

‘777 ಚಾರ್ಲಿ’ ಚಿತ್ರತಂಡದವರು ಒಂದೊಳ್ಳೆಯ ಕೆಲಸ ಮಾಡಿದ್ದಾರೆ. ಚಿತ್ರದ ಮೂಲಕ ಬೀದಿ ನಾಯಿಗಳನ್ನು ದತ್ತುಪಡೆಯಿರಿ ಎಂಬ ಸಂದೇಶ ಸಾರಿದ ಚಿತ್ರತಂಡದವರು ಇದೀಗ ಐದು ದೇಸಿ ತಳಿ ನಾಯಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಿರ್ದೇಶಕ ಕಿರಣ್ ರಾಜ್, ‘ನಾನು, ರಕ್ಷಿತ್, ರಾಜ್ ಸೇರಿದಂತೆ ನಮ್ಮ ತಂಡದ ಐವರು, ಐದು ದೇಸಿ ತಳಿ ನಾಯಿಗಳನ್ನೇ ದತ್ತು ಪಡೆದು ಸಾಕುತ್ತಿದ್ದೇವೆ. ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಸಾಕಿರುವುದು ದೇಸಿ ನಾಯಿಗಳನ್ನೇ. ಚಾರ್ಲಿ ಒಂದೇ ನನ್ನ ಬಳಿ ಇರುವ ಬೇರೆ ತಳಿಯ ನಾಯಿ. ಸಿನಿಮಾ ಮಾತ್ರವಲ್ಲ ನಮ್ಮ ನೈಜ ಜೀವನದಲ್ಲೂ ಈ ಸಂದೇಶವನ್ನು ಪಾಲಿಸುತ್ತಿದ್ದೇವೆ’ ಎನ್ನುತ್ತಾರೆ.
ಇನ್ನು, ‘777 ಚಾರ್ಲಿ’ ಬಿಡುಗಡೆಯ ನಂತರ ಶ್ವಾನಗಳನ್ನು ದತ್ತು ಪಡೆಯುವುದು ಹೆಚ್ಚಾಗಿದೆ. ಅದರಲ್ಲೂ ಲ್ಯಾಬ್ರಡಾರ್ ತಳಿಯ ಶ್ವಾನಗಳ ಖರೀದಿಯೂ ಜಾಸ್ತಿಯಾಗಿದೆ. ಮೊದಲು 9 ಸಾವಿರ ರೂಪಾಯಿಯಿದ್ದ ಲ್ಯಾಬ್ರಡಾರ್ ಮರಿಗಳ ಬೆಲೆ ಈಗ 13 ಸಾವಿರ ರೂಪಾಯಿ ಮುಟ್ಟಿದೆಯಂತೆ. ಈ ಕುರಿತು ಮಾತನಾಡಿದ ನಿರ್ದೇಶಕ ಕಿರಣ್ ರಾಜ್, ‘ಒಂದು ನಾಯಿಯಿಂದ ಧರ್ಮ ಹೇಗೆ ಬದಲಾಗುತ್ತಾನೆ? ರಕ್ಷಣಾ ಕೇಂದ್ರ ಪ್ರಾರಂಭಿಸಿ, ಬೀದಿ ನಾಯಿಗಳಿಗೆ ಆಸರೆಯಾಗುತ್ತಾನೆ? ಎಂದು ಹೇಳುವುದು ನಮ್ಮ ಉದ್ದೇಶವಾಗಿತ್ತು.
ಆದರೆ, ಒಬ್ಬೊಬ್ಬರು ಚಿತ್ರವನ್ನು ಒಂದೊಂದು ರೀತಿಯಲ್ಲಿ ಸ್ವೀಕರಿಸಿದ್ದಾರೆ ಅಂತನ್ನಿಸುತ್ತೆ. ಈ ಪ್ರೀತಿ ಕೇವಲ ಲ್ಯಾಬ್ರಡಾರ್ ಮಾತ್ರ ನೀಡುತ್ತೆ ಅಂತ ಕೆಲವರು ಅಂದುಕೊಂಡಿರಬಹುದು. ಯಾವುದೇ ನಾಯಿಯಿರಲಿ ಅದನ್ನು ದತ್ತು ಪಡೆಯಬೇಕು ಎಂಬುದು ನಮ್ಮ ಉದ್ದೇಶ. ನಾವು ಇಲ್ಲಿ ಯಾವುದೇ ಬ್ರೀಡ್ ಶ್ವಾನಗಳನ್ನು ಪ್ರಮೋಟ್ ಮಾಡುತ್ತಿಲ್ಲ’ ಎನ್ನುತ್ತಾರೆ.