ಚಾರ್ಲಿಗೆ 25: ಉದ್ದೇಶಕ್ಕೆ 5%, ಚಿತ್ರತಂಡಕ್ಕೆ 10%..

Charlie
Published on

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಮತ್ತು ನಿರ್ವಣದ ‘777 ಚಾರ್ಲಿ’ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಮತ್ತು ಯಶಸ್ಸು ನೋಡಿ ರಕ್ಷಿತ್ ಖುಷಿಯಾಗಿದ್ದಾರೆ. ಆ ಖುಷಿಯಲ್ಲಿ ಅವರು ಎರಡು ಮಹತ್ವದ ತೀರ್ವನಗಳನ್ನು ತೆಗೆದುಕೊಂಡಿದ್ದಾರೆ. ಪ್ರಮುಖವಾಗಿ, ಇದುವರೆಗೂ ಬಂದಿರುವ ಲಾಭದಲ್ಲಿ ಶೇ. 5ರಷ್ಟನ್ನು ಅವರು ಚಾರ್ಲಿಗಾಗಿ ಇಟ್ಟುಕೊಂಡಿದ್ದಾರೆ. ಇನ್ನು, ಶೇ. 10ರಷ್ಟನ್ನು ಅವರು ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಕೊಡುವುದಕ್ಕೆ ತೀರ್ಮಾನಿಸಿದ್ದಾರೆ.

ಈ ಕುರಿತು ಮಾತನಾಡಿರುವ ರಕ್ಷಿತ್, ‘ಚಿತ್ರವು 26 ದಿನಗಳಲ್ಲಿ 150 ಕೋಟಿ ರೂ. ಗ್ರಾಸ್ ಗಳಿಕೆ ಕಂಡಿದೆ. ಅದರಲ್ಲಿ ಕಲೆಕ್ಷನ್ ಮತ್ತು ಎಲ್ಲ ಹಕ್ಕುಗಳಿಂದ ಸೇರಿ ಒಟ್ಟಾರೆ 90ರಿಂದ 100 ಕೋಟಿ ರೂ.ವರೆಗೂ ಲಾಭ ಬಂದಿದೆ. ಅದರಲ್ಲಿ ಶೇ. 5ರಷ್ಟು ಚಾರ್ಲಿಗೆ ಸಲ್ಲುವಂತದ್ದು. ಅವಳ ಹೆಸರಿನಲ್ಲಿ ಭಾರತದಾದ್ಯಂತ ಶ್ವಾನಗಳ ಇನ್​ಬ್ರೀಡಿಂಗ್ ವಿರುದ್ಧ ಹೋರಾಡುತ್ತಿರುವ, ಅದನ್ನು ದತ್ತು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎನ್​ಜಿಓಗಳಿಗೆ ಸಹಾಯ ಮಾಡುವ ಕುರಿತು ಯೋಚನೆ ಮಾಡಿದ್ದೇವೆ. ಶೇ.5ರಷ್ಟು ಎಂದರೆ ಐದು ಕೋಟಿ ರೂ.ಗಳಷ್ಟಾಗುತ್ತದೆ’ ಎನ್ನುತ್ತಾರೆ ರಕ್ಷಿತ್.

ಜತೆಗೆ ಚಿತ್ರಕ್ಕಾಗಿ ದುಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಒಟ್ಟಾರೆ ಲಾಭದಲ್ಲಿ (ಡಿಜಿಟಲ್, ಸ್ಯಾಟಲೈಟ್ ಹಕ್ಕುಗಳು ಮತ್ತು ಕಲೆಕ್ಷನ್ ಸೇರಿಸಿ) ಶೇ. 10ರಷ್ಟು ಹಂಚಿಕೆ ಮಾಡಲಿದ್ದೇವೆ. ಆ ಮೊತ್ತವೇ ಏಳರಿಂದ 10 ಕೋಟಿ ರೂ.ಗಳಷ್ಟಾಗುತ್ತದೆ. ಈ ಪಟ್ಟಿಯಲ್ಲಿ ನಾನಿಲ್ಲ. ನನ್ನನ್ನು ಬಿಟ್ಟು ಮಿಕ್ಕವರಿಗೆ ಬಂದ ಲಾಭದಲ್ಲಿ ಹಂಚಲಿದ್ದೇವೆ’ ಎನ್ನುತ್ತಾರೆ ರಕ್ಷಿತ್. ವ್ಯಾಪಾರದ ದೃಷ್ಟಿಯಿಂದ ರಕ್ಷಿತ್ ಈ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಕಲಿತಿದ್ದಾರಂತೆ. ‘‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಸ್ಯಾಟಲೈಟ್ ಮತ್ತು ಓಟಿಟಿ ಹಕ್ಕುಗಳನ್ನು ಬಹಳ ಬೇಗ ಕೊಡಲಾಯಿತು. ನನ್ನ ಮುಂದಿನ ಚಿತ್ರ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಹಕ್ಕುಗಳನ್ನು ಸಹ ಕೊಡಲಾಗಿದೆ. ಅದರ ಮೂರು ಪಟ್ಟು ಹಣವನ್ನು ನಾನು ‘777 ಚಾರ್ಲಿ’ಗೆ ಪಡೆದಿದ್ದೇನೆ. ನಾನು ಈ ಚಿತ್ರದ ಹಕ್ಕುಗಳನ್ನು ಮೊದಲೇ ಕೊಡಲಿಲ್ಲ. ಕೊನೆಯ ಹಂತದಲ್ಲಿ ಮಾರಾಟ ಮಾಡಿದ್ದರಿಂದ ಒಳ್ಳೆಯ ಮೊತ್ತ ಸಿಕ್ಕಿತು. ಅಲ್ಲಿ ಮಾಡಿದ ತಪ್ಪನ್ನು ನಾನು ಇಲ್ಲಿ ಸರಿ ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ.

ಬ್ರಾಂಡ್ ಅಲ್ಲ, ಬಾಂಡಿಂಗ್ ಮುಖ್ಯ: ‘777 ಚಾರ್ಲಿ’ ಬಿಡುಗಡೆಯ ನಂತರ ಲಾಬ್ರಡಾರ್ ತಳಿಗಳಿಗೆ ಬೇಡಿಕೆ ಹೆಚ್ಚಿರುವುದರ ಕುರಿತು ನಿರ್ದೇಶಕ ಕಿರಣ್ ರಾಜ್​ಗೆ ಸಣ್ಣ ಬೇಸರವಿದ್ದಂತಿದೆ. ‘ಸಿನಿಮಾ ಮೂಲಕ ನಮ್ ಆಶಯ ಹೇಳಿದ್ದೇವೆ. ಚಿತ್ರದ ಕೊನೆಯಲ್ಲಿ ಒಂದು ಸಣ್ಣ ವಿಡಿಯೋ ಸಹ ತೋರಿಸಿದ್ದೇವೆ. ಆದರೂ ಲಾಬ್ರಡಾರ್ ತಳಿಯ ಶ್ವಾನಗಳಿಗೆ ಬೇಡಿಕೆ ಹೆಚ್ಚಿರುವುದರ ಬಗ್ಗೆ ವಿಷಯ ಕೇಳುತ್ತಲೇ ಇದ್ದೇವೆ. ಯಾವುದೇ ಶ್ವಾನವಾದರೂ ಒಂದೇ. ಅದೆಷ್ಟು ಪ್ರೀತಿ ತೋರಿಸುತ್ತದೆ ಎನ್ನುವುದು ಮುಖ್ಯವೇ ಹೊರತು ಅದರ ಬ್ರೀಡ್ ಅಲ್ಲ ಎಂಬುದೇ ನಮ್ಮ ಆಶಯ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net