ಆಗಸ್ಟ್​ನಲ್ಲಿ ಚಾರ್ಲಿ; 150 ಪ್ಲಸ್ ದಿನಗಳ ಕಾಲ 8 ರಾಜ್ಯಗಳಲ್ಲಿ ಚಿತ್ರೀಕರಣ..

Charli
Published on

ಬೆಂಗಳೂರು: ಅಂತೂ ‘777 ಚಾರ್ಲಿ’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಚಿತ್ರತಂಡದವರು ಕಳೆದ ತಿಂಗಳು ಕಾಶ್ಮೀರಕ್ಕೆ ಹೋದಾಗಲೇ, ಈ ಬಾರಿ ಚಿತ್ರೀಕರಣ ಮುಗಿಸಿಯೇ ಬರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಇನ್ನೂ ಐದು ದಿನಗಳ ಕಾಲ ಪ್ಯಾಚ್​ವರ್ಕ್ ಇದ್ದು, ನಾಳೆಯಿಂದ ಬಾಕಿ ಉಳಿದಿರುವ ಚಿತ್ರೀಕರಣ ನಡೆಯಲಿದೆ.

ಇದುವರೆಗೂ 151 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಚಿತ್ರೀಕರಣ ಮುಗಿಯುವ ಹೊತ್ತಿಗೆ ಒಟ್ಟು 156 ದಿನಗಳ ಚಿತ್ರೀಕರಣವಾಗಲಿದೆ. ಈ ಕುರಿತು ಮಾತನಾಡುವ ನಿರ್ದೇಶಕ ಕಿರಣ್ ರಾಜ್, ‘ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು, ಗೋವಾ, ಗುಜರಾತ್, ರಾಜಸ್ತಾನ್, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರೀಕರಣ ಅಷ್ಟು ಸುಲಭವಾಗಿರಲಿಲ್ಲ. ನಾನು ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿದ್ದೆ. ಅದನ್ನು ಒಂದೇ ಹಂತ 70 ದಿನಗಳಲ್ಲಿ ಚಿತ್ರೀಕರಣ ಮಾಡಿದ್ದೆವು. ಇದು ಅಷ್ಟು ಸುಲಭವಾಗಿರಲಿಲ್ಲ’ ಎಂದು ನೆನೆಯುತ್ತಾರೆ ಕಿರಣ್.

ಪ್ರಮುಖವಾಗಿ ಚಾರ್ಲಿಯನ್ನು ಟ್ರೇನ್ ಮಾಡುವುದೇ ದೊಡ್ಡ ಸವಾಲಾಗಿತ್ತು ಎನ್ನುತ್ತಾರೆ ಅವರು. ‘ಒಂದು ನಾಯಿ ಮತ್ತು ಅದರ ಯಜಮಾನನ ಸುತ್ತ ನಡೆಯುವ ಕಥೆ ಇದು. ಇಲ್ಲಿ ನಾಯಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇಡೀ ಚಿತ್ರದಲ್ಲಿ ಅದು 300ಕ್ಕೂ ಹೆಚ್ಚು ಟಾಸ್ಕ್​ಗಳನ್ನು ಮಾಡಬೇಕಿತ್ತು. ಅದಕ್ಕೆ ತರಬೇತಿ ಕೊಡುವುದಷ್ಟೇ ಅಲ್ಲ, ಅದರ ಮೂಡ್ ನೋಡಿ ಚಿತ್ರೀಕರಣ ಮಾಡಬೇಕಿತ್ತು. ಅದರ ಮೂಡ್ ಚೆನ್ನಾಗಿಡುವುದಕ್ಕಾಗಿಯೇ ಏಸಿ ಕ್ಯಾರಾವಾನ್ ಮತ್ತು ವಿಶೇಷ ಆಹಾರದ ವ್ಯವಸ್ಥೆ ಮಾಡಲಾಗಿತ್ತು’ ಎನ್ನುತ್ತಾರೆ ಕಿರಣ್. ಈಗಾಗಲೇ ಚಿತ್ರದ ಮೊದಲಾರ್ಧದ ತಾಂತ್ರಿಕ ಕೆಲಸಗಳು ಮುಗಿದಿದ್ದು, ಸದ್ಯದಲ್ಲೇ ಎರಡನೆಯ ಹಂತದ ಕೆಲಸಗಳು ಶುರುವಾಗಲಿದೆಯಂತೆ. ಎಲ್ಲ ಅಂದುಕೊಂಡಂತೆ ಆದರೆ, ಆಗಸ್ಟ್ ಕೊನೆಯಲ್ಲಿ ಚಿತ್ರ ರಿಲೀಸ್ ಆಗಲಿದ್ದು, ಮುಂದಿನ ತಿಂಗಳು ಟೀಸರ್ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net