ಹಿರಿಯ ನಟ ಚರಣ್​ರಾಜ್ ಪುತ್ರ ತೇಜ್ ಈಗ ಬಾಹುಬಲಿ

CHARAN
Published on

ಬೆಂಗಳೂರು:  ಕನ್ನಡ ಚಿತ್ರರಂಗದ ಹಿರಿಯ ನಟ ಚರಣ್​ರಾಜ್ ಪುತ್ರ ತೇಜ್ ಈಗ ಬಾಹುಬಲಿ ಆಗಿದ್ದಾರೆ. ಅರ್ಥಾತ್, ‘ಶ್ರೀಭರತ ಬಾಹುಬಲಿ’ ಚಿತ್ರದಲ್ಲಿ ಬಾಹುಬಲಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೆ, ಭರತ- ಬಾಹುಬಲಿ ಆಗಿ ಮಂಜು ಮಾಂಡವ್ಯ-ಚಿಕ್ಕಣ್ಣ ನಟಿಸಿರುವಾಗ ಇದು ಹೇಗೆ ಸಾಧ್ಯ? ಎಂದು ಅಚ್ಚರಿ ಪಡಬೇಕಾಗಿಲ್ಲ.

ಏಕೆಂದರೆ ಈ ಚಿತ್ರದಲ್ಲಿ ಭರತ-ಬಾಹುಬಲಿಯ ಪೌರಾಣಿಕ ಪಾತ್ರಗಳೂ ಇವೆ. ಅದರಲ್ಲಿ ಪುರಾಣದ ಬಾಹುಬಲಿ ಪಾತ್ರವನ್ನು ತೇಜ್ ಮಾಡಿದ್ದಾರೆ. ‘ಈ ಪಾತ್ರಕ್ಕೆ ಮೊದಲು ಉಪೇಂದ್ರ ಅವರಲ್ಲಿ ಮಾತನಾಡಿದ್ದೆ. ಆದರೆ ಬಳಿಕ ಚುನಾವಣೆ ಬಂದಿದ್ದರಿಂದ ಬೇರೆಯವರಿಂದ ಮಾಡಿಸಲು ಹೇಳಿದರು. ನಂತರ ಚರಣ್​ರಾಜ್ ಸಿಕ್ಕಾಗ ಪುತ್ರನ ಫೋಟೋ ತೋರಿಸಿದರು. ಆಗ ಈ ಪಾತ್ರಕ್ಕೆ ತೇಜ್ ಸರಿಹೊಂದುತ್ತಾರೆ ಎನಿಸಿ ಆಯ್ಕೆ ಮಾಡಿದೆ’ ಎಂದರು ನಿರ್ದೇಶಕ ಮಂಜು ಮಾಂಡವ್ಯ.

‘ಹತ್ತು ನಿಮಿಷಗಳ ಪಾತ್ರವಾದರೂ ತುಂಬ ಪ್ರಮುಖವಾದದ್ದು. ತೇಜ್ ಇಲ್ಲಿ ಬಾಹುಬಲಿ ಆಗಿ ಮಲ್ಲಯುದ್ಧ ಮಾಡಿದ್ದಾರೆ. ಈ ಎಪಿಸೋಡ್​ಗೆ 90 ಲಕ್ಷ ರೂ. ವೆಚ್ಚವಾಗಿದೆ’ ಎಂದರು ಮಂಜು. ‘ತೇಜ್ ಹುಟ್ಟಿದ್ದು ಕರ್ನಾಟಕದಲ್ಲಾದರೂ ಬೆಳೆದಿದ್ದೆಲ್ಲ ತಮಿಳುನಾಡಿನಲ್ಲಿ, ಹೀಗಾಗಿ ಮೊದಲ ಸಿನಿಮಾ ತಮಿಳಿನದ್ದಾಗಿತ್ತು. ಈಗ ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿದ್ದಾನೆ. ಹೀರೋ ಪಾತ್ರಕ್ಕೆ ಕಾಯದೆ ಸಿಕ್ಕ ಉತ್ತಮ ಪಾತ್ರಗಳನ್ನು ಮಾಡು ಎಂದಿದ್ದೆ. ಕನ್ನಡಿಗರಿಂದ ನನಗೆ ಸಿಕ್ಕ ಪ್ರೋತ್ಸಾಹ ಅವನಿಗೂ ಸಿಗಲಿ’ ಎಂದು ಚರಣ್ ರಾಜ್ ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net