ಬೊಂಬಾಟ್ ಭೋಜನಕ್ಕೆ ಶತಕದ ಸಂಭ್ರಮ; ವಿಶೇಷ ಸಂಚಿಕೆಯಲ್ಲಿ ಕಿರಣ್​ರಾಜ್ ಜತೆಗೆ ಸಿಹಿಕಹಿ..

Bombat Bhojana
Published on

ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳ ಪೈಕಿ ಹಿರಿಯ ನಟ-ನಿರ್ದೇಶಕ ಸಿಹಿಕಹಿ ಚಂದ್ರು ಅವರು ನಡೆಸಿಕೊಡುವ ‘ಬೊಂಬಾಟ್ ಭೋಜನ’ ಸಹ ಒಂದು. ಸೋಮವಾರದಿಂದ ಶನಿವಾರ ಮಧ್ಯಾಹ್ನ ಹನ್ನೆರಡರಿಂದ ಒಂದು ಗಂಟೆಯವರೆಗೂ ಪ್ರಸಾರವಾಗುವ ಈ ಕಾರ್ಯಕ್ರಮವು ಶತಕದ ಸಂಭ್ರಮದಲ್ಲಿದೆ. ಇಂದಿನ ಕಂತು ನೂರನೇ ಸಂಚಿಕೆಯಾಗಿದ್ದು, ಜನಪ್ರಿಯ ನಟ ಕಿರಣ್ ರಾಜ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

‘ಬೊಂಬಾಟ್ ಭೋಜನ’ ಕಾರ್ಯಕ್ರಮವು ಬರೀ ಅಡುಗೆಗಷ್ಟೇ ಸೀಮಿತವಲ್ಲ. ‘ನಳಪಾಕ’, ಹೊಸ ರುಚಿ ಅನ್ವೇಷಣೆಯ ‘ನಮ್ಮೂರ ಊಟ’, ಡಾ. ಗೌರಿ ಸುಬ್ರಹ್ಮಣ್ಯ ಅವರ ಮನೆ ಮದ್ದು ಮತ್ತು ಆಯುವೇದದ ರೆಸಿಪಿಗಳಿರುವ ‘ಆರೋಗ್ಯ ಆಹಾರ’, ಅಡುಗೆ ಮನೆಯ ಸರಳ ಪರಿಹಾರಗಳ ಸರಣಿ ‘ಟಿಪ್​ಟಿಪ್ ಟಿಪ್ಪಣಿ’, ಚಂದ್ರ ಅವರ ‘ಟೈಂಪಾಸ್ ಹಾಗೂ ‘ಹಳೇ ಟೇಪ್’ ತುಣುಕುಗಳು ಈ ಕಾರ್ಯಕ್ರಮವನ್ನು ಅತ್ಯಂತ ಜನಪ್ರಿಯಗೊಳಿಸಿದೆ. ಇದಲ್ಲದೆ, ಕಿರುತೆರೆ ಮತ್ತು ಚಂದನವನದ ತಾರೆಯರು, ಸೆಲೆಬ್ರಿಟಿ ಗೆಸ್ಟ್ ಗಳಾಗಿ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಈ ವಾರದ ವಿಶೇಷತೆ ಎಂದರೆ, ‘ಬೊಂಬಾಟ್ ಭೊಜನ ಎಕ್ಸ್​ಟ್ರಾ ಸ್ಪೆಷಲ್ ವ್ಯಾಲೆಂಟೈನ್ಸ್ ವೀಕ್. ಪ್ರತಿ ದಿನ ಒಂದು ಗಂಟೆ ಪ್ರಸಾರವಾಗುವ ಈ ಕಾರ್ಯಕ್ರಮ, ಈ ವಾರ ಇನ್ನೂ ಅರ್ಧ ಗಂಟೆ ಹೆಚ್ಚಾಗಿ ಪ್ರಸಾರವಾಗಲಿದ್ದು, ನಿಜಜೀವನದ ದಂಪತಿಗಳು ಅಡುಗೆ ಮೂಲಕ ತಮ್ಮ ಪ್ರೀತಿಯನ್ನು ಹಂಚಿಕೊಳ್ಳಲಿದ್ದಾರೆ. ಇದರ ಜತೆಗೆ, ಈ ವಾರ ಅಡುಗೆ ಮನೆಯನ್ನು ತಿಂಡಿ ತಿನಿಸುಗಳಿಂದಲೇ ಅಲಂಕಾರ ಮಾಡಿರುವುದು ಮತ್ತೊಂದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net