

ಬೆಂಗಳೂರು: ಚಿತ್ರದಿಂದ ಚಿತ್ರಕ್ಕೆ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡವರು ನಟಿ ಚೈತ್ರಾ ಜೆ. ಆಚಾರ್. ಕನ್ನಡದ ‘ಮಹಿರಾ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸರಣಿ ಹಾಗೂ ‘ಟೋಬಿ’ ಹೆಚ್ಚು ಯಶಸ್ಸು ತಂದುಕೊಟ್ಟಿದ್ದವು. ಬಳಿಕ ಚೈತ್ರಾ ಹಿಂದಿರುಗಿ ನೋಡಿದವರಲ್ಲ. ಸದ್ಯ ಅವರು ಕನ್ನಡ, ತಮಿಳಿನ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಈ ಪಟ್ಟಿಯಲ್ಲಿ ರಿಷಿತ್ ಶೆಟ್ಟಿ ನಿರ್ದೇಶನದ ಕನ್ನಡದ ‘ಮಾರ್ನಮಿ’ ಒಂದು. ಇತ್ತೀಚೆಗೆ ಚಿತ್ರದಲ್ಲಿನ ನಟಿಯ ಪಾತ್ರವನ್ನು ವಿಶೇಷ ವಿಡಿಯೋ ಮೂಲಕ ಪರಿಚಯಿಸಲಾಯಿತು. ದೀಕ್ಷಾ ಎಂಬ ಪಾತ್ರದಲ್ಲಿದ್ದು, ಕರಾವಳಿಯ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಬಿಜಿ ಶೆಡ್ಯೂಲ್ ಮಧ್ಯೆಯೂ ‘ವಿಜಯವಾಣಿ’ ಮಾತಿಗೆ ಸಿಕ್ಕು, ಸಿನಿಮಾ ಜರ್ನಿಯ ಕುರಿತು ಮಾಹಿತಿ ಹಂಚಿಕೊಂಡರು. ‘ನನ್ನದು ದೀಕ್ಷಾ ಎಂಬ ಪಾತ್ರ. ಅವಳಿಗೆ ಏನೋ ಬೇಕು ಅದನ್ನು ಮಾಡುವಂತಹ ಹುಡುಗಿ. ಅವಳ ನಿರ್ಧಾರಗಳನ್ನು ಯಾರೂ ಊಹಿಸಲು ಅಸಾಧ್ಯ ಎಂಬುದನ್ನು ಸ್ವಲ್ಪ ಅವಧಿಯಲ್ಲಿ ಟೀಸರ್ ಮೂಲಕ ತೋರಿಸುವ ಪ್ರಯತ್ನ ಚೆನ್ನಾಗಿದೆ. ಚಿತ್ರದ ಶೂಟಿಂಗ್ ಪೂರ್ಣವಾಗಿದ್ದು, ಪ್ರಿ-ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಡಬ್ಬಿಂಗ್ ಪೂರ್ಣಗೊಳಿಸಿದ್ದೇನೆ. ಮೊದಲಿಗೆ ಕಥೆ ಕೇಳುವ ಸಮಯದಲ್ಲಿ ಏನು ಕೇಳಿದ್ದೇನೋ ಹಾಗೆಯೇ ಪಾತ್ರ ಮೂಡಿಬಂದಿದೆ. ನಾಯಕ ರಿತ್ವಿಕ್ ಮಠದ ಕೂಡ ಕಾನ್ಫಿಡೆಂಟ್ ಆಗಿ ಕೆಲಸ ನಿರ್ವಹಿಸಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡರು.
‘ಮಾರ್ನಮಿ’ ಕರಾವಳಿ ಭಾಗದ ಕಥೆ. ಅಲ್ಲಿನ ಸೊಗಡಿನ ಭಾಷೆ ನನಗೆ ಅಷ್ಟು ಪರಿಚಯವಿಲ್ಲ. ಬಹುತೇಕರು ನನ್ನನ್ನು ಕರಾವಳಿ ಭಾಗದವರು ಎಂದುಕೊಂಡಿದ್ದಾರೆ. ಆದರೆ, ಅಲ್ಲ. ಚಿತ್ರಕ್ಕಾಗಿ ಕರಾವಳಿ ಶೈಲಿ ಮಾತನಾಡುವುದೇ ಸವಾಲಾಗಿತ್ತು. ಅದಕ್ಕಾಗಿ ಮಂಗಳೂರಿನಲ್ಲಿ ಮೂರ‌್ನಾಲ್ಕು ದಿನ ವರ್ಕ್‌ಶಾಪ್ ಮಾಡಿ, ಅದೇ ಭಾಗದ ಒಬ್ಬರಿಂದ ನಾನು ಆ ಶೈಲಿ ಭಾಷೆ ಕಲಿತೆ’ ಎಂದು ಮಾಹಿತಿ ನೀಡುತ್ತಾರೆ ಚೈತ್ರಾ.
ಸಿನಿಮಾದಿಂದ ಸಿನಿಮಾಕ್ಕೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಚೈತ್ರಾ ಆಚಾರ್, ಪಾತ್ರದ ಆಯ್ಕೆಯ ಕುರಿತು, ‘ನಾನು ಎಷ್ಟು ವಿಧದಲ್ಲಿ ಹಾರ್ಡ್‌ವರ್ಕ್ ಮಾಡಬಹುದು ಎಂಬ ಆಧಾರದ ಮೇಲೆಯೇ ನಾನು ಪಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ. ಕಥೆ ಕೇಳುವಾಗಲೇ ಪಾತ್ರದ ಬಗ್ಗೆ ಕಲ್ಪಿಸಿಕೊಳ್ಳುತ್ತೇನೆ. ಸರಿ ಎನಿಸಿದರೆ ಮಾತ್ರ ಒಪ್ಪಿಕೊಂಡು ಸಿದ್ಧತೆ ನಡೆಸುತ್ತೇನೆ. ಕೆಲಸ ವಿಚಾರದಲ್ಲಿ ನಾನು ಯಾವುದೇ ಗಡಿ ಹಾಕಿಕೊಂಡಿಲ್ಲ. ಖ್ಯಾತ ನಟರ ಜತೆ ಅಭಿನಯಿಸಿದಂತೆ ಹೊಸಬರ ಜತೆನೂ ತೆರೆಹಂಚಿಕೊಳ್ಳುತ್ತೇನೆ. ನನಗೆ ಕಥೆಯೇ ಮುಖ್ಯ’ ಎನ್ನುತ್ತಾರೆ.
ಚೈತ್ರಾ ಆಚಾರ್ ಅವರು ತಮಿಳಿನಲ್ಲಿ ಸಿದ್ದಾರ್ಥಗೆ ಜೋಡಿಯಾಗಿರುವ ‘3ಬಿಎಚ್‌ಕೆ’ ಇದೇ ಜೂನ್ 4ಕ್ಕೆ ಬಿಡುಗಡೆಯಾಗಲಿದೆ. ಹಾಗೆಯೇ, ‘ಮೈ ಲಾರ್ಡ್’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಕನ್ನಡದಲ್ಲಿ ‘ಉತ್ತರಕಾಂಡ’ದಲ್ಲಿದ್ದು ಈಗಾಗಲೇ ನಾಲ್ಕು ದಿನದ ಶೂಟಿಂಗ್ ಪಾಲ್ಗೊಂಡಿದ್ದಾರೆ. ‘ವೃತ್ತ’, ‘ಮಾರ್ನಮಿ’ ಬಿಡುಗಡೆಗೆ ಸಿದ್ಧವಾಗಿವೆ. ಜತೆಗೆ ಕನ್ನಡದ ಮತ್ತೊಂದು ಹೊಸ ಸಿನಿಮಾಕ್ಕೆ ಸಹಿ ಮಾಡಿದ್ದು, ಅದು ಸದ್ಯದಲ್ಲಿ ಅಧಿಕೃತವಾಗಿ ೋಷಣೆಯಾಗಲಿದೆ.