ಮಲಯಾಳಂನಲ್ಲೂ ರಿಲೀಸ್​ ಆಗಲಿದೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ; ಟಿ-ಸಿರೀಸ್​ ಪಾಲಾಯ್ತು ಆಡಿಯೋ ರೈಟ್ಸ್​

WhatsApp Image 2024-04-15 at 5.34.51 PM
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿಬಂದಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರದ ಕಡೆಯಿಂದ ಮತ್ತೊಂದು ಸಂಗತಿಯೀಗ ಜಾಹೀರಾಗಿದೆ. ಇದರನ್ವಯ ಹೇಳುವುದಾದರೆ, ಸಿನಿಮಾ ಮಲಯಾಳಂನಲ್ಲೂ ಬಿಡುಗಡೆಯಾಗಲಿದ್ದು, ಇತ್ತೀಚೆಗಷ್ಟೆ ಚಿತ್ರದ ವಿತರಣೆಯ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಇದರ ಜೊತೆಜೊತೆಗೇ ಈ ಸಿನಿಮಾದ ಆಡಿಯೋ ರೈಟ್ಸ್ಅನ್ನು ಟಿ-ಸಿರೀಸ್ ದೊಡ್ಡ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ.

ಈ ವಿಚಾರವನ್ನು ಖುದ್ದು ಚಿತ್ರತಂಡವೀಗ ಹಂಚಿಕೊಂಡಿದೆ. ಚಂದನ್ ಶೆಟ್ಟಿ ನಾಯಕನಾಗಿರುವ ಕಾರಣ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಹಾಡುಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆಯಿತ್ತು. ಅದಕ್ಕೆ ತಕ್ಕಂತೆ ಚಿತ್ರತಂಡ ಹಾಡುಗಳನ್ನು ರೂಪಿಸಿದೆಯಂತೆ. ವೀಡಿಯೋ ಸಾಂಗುಗಳನ್ನೂ ನೋಡಿದ ಬಳಿಕ ಅತ್ಯಂತ ಖುಷಿಯಿಂದ ಟಿ ಸೀರೀಸ್ ಚಿತ್ರದ ಹಾಡುಗಳ ಹಕ್ಕನ್ನು ಖರೀದಿಸಿದೆ. ಈ ಮಾತುಕತೆಗಳೆಲ್ಲವೂ ಮುಂಬೈನಲ್ಲಿರುವ ಟಿಸಿರೀಸ್ ಸಂಸ್ಥೆಯ ಮುಖ್ಯ ಕಚೇರಿಯಲ್ಲಿಯೇ ನೆರವೇರಿದೆ. ಉಳಿದಂತೆ ಮಲಯಾಳಂ ಭಾಷೆಯಲ್ಲಿನ ಥಿಯೇಟ್ರಿಕಲ್ ರೈಟ್ಸ್ ವಿಚಾರದಲ್ಲೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ದಾಖಲೆ ಬರೆದಿದೆ. ಮಲೆಯಾಳಂ ಚಿತ್ರರಂಗದಲ್ಲಿ ಇದುವರೆಗೂ ತೆಲುಗು ಸಿನಿಮಾಗಳಿಗೆ ಬೇಡಿಕೆ ಇತ್ತು. ಆ ಜಾಗವನ್ನೀಗ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಮೂಲಕ ಕನ್ನಡ ಚಿತ್ರರಂಗವೂ ಆವರಿಸಿಕೊಂಡಂತಾಗಿದೆ. ಯಾಕೆಂದರೆ, ಮಲಯಾಳಂನ ಪ್ರಸಿದ್ಧ ವಿತರಕರೊಬ್ಬರು ಈ ಚಿತ್ರವನ್ನು ವೀಕ್ಷಿಸಿ, ದೊಡ್ಡ ಮೊತ್ತಕ್ಕೆ ಥಿಯೇಟ್ರಿಕಲ್ ರೈಟ್ಸ್ ಪಡೆದುಕೊಂಡಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಜೊತೆಗೇ ಕೇರಳದಲ್ಲಿಯೂ ಬಿಡುಗಡೆಗೊಳ್ಳಲಿದೆ.


ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಬಿಜಿಯಾಗಿದೆ. ಚಿತ್ರಕ್ಕೆ ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net