ಚಾರ್ಲಿಯ ಕನವರಿಕೆಯಲ್ಲಿ ಸಂಗೀತಾ

Charlie
Published on

|ಹರ್ಷವರ್ಧನ್ ಬ್ಯಾಡನೂರು

ಕಳೆದ ಶುಕ್ರವಾರ (ಜೂನ್ 10) ತೆರೆಗೆ ಬಂದ ‘777 ಚಾರ್ಲಿ’ ಚಿತ್ರ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರನ್ನು ಥಿಯೇಟರ್​ಗಳತ್ತ ಸೆಳೆಯುತ್ತಿದೆ. ಮೊದಲ ವಾರಾಂತ್ಯಕ್ಕೆ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ನಿರೀಕ್ಷೆಯಿದೆ. ಚಿತ್ರದ ಯಶಸ್ಸಿನ ಅಲೆಯಲ್ಲಿ ಇಡೀ ಚಿತ್ರತಂಡ ತೇಲುತ್ತಿದೆ. ನಾಯಕಿ ಸಂಗೀತಾ ಶೃಂಗೇರಿ ಕೂಡ ‘777 ಚಾರ್ಲಿ’ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.

‘ವಿಜಯವಾಣಿ’ ಜತೆ ತಮ್ಮ ಸಂತಸ ಹಂಚಿಕೊಂಡ ಸಂಗೀತಾ, ‘ಫೇಸ್​ಬುಕ್​ನಲ್ಲಿ ‘777 ಚಾರ್ಲಿ’ ಚಿತ್ರದ ಆಡಿಷನ್ ಕುರಿತ ಪೋಸ್ಟ್ ನೋಡಿದ್ದೆ. ಅದರಲ್ಲಿ ರಕ್ಷಿತ್ ಶೆಟ್ಟಿ ಮತ್ತು ಪುಟಾಣಿ ನಾಯಿಯ ಫೋಟೋ ಹಾಕಲಾಗಿತ್ತು. ಆಯ್ಕೆಯಾದ ಬಳಿಕ ವರ್ಕ್​ಶಾಪ್ ಕೂಡ ಮಾಡಿದ್ದೆವು. ಚಿತ್ರೀಕರಣದ ಸಮಯದಲ್ಲೇ ನಾವು ಗೆಲ್ಲುತ್ತೇವೆ ಅಂತ ಗೊತ್ತಾಗಿತ್ತು. ಈ ಗೆಲುವನ್ನು ಮೊದಲೇ ನಿರೀಕ್ಷೆ ಮಾಡಿದ್ದೆವು. ಅದಕ್ಕೆ ಸರಿಯಾಗಿ, ಜನ ಬಂದು ಸಿನಿಮಾ ನೋಡಿ ತಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಹೇಳುತ್ತಿದ್ದಾರೆ. ಬಾಯ್ಮಾತಿನ ಪ್ರಚಾರದ ಮೂಲಕವೇ ಜನ ಬರುತ್ತಿದ್ದಾರೆ. ಇದುವರೆಗೂ ಹೀರೋ-ಹೀರೋಯಿನ್ ಪ್ರೇಮಕಥೆಗಳು ಬಂದಿದ್ದವು. ಆದರೆ, ಇದು ನಾಯಿಯ ಜತೆಗಿನ ಬಾಂಧವ್ಯದ ಸ್ಟೋರಿ. ನಮ್ಮ ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಅದಕ್ಕೆ ನಮ್ಮ ಸಿನಿಮಾ ಗೆಲುವೇ ಸಾಕ್ಷಿ ಎಂದು ಹೇಳಲು ಹೆಮ್ಮೆಯಿದೆ’ ಎನ್ನುತ್ತಾರೆ.

ಹಿಂದೊಮ್ಮೆ, ಸಂಗೀತಾ ಅವರನ್ನು ಜನ ‘ಹರಹರ ಮಹಾದೇವ್’ ಧಾರಾವಾಹಿಯ ಸತಿ, ಪಾರ್ವತಿಯಾಗಿ ಗುರುತಿಸುತ್ತಿದ್ದರಂತೆ. ಈಗ ‘777 ಚಾರ್ಲಿ’ ಬಳಿಕ ಎಲ್ಲರೂ ದೇವಿಕಾ ಎನ್ನುತ್ತಿದ್ದಾರೆ ಎಂದು ನಗುತ್ತಾರೆ ಸಂಗೀತಾ. ಇನ್ನು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಚಾರ್ಲಿ ಜತೆ ನಟಿಸುವಾಗ ತಾವು ಎದುರಿಸಿದ ಸವಾಲುಗಳ ಕುರಿತು ಹೇಳಿಕೊಳ್ಳುವ ಸಂಗೀತಾ, ‘ಪ್ರಾಣಿಗಳ ಜತೆ ಚಿತ್ರೀಕರಣ ಮಾಡುವುದು ಈಜಿ ಅಲ್ಲ. ಚಾರ್ಲಿ ಜತೆ ನಟಿಸುವಾಗ ಪ್ರತಿ ಟೇಕ್ ಕೂಡ ಬಹಳ ಸವಾಲಾಗಿತ್ತು. ಪ್ರತಿ ಶಾಟ್ ಕೂಡ 20, 30 ಟೇಕ್ಸ್ ಆಗುತ್ತಿತ್ತು. ಏಕೆಂದರೆ, ಚಾರ್ಲಿಯನ್ನು ನಿಯಂತ್ರಿಸುವುದು ಅಷ್ಟು ಕಷ್ಟ ಇತ್ತು. ಅದರ ತರಬೇತುದಾರ ಕ್ಯಾಮರಾಗೆ ಕಾಣದಂತೆ ಅದರ ಹತ್ತಿರವಿದ್ದು, ಅದಕ್ಕೆ ಗೈಡ್ ಮಾಡುತ್ತಿದ್ದರು. ಹೀಗಾಗಿ ಒಮ್ಮೊಮ್ಮೆ ನಮಗೂ ಗೊಂದಲವಾಗುತ್ತಿತ್ತು’ ಎಂದು ಅನುಭವ ಹಂಚಿಕೊಳ್ಳುತ್ತಾರೆ.

ಸಂಗೀತಾ ಖುದ್ದು ಶ್ವಾನಪ್ರಿಯರಂತೆ. ‘ನಾನು ಚಿಕ್ಕ ವಯಸ್ಸಿನಿಂದಲೂ ಮೂರು ನಾಯಿಗಳನ್ನು ಸಾಕಿದ್ದೇನೆ. ಹೀಗಾಗಿಯೇ ಕೆಲವೊಮ್ಮೆ ಚಾರ್ಲಿ ಜತೆ ಶೂಟ್ ಮಾಡುವಾಗ ಎಮೋಷನಲಿ ಕನೆಕ್ಸ್ ಆಗುತ್ತಿದ್ದೆ’ ಎಂದು ಹೇಳಿಕೊಳ್ಳುತ್ತಾರೆ.

ಸಂತೋಷದ ಮಧ್ಯೆ ಬೇಸರ:

‘777 ಚಾರ್ಲಿ’ ಮುಗಿಯಿತು, ಮುಂದೇನು? ಎಂಬ ಪ್ರಶ್ನೆಗೆ ಉತ್ತರಿಸುವ ಸಂಗೀತಾ, ‘ಎರಡು ಚಿತ್ರಗಳು ಬಿಡುಗಡೆಗೆ ತಯಾರಿ ನಡೆಸಿವೆ. ‘ಡಾರ್ಲಿಂಗ್’ ಕೃಷ್ಣ, ಪ್ರಭುದೇವ ಹಾಗೂ ಪುನೀತ್ ರಾಜ್​ಕುಮಾರ್ ಸರ್ ನಟಿಸಿರುವ ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ನಟಿಸಿದ್ದೇನೆ. ಆದರೆ, ನನ್ನ ಹಾಗೂ ಅಪು್ಪ ಸರ್ ನಡುವೆ ಒಂದು ದೃಶ್ಯವೂ ಇಲ್ಲ ಎಂಬುದೇ ಬೇಸರ. ಚಿತ್ರೀಕರಣದ ಸಮಯದಲ್ಲೂ ಒಮ್ಮೆಯೂ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮತ್ತೊಂದು ಚಿತ್ರ ‘ಮಾರಿಗೋಲ್ಡ್’. ಈ ಚಿತ್ರದಲ್ಲಿ ದಿಗಂತ್ ನಾಯಕ. ಆದರೆ, ನನ್ನ ಪಾತ್ರದ ಬಗ್ಗೆ ಏನೂ ರಿವೀಲ್ ಮಾಡಬೇಡಿ ಎಂದಿದ್ದಾರೆ ನಿರ್ದೇಶಕರು. ಹೀಗಾಗಿ ಈಗಲೇ ಏನೂ ಹೇಳಲಾಗುವುದಿಲ್ಲ’ ಎಂದು ತಮ್ಮ ಮುಂದಿನ ಚಿತ್ರಗಳ ಕುರಿತು ಮಾಹಿತಿ ನೀಡುತ್ತಾರೆ ಸಂಗೀತಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net