ಅಪ್ಪ ಹುಷಾರಾಗುತ್ತಿದ್ದಾರೆ ... ಒಳ್ಳೆಯ ಬೆಳವಣಿಗೆ ಎಂದ ಎಸ್.ಪಿ.ಬಿ ಪುತ್ರ

S P Balasubramaniam
Published on

ಹಿರಿಯ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕರೊನಾದಿಂದ ಆಸ್ಪತ್ರೆಗೆ ದಾಖಲಾಗಿ 20 ದಿನಗಳಾಗಿವೆ. ಈಗ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆಯಾಗುತ್ತಿದ್ದು, ಇದೊಂದು ಒಳ್ಳೆಯ ಬೆಳವಣಿಗೆ ಎಂದು ಅವರ ಮಗ ಎಸ್.ಪಿ. ಚರಣ್ ಹೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಸಾಷಕ್ಟು ಬಿಗಡಾಯಿಸಿತ್ತು. ಅವರು ಶೀಘ್ರ ಗುಣಮುಖರಾಗಿ ಹೊರಬರಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದರು. ಒಂದು ಕಡೆ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ ಎಂದು ಸುದ್ದಿಯಾದರೆ, ಇನ್ನೊಂದು ಕಡೆ ಅವರ ಮಗ ಚರಣ್ ಮಾತ್ರ ಅಪ್ಪನ ಆರೋಗ್ಯದಲ್ಲಿ ಇನ್ನೂ ಯಾವ ಸುಧಾರಣೆಯಾಗಿಲ್ಲ ಎಂದು ಹೇಳುತ್ತಿದ್ದರು. ಇದರಿಂದ ಎಸ್.ಪಿ.ಬಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಇನ್ನಷ್ಟು ನೋವಾಗುತಿತ್ತು.

ಪ್ರತಿದಿನ ಎಸ್.ಪಿ.ಬಿ ಅವರ ಆರೋಗ್ಯದ ಅಪ್‍ಡೇಟ್ ಕೊಡುವಂತೆ ಶುಕ್ರವಾರ ಹೊಸ ಅಪ್‍ಡೇಟ್ ಕೊಟ್ಟಿರುವ ಚರಣ್, ತಮ್ಮ ತಂದೆ ಹುಷಾರಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ಅವರು, `ಅಪ್ಪನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆ. ಇಂದು ಅಪ್ಪನಿಗೆ ಫಿಸಿಯೋಥೆರಪಿ ಸಹ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಸುದ್ದಿಗಳು ಬರುತ್ತವೆ ಎಂಬ ನಿರೀಕ್ಷೆ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೋವಿಡ್ ಸಿಂಪ್ಟಮ್ ಇದೆ ಎಂಬ ಕಾರಣಕ್ಕೆ ಆಗಸ್ಟ್ 5ಕ್ಕೆ ಚೆನ್ನೈನ ಎಂ.ಜಿ.ಎಂ ಹೆಲ್ತ್‍ಕೇರ್ ಸೆಂಟರ್‍ಗೆ ದಾಖಲಿಸಲಾಗಿತ್ತು. ಒಂದು ವಿಡಿಯೋ ಹಂಚಿಕೊಂಡಿದ್ದ ಬಾಲಸುಬ್ರಹ್ಮಣ್ಯಂ ಅವರು, ತಾವು ಹುಷಾರಾಗಿರುವುದಷ್ಟೇ ಅಲ್ಲ, ಎರಡು ದಿನಗಳಲ್ಲಿ ವಾಪಸ್ಸು ಬರುವುದಾಗಿ ಹೇಳಿದ್ದರು. ಆದರೆ, ಪಾಸಿಟಿವ್ ಉಂಟಾದ ಕಾರಣ ಅವರ ಆರೋಗ್ಯ ಇನ್ನಷ್ಟು ಬಿಗಡಾಯಿಸಿತು. ಇದೀಗ ಅವರ ಅರೋಗ್ಯ ಸಹಜ ಸ್ಥಿತಿಗೆ ಮರಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net