಿತ್ರವು ಕಾರಣಾಂತರಗಳಿಂದ ಬಿಡುಗಡೆ ಆಗಿರಲಿಲ್ಲ. ಈಗ ಕೊನೆಗೆ 'ಚೇಸ್​' ಶುರುವಾಗುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಶುಕ್ರವಾರ (ಜುಲೈ 15) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

'ಚೇಸ್​' ಚಿತ್ರವನ್ನು ಸಿಂಪ್ಲಿಫನ್​ ಮೀಡಿಯಾ ನೆಟ್​ವರ್ಕ್​ ಸಂಸ್ಥೆಯಡಿ ಮನೋಹರ್ ಸುವರ್ಣ, ಪ್ರದೀಪ್​ ಶೆಟ್ಟಿ ಮತ್ತು ಪ್ರಶಾಂತ್​ ಶೆಟ್ಟಿ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು ವಿಲೋಕ್​ ಶೆಟ್ಟಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೊಂದು ಥ್ರಿಲ್ಲರ್​ ಅಷ್ಟೇ ಅಲ್ಲ, ಹಲವು ಶೈಲಿಯ ಥ್ರಿಲ್ಲರ್​ಗಳ ಮಿಶ್ರಣ ಎನ್ನುತ್ತಾರೆ ವಿಲೋಕ್​ ಶೆಟ್ಟಿ.

'ಥ್ರಿಲ್ಲರ್​ಗಳಲ್ಲೂ ಬೇರೆಬೇರೆ ತರಹದ ಥ್ರಿಲ್ಲರ್​ಗಳಿವೆ. ಇಲ್ಲಿ ಮೆಡಿಕಲ್​, ಕ್ರೈಮ್, ಸಸ್ಪೆನ್ಸ್​​ ಮುಂತಾದ ಥ್ರಿಲ್ಲರ್​ಗಳನ್ನು ಮಿಕ್ಸ್​ ಮಾಡಿ ಚಿತ್ರ ಮಾಡಲಾಗಿದೆ. ಈ ಚಿತ್ರವನ್ನು ಯುಎಫ್​ಓ-ಕ್ಯೂಬ್​ ಸಂಸ್ಥೆ ಬಿಡುಗಡೆ ಮಾಡುತ್ತಿದ್ದು, ಈ ಸಂಸ್ಥೆ ಬಿಡುಗಡೆ ಮಾಡುತ್ತಿರುವ ಮೊದಲ ಕನ್ನಡ ಚಿತ್ರ ಇದು' ಎನ್ನುತ್ತಾರೆ.

ರಾಧಿಕಾ ನಾರಾಯಣ್​ಗೆ ಈ ಚಿತ್ರ ಬಹಳ ವಿಶೇಷವಾದ ಚಿತ್ರವಂತೆ. 'ಈ ಚಿತ್ರದಲ್ಲಿ ಹಲವು ಮೊದಲುಗಳಿವೆ. ಪ್ರಮುಖವಾಗಿ, ನಾನು ಇದೇ ಮೊದಲ ಬಾರಿಗೆ ಶ್ವಾನದ ಜತೆಗೆ ಕೆಲಸ ಮಾಡಿದ್ದೇನೆ. ಹಾಗೆಯೇ, ಪೊಲೀಸ್​ ಟ್ರೈನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದ ನಿಜವಾದ ಹೀರೋ ಎಂದರೆ ಅದು ಮ್ಯಾಕ್ಸ್​ ಎಂಬ ಶ್ವಾನ. ಈ ಚಿತ್ರ ಚೆನ್ನಾಗಿ ಮೂಡಿಬಂದಿದ್ದು, ಯಾವುದೇ ರಾಜಿ ಇಲ್ಲದೆ ಚಿತ್ರ ಮಾಡಿದ್ದಾರೆ' ಎನ್ನುತ್ತಾರೆ.

ರಾಜೇಶ್ ನಟರಂಗ ಇಲ್ಲಿ ವೈದ್ಯರಾಗಿ ನಟಿಸಿದ್ದಾರೆ. 'ಈ ಚಿತ್ರದಲ್ಲಿ ಮೆಡಿಕಲ್ ಮಾಫಿಯಾ ಬಗ್ಗೆ ಗಮನ ಹರಿಸಲಾಗಿದೆ. ಚಿತ್ರದಲ್ಲಿ ಎಲ್ಲ ಕಮರ್ಷಿಯಲ್ ಅಂಶಗಳಿವೆ. ಬಹಳ ಮುಖ್ಯವಾದ ಪಾತ್ರ ನನ್ನದು. ನನ್ನ ಕೆರಿಯರ್​ನಲ್ಲೇ ಇದು ಬೇರೆ ತರಹದ ಪಾತ್ರ ಇದು' ಎನ್ನುತ್ತಾರೆ ರಾಜೇಶ್ ನಟರಂಗ.

ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ನರಸಿಂಹರಾಜು ಸಹ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಕೋವಿಡ್ ನಂತರ ಸಾಕಷ್ಟು ಬದಲಾವಣೆಗಳಾಗಿವೆ. ಚಿತ್ರ ನೋಡುವ ಪರಿಪಾಠ ಬದಲಾಗಿದೆ. ಆದರೆ, ನಿರ್ದೇಶಕ ವಿಲೋಕ್ ಶೆಟ್ಟಿ ಬಹಳ ಮುಂದಾಲೋಚನೆಯಿಂದ ಚಿತ್ರ ಮಾಡಿದ್ದಾರೆ. ಚಿತ್ರ ಸ್ವಲ್ಪ ನಿಧಾನವಾದರೂ, ಇವತ್ತಿಗೆ ಸರಿಯಾಗಿದೆ. ಇದೊಂದು ವಿಭಿನ್ನ ಪ್ರಯತ್ನ' ಎನ್ನುತ್ತಾರೆ ಅವಿನಾಶ್.

ಚಿತ್ರಕ್ಕೆ ಅನಂತ್​ ಅರಸ್​ ಛಾಯಾಗ್ರಹಣ ಮಾಡಿದ್ದು, ಕಾರ್ತಿಕ್​ ಆಚಾರ್ಯ ಎನ್ನುವವರು ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಶೀತಲ್​ ಶೆಟ್ಟಿ, ಅರ್ಜುನ್​ ಯೋಗೇಶ್​ ರಾಜ್​, ಅರವಿಂದ್​ ರಾವ್​, ಸುಧಾ ಬೆಳವಾಡಿ, ಶ್ವೇತಾ ಸಂಜೀವಲು, ಅರವಿಂದ್​ ಬೋಳಾರ್​, ವೀಣಾ ಸುಂದರ್​, ರೆಹಮಾನ್​ ಹಾಸನ್​ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net