

ಬೆಂಗಳೂರು: ಬಿಗ್ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಚೆನ್ನಾಗಿ ಮೂಡಿಬರುತ್ತಿದೆ. ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಪ್ರಿಯಾಂಕಾ ತಿಮ್ಮೇಶ್ ನಿನ್ನೆ ಮನೆಯಿಂದ ಹೊರಬಂದಿದ್ದಾರೆ. ಮನೆಯೊಳಗೆ ಆಕೆಯ ದುಶ್ಮನ್ ಆಗಿದ್ದ ಚಂದ್ರಚೂಡ್ ಮಾಡಿದ ಒಂದು ಕೆಲಸಕ್ಕೆ ಇದೀಗ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಬಿಗ್ಬಾಸ್ ಮೊದಲನೇ ಇನ್ನಿಂಗ್ಸ್ನಲ್ಲಿ ಚಕ್ರವರ್ತಿ ಮತ್ತು ಪ್ರಿಯಾಂಕಾ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು. ಮನೆಯಿಂದ ಹೊರಗೆ ಬಂದಾಗಲೂ ಇಬ್ಬರು ಚೆನ್ನಾಗಿಯೇ ಇದ್ದರು. ಆದರೆ ಮತ್ತೆ ಮನೆಯೊಳಗೆ ಹೋದ ಪ್ರಿಯಾಂಕಾ, ಶಮಂತ್ ಜತೆ ಚೆನ್ನಾಗಿದ್ದಾರೆನ್ನುವುದು ಚಕ್ರವರ್ತಿಗೆ ಸರಿ ಕಂಡಿರಲಿಲ್ಲ. ಆಕೆ ನಾಟಕ ಮಾಡುತ್ತಿದ್ದಾರೆ ಎಂದು ಪದೇಪದೆ ಹೇಳುತ್ತಿದ್ದರು. ಈ ವಿಚಾರದಲ್ಲಿ ಅವರಿಬ್ಬರ ನಡುವೆ ಜಗಳವೂ ಆಗಿದೆ. ಸುದೀಪ್ ಎದುರೂ ವಿಷಯ ಚರ್ಚೆಯಾಗಿದ್ದು, ರಾಜಿ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ.
ನಿನ್ನೆ ಪ್ರಿಯಾಂಕಾ ಎಲಿಮಿನೇಟ್ ಆಗಿ ಮನೆಯಿಂದ ಹೊರಬರುವ ವೇಳೆ ಆಕೆಗೆ ವಿಶೇಷ ಅಧಿಕಾರವೊಂದನ್ನು ನೀಡಲಾಯಿತು. ಮುಂದಿನ ವಾರಕ್ಕೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಿ ಎಂದು ಹೇಳಲಾಯಿತು. ಆಗ ಪ್ರಿಯಾಂಕಾ, ಚಕ್ರವರ್ತಿ ಹೆಸರನ್ನು ತೆಗೆದುಕೊಂಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಚಕ್ರವರ್ತಿ, ಪ್ರಿಯಾಂಕಾಗೆ ಅಶ್ಲೀಲ ಸನ್ನೆ ಮಾಡಿದ್ದಾರೆ. ಬಿಗ್ಬಾಸ್ನ ಇತಿಹಾಸದಲ್ಲಿ ಇದೇ ಮೊದಲನೇ ಬಾರಿಗೆ ಈ ರೀತಿ ಸನ್ನೆ ಮಾಡಲಾಗಿದೆ.
ಚಕ್ರವರ್ತಿ ಮನೆಗೆ ಬಂದಾಗಿನಿಂದಲೂ ಪ್ರತಿ ವಾರ ಸುದೀಪ್ ಬಾಯಿಯಲ್ಲಿ ಏನಾದರೂ ಒಂದು ಹೇಳಿಸಿಕೊಳ್ಳುತ್ತಲೇ ಇದ್ದಾರೆ. ಕಳೆದ ವಾರ ಪ್ರಶಾಂತ್ಗೆ ಕೆಟ್ಟ ಪದಗಳಿಂದ ಬೈದಿದ್ದು, ಬೀಪ್ ಸೌಂಡ್ ಹಾಕುವಂತಾಗಿತ್ತು. ಈ ಬಗ್ಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ತಿಳಿದುಕೊಂಡಿರುವ ನೀವು ಹೀಗೆ ಮಾಡಿರುವುದು ದೊಡ್ಡ ತಪ್ಪು ಎಂದು ಅರಿವು ಮಾಡಿಸಿದ್ದರು. ಇನ್ನು ಮುಂದೆ ನಾನು ಪೂರ್ತಿ ಬದಲಾಗುತ್ತೇನೆ. ನೀವೇ ಆಶ್ಚರ್ಯ ಪಡುವಂತೆ ಬದುಕುತ್ತೇನೆ ಎಂದು ಹೇಳಿದ್ದ ಚಕ್ರವರ್ತಿ ಇದೀಗ ಮತ್ತೆ ದೊಡ್ಡದೊಂದು ತಪ್ಪು ಮಾಡಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದೆ. ಬಿಗ್ಬಾಸ್ನ ಗೂಂಡಾ ಎಂದು ಚಕ್ರವರ್ತಿಯನ್ನು ಕರೆಯಲಾಗುತ್ತಿದೆ. ಅವರನ್ನು ಮೊದಲು ಎಲಿಮಿನೇಟ್ ಮಾಡಬೇಕು ಎನ್ನಲಾಗುತ್ತಿದೆ. ಚಕ್ರವರ್ತಿಯ ತಪ್ಪಿಗೆ ಬಿಗ್ಬಾಸ್ ಶಿಕ್ಷೆ ಕೊಡುತ್ತಾರಾ ಎನ್ನುವುದು ಇನ್ನೂ ಪ್ರಶ್ನೆಯಾಗೇ ಉಳಿದಿದೆ. ಅದೇನೇ ಇರಲಿ ಈ ವಾರ ಚಕ್ರವರ್ತಿಗೆ ಕಿಚ್ಚ ಕ್ಲಾಸ್ ತೆಗೆದುಕೊಳ್ಳುವುದಂತೂ ಗ್ಯಾರಂಟಿ ಎನ್ನುತ್ತಿದ್ದಾರೆ ನೆಟ್ಟಿಗರು. (ಏಜೆನ್ಸೀಸ್)